ಧರ್ಮಸ್ಥಳ ವಿಚಾರ ರಾಜಕೀಯ ವಸ್ತುವಲ್ಲ : ಡಿ.ಕೆ.ಸುರೇಶ್
"ಸರಕಾರ ಶೀಘ್ರದಲ್ಲೇ ತನಿಖೆಯ ಸತ್ಯಾಂಶವನ್ನು ರಾಜ್ಯದ ಜನರ ಮುಂದಿಡಲಿದೆ"
ಡಿ.ಕೆ.ಸುರೇಶ್
ಬೆಂಗಳೂರು, ಆ.16 : “ಧರ್ಮಸ್ಥಳ ವಿಚಾರ ರಾಜಕೀಯ ವಸ್ತುವಲ್ಲ. ಇದು ಧರ್ಮ ಹಾಗೂ ನಂಬಿಕೆ ವಿಚಾರ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ತಿಳಿಸಿದರು
ಮಂಡ್ಯದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಶನಿವಾರ ಪ್ರತಿಕ್ರಿಯಿಸಿದರು.
ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ಯಾವ ಮಾಹಿತಿ ಇದೆ ಎಂದು ನನಗೆ ಗೊತ್ತಿಲ್ಲ. ಧರ್ಮಸ್ಥಳ ಪವಿತ್ರವಾದ ಧಾರ್ಮಿಕ ಕೇಂದ್ರ. ಧರ್ಮಸ್ಥಳದ ಮಂಜುನಾಥನನ್ನು ನಂಬಿ ಬಹಳಷ್ಟು ಭಕ್ತಾದಿಗಳು ಇದ್ದಾರೆ. ಈ ಕ್ಷೇತ್ರಕ್ಕೆ ಅಪಕೀರ್ತಿಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ. ಸಾರ್ವಜನಿಕವಾಗಿ ಬಂದ ಆರೋಪಗಳ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಲು ಸರಕಾರ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಯಾವ ಅಂಶ ಹೊರಬರಲಿದೆ ಎಂದು ಕಾದು ನೋಡಬೇಕು. ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಈಗಾಗಲೇ ನೀಡಿದ್ದಾರೆ” ಎಂದರು.
ಬಿಜೆಪಿ ಈ ಪ್ರಕರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ಶ್ರೀ ಮಂಜುನಾಥ ನಂಬಿದವರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ವಿಶ್ವಾಸ ನಮ್ಮೆಲ್ಲರಿಗೂ ಇದೆ. ಸರಕಾರ ಅತಿ ಶೀಘ್ರದಲ್ಲೇ ತನಿಖೆಯ ಸತ್ಯಾಂಶವನ್ನು ರಾಜ್ಯದ ಜನರ ಮುಂದಿಡಲಿದೆ” ಎಂದು ತಿಳಿಸಿದರು.