×
Ad

ಕಾವೇರಿ ಪ್ರದೇಶಕ್ಕೆ 2 ಸಾವಿರ ಕೊಟಿ ಅನುದಾನ : ಡಿ.ಕೆ.ಶಿವಕುಮಾರ್

Update: 2025-06-30 19:50 IST

ಮಂಡ್ಯ : ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಮಂಡ್ಯ ಜಿಲ್ಲೆಗೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 80 ವರ್ಷಗಳ ಹಳೆಯ ಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ ಎಂದರು.

ತಮಿಳುನಾಡಿಗೆ 9 ಟಿಎಂಸಿ ನೀರು ಹೋಗಬೇಕಿತ್ತು. ಹೆಚ್ಚು ಮಳೆ ಬಂದ ಕಾರಣಕ್ಕೆ 30 ಟಿಎಂಸಿಗಿಂತ ಹೆಚ್ಚು ನೀರು ಹರಿಸಲಾಗಿದೆ. ಕಳೆದ ವರ್ಷವೂ 177 ಟಿಎಂಸಿಗಿಂತ ಹೆಚ್ಚುವರಿಯಾಗಿ 305 ಟಿಎಂಸಿ ನೀರು ಹರಿಸಲಾಗಿತ್ತು. 2022-23ರಲ್ಲಿ 400 ಟಿಎಂಸಿ ಹೆಚ್ಚುವರಿ ನೀರು ಹರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಅಣೆಕಟ್ಟುಗಳ ಗೇಟ್‌ಗಳನ್ನು ದುರಸ್ತಿಗೊಳಿಸಲು ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದ್ದೇವೆ. ವರದಿ ತೆಗೆದುಕೊಂಡು ಹಂತ ಹಂತವಾಗಿ ಗೇಟ್‌ಗಳ ದುರಸ್ತಿಯನ್ನು ಮಾಡಲಾಗುವುದು. ಕಾವೇರಿ ಆರತಿಯಿಂದ ಮಂಡ್ಯ, ಮೈಸೂರು ಭಾಗದ 1,500 ಜನರಿಗೆ ಉದ್ಯೋಗ ದೊರಕುತ್ತದೆ. ಅಂತೆಯೇ ಬೃಂದಾವನ ಉದ್ಯಾನ ಅಭಿವೃದ್ಧಿ ಮಾಡಿದರೆ ಸ್ಥಳೀಯ 3 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ. ಇದಕ್ಕೆ ವಿರೋಧಿಸದೆ ಸಹಕರಿಸಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದರು.

ಕೆಆರ್‌ಎಸ್ ಬೃಂದಾವನ ಉದ್ಯಾನವನ್ನು ಅತ್ಯಂತ ಹೆಚ್ಚು ಆಕರ್ಷಣೀಯಗೊಳಿಸುವುದು ನಮ್ಮ ಉದ್ದೇಶ. ನಮ್ಮ ಮುಖ್ಯಮಂತ್ರಿಗಳು ಇದನ್ನು ಅತ್ಯುತ್ತಮ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಬಹುದು ಎಂದು ಆಹ್ವಾನ ಮಾಡಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News