ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಮಂಡ್ಯ: ʼನಮ್ಮ ಸರಕಾರ ಬಿದ್ದೋಗತ್ತೆ ಅಂತ ಸೋತ ಗಿರಾಕಿಗಳು ಹೇಳುತ್ತಿದ್ದಾರೆ. ನಮ್ಮ ಸರಕಾರ ಐದು ವರ್ಷ ಬಂಡೆ ರೀತಿ ಇರತ್ತದೆ. 2028ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋತ ಗಿರಾಕಿಗಳು ಸರಕಾರರ ಬಿದ್ದು ಹೋಗುತ್ತದೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೂ, ಶಿವಕುಮಾರ್ ಅವರಿಗೂ ಸರಿ ಇಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಇಬ್ಬರೂ ಒಟ್ಟಾಗಿ, ಗಟ್ಟಿಯಾಗಿದ್ದೀವಿ. ನಮ್ಮ ಸರಕಾರವೂ ಐದು ವರ್ಷ ಗ್ಯಾರಂಟಿಯಾಗಿ ಗಟ್ಟಿಯಾಗಿ ಇರುತ್ತದೆ. 2028ರಲ್ಲೂ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುತ್ತಿರುವ ಬಿಜೆಪಿಯವರು ನಾಡಿನ ಜನರಿಗೆ ಉತ್ತರಿಸಬೇಕು. ದಿವಾಳಿ ಆಗಿದ್ದರೆ 25 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕೃಷಿ ಪ್ರಗತಿಗಾಗಿ ವರ್ಷಕ್ಕೆ 19000 ಸಾವಿರ ಕೋಟಿ ಪಂಪ್ ಸೆಟ್ ಸಬ್ಸಿಡಿಯನ್ನು ರೈತರಿಗೆ ಕೊಟ್ಟಿದ್ದೇವೆ. 92 ವರ್ಷಗಳ ಬಳಿಕ ಜೂನ್ ತಿಂಗಳಲ್ಲೇ ಭರ್ತಿ ಆಗಿರುವ ಕೆಆರ್‌ಎಸ್ ನಲ್ಲಿ ಸ್ಮಾರಕ ನಿರ್ಮಿಸಿ ಎಂದು ಕಾವೇರಿ ನಿಗಮದ ಎಂಡಿ ಅವರಿಗೆ ಸಿಎಂ ಸೂಚನೆ ನೀಡಿದರು.
ಕೃಷ್ಣರಾಜಸಾಗರದ ಒಟ್ಟು 124 ಅಡಿ ಸಾಮರ್ಥ್ಯದಲ್ಲಿ 120.90 ಅಡಿ ಭರ್ತಿ ಆಗಿದೆ. ಅಣೆಕಟ್ಟೆಗೆ 49 TMC ನೀರಿನ ಸಾಮರ್ಥ್ಯವಿದೆ. 193 ವರ್ಷಗಳಲ್ಲಿ 76 ಬಾರಿ ಭರ್ತಿಯಾಗಿದೆ. 2023-24 ರಲ್ಲಿ ಬರಗಾಲವಿತ್ತು. ಈ ಕಾರಣಕ್ಕೆ "ಸಿದ್ದರಾಮಯ್ಯ ಅವರ ಕಾಲುಗುಣ ಚನ್ನಾಗಿಲ್ಲ, ಕಾಂಗ್ರೆಸ್ ಸರಕಾರದ ಕಾಲುಗುಣ ಸರಿಯಿಲ್ಲ" ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಈಗ ಕಳೆದು ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿ ಆಗುತ್ತಿದೆ. ವಿರೋಧ ಪಕ್ಷಗಳು ಮೂಡಾತ್ಮರು ಈಗ ಏನು ಹೇಳುತ್ತಾರೆ ಎಂದು ಸಿಎಂ ಅಣಕಿಸಿದರು.
ನಾವು ಈ ಬಾರಿ ಕಾವೇರಿ ಅಭಿವೃದ್ಧಿ ನಿಗಮಕ್ಕೆ 3000 ಕೋಟಿ ಹಣ ಕೊಟ್ಟಿದ್ದೇವೆ. ಈಗ ಟೀಕಿಸುತ್ತಿರುವವರು ಅಧಿಕಾರದಲ್ಲಿದ್ದಾಗ ಕಾವೇರಿ ನಿಗಮಕ್ಕೆ ಹಣ ಕೊಡಲಿಲ್ಲ ಎಂದು ಟೀಕಿಸಿದರು.
ಸ್ವಂತ ಶಕ್ತಿಯಿಂದ ಸಾಧ್ಯವೇ ಇಲ್ಲ :
ಸುಳ್ಳು ಹೇಳುವ ಚಾಳಿಯಲ್ಲಿರುವ ಬಿಜೆಪಿಗೆ ರಾಜ್ಯದ ಜನ ಪೂರ್ಣ ಅಧಿಕಾರವನ್ನೇ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಎರಡು ಬಾರಿ ಅಧಿಕಾರಕ್ಕೆ ಬಂದರು. ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡೇ ಅಧಿಕಾರಕ್ಕೆ ಬರಬೇಕು. ಸ್ವಂತ ಶಕ್ತಿಯಿಂದ ಸಾಧ್ಯವೇ ಇಲ್ಲ ಎಂದರು.