ಶ್ರೀರಂಗಪಟ್ಟಣ | ಕಾರು-ಟಿಪ್ಪರ್ ಢಿಕ್ಕಿ: ವ್ಯಕ್ತಿ ಸಜೀವ ದಹನ
Update: 2025-10-31 01:23 IST
ಶ್ರೀರಂಗಪಟ್ಟಣ : ಕಾರು ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಕಾರು ಸಹಿತ ಸಜೀವ ದಹನವಾಗಿರುವ ಘಟನೆ ತಾಲೂಕಿನ ಪಾಲಹಳ್ಳಿ ಬಳಿ ಬುಧವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕು ಮುರುಕನಹಳ್ಳಿ ಗ್ರಾಮದ ಚಂದ್ರಶೇಖರ್(49) ಜೀವಂತ ದಹನವಾಗಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಟಿಪ್ಪರ್ ಚಾಲಕ ತಲೆಮರೆಸಿಕೊಂಡಿದ್ದಾನೆ.
ಚಂದ್ರಶೇಖರ್ ಕಾರಿನಲ್ಲಿ ಪಾಂಡವಪುರದಿಂದ ಕೆಆರ್‍ಎಸ್ ರಸ್ತೆ ಮೂಲಕ ಹುಣಸೂರಿಗೆ ತೆರಳುತ್ತಿದ್ದಾಗ, ಎದುರಿನಿಂದ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಕಾರು ಭಸ್ಮವಾಯಿತು ಎಂದು ಸಿಪಿಐ ಬಿ.ಜಿ.ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.