×
Ad

6 ತಿಂಗಳಲ್ಲಿ 78,000 ಕೋಟಿ ಮೊತ್ತದ ಸವಲತ್ತು ವಿತರಣೆ: ಸಚಿವ ಎನ್.ಚಲುವರಾಯಸ್ವಾಮಿ

Update: 2023-11-25 23:00 IST

ಮಂಡ್ಯ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ವಿವಿಧ ಯೋಜನೆಗಳಡಿ 78,000 ಕೋಟಿ ರೂ. ವೆಚ್ಚದ ಸವಲತ್ತುಗಳನ್ನು ರಾಜ್ಯದ ಜನತೆಗೆ ವಿತರಣೆ ಮಾಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ತವರು ಕ್ಷೇತ್ರ ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯ ಆವರಣದಲ್ಲಿ ಶನಿವಾರ ಡಿಸಿಸಿ ಬ್ಯಾಂಕ್ ಆಯೋಜಿಸಿದ್ದ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರಗಳ ವಿತರಣೆ ಹಾಗೂ ಸರಕಾರದ ವಿವಿಧ ಯೋಜನೆಗಳ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

4 ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳಿಸಿ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ. ಐದು ವರ್ಷಗಳು ಈ ಯೋಜನೆಗಳು ಜಾರಿಯಲ್ಲಿರುತ್ತವೆ. ಇದನ್ನು ಸಹಿಸಿಕೊಳ್ಳಲಾಗದ ವಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಇದಕ್ಕೆ ಜನತೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಕರ್ನಾಟಕದಿಂದ 4 ಲಕ್ಷ ಕೋಟಿ ಹಣವನ್ನು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಕಟ್ಟುತ್ತಿದ್ದೇವೆ. ದೇಶದಲ್ಲಿ ಎರಡನೇ ತೆರಿಗೆ ಕಟ್ಟುವ ಸ್ಥಾನದಲ್ಲಿ ನಾವಿದ್ದೇವೆ. ಇದರಲ್ಲಿ ಕೇವಲ 50 ಸಾವಿರ ಕೋಟಿಯಷ್ಟೇ ರಾಜ್ಯಕ್ಕೆ ವಾಪಸ್ಸು ಬರುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ ಬರ ಪರಿಹಾರಕ್ಕಾಗಿ ಅಧ್ಯಯನ ವರದಿ ಸಲ್ಲಿಸಿರುವುದು ಕರ್ನಾಟಕ ಸರಕಾರ ಮಾತ್ರ. ಬೇರೆ ಯಾವುದೇ ರಾಜ್ಯ ಅಂಕಿಅಂಶಗಳನ್ನು ಅಧ್ಯಯನ ಮಾಡಿ ಸಲ್ಲಿಸಲು ಸಾಧ್ಯವಾಗಿಲ್ಲ. ಜೆಡಿಎಸ್-ಬಿಜೆಪಿ ನಾಯಕರಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಬರ ಅಧ್ಯಯನ ಮಾಡುವ ಪ್ರಯೋಜನವಿಲ್ಲದ ಕೆಲಸವನ್ನು ಬಿಟ್ಟು, ಪರಿಹಾರ ನೀಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಲಿ ಎಂದು ಅವರು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News