×
Ad

ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದ ಮೈಕ್ರೋ ಫೈನಾನ್ಸ್ | ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಸಾಲಮನ್ನಾ, ಪರಿಹಾರ ಪಾವತಿ

Update: 2025-01-31 00:00 IST

ಮಂಡ್ಯ : ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದ ಉಜ್ಜೀವನ್ ಬ್ಯಾಂಕ್ ಆಡಳಿತವು, ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮಳವಳ್ಳಿ ತಾಲೂಕು ಕೊನ್ನಾಪುರದ ಪ್ರೇಮಾ ಅವರ ಸಾಲಮನ್ನಾ ಮಾಡಿದೆ.

ಪ್ರೇಮಾ ಅವರ ಕುಟುಂಬ ಮಾಡಿದ್ದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿರುವುದಲ್ಲದೆ, ಜಪ್ತಿ ಮಾಡಿದ್ದ ಮನೆಯನ್ನು ಹಿಂದಿರುಗಿಸಲಾಗಿದೆ. ಇದಲ್ಲದೆ ಜಿಲ್ಲಾಡಳಿತವು ಬ್ಯಾಂಕ್ ಕಡೆಯಿಂದ ಮೃತ ಮಹಿಳೆ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರವನ್ನೂ ಕೊಡಿಸಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದ್ದು, ಸಮಾಜ ಕಲ್ಯಾಣ ಇಲಾಖೆಯೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು ಹಾಗೂ ಪರಿಹಾರ ನೀಡಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಕೋರ್ಟ್ ಆದೇಶ ತಂದು ಏಕಾಏಕಿ ಮನೆಗೆ ಬೀಗ ಜಡಿದು, ಅಗತ್ಯ ವಸ್ತುಗಳನ್ನು ತೆಗೆಕೊಳ್ಳಲು ಅವಕಾಶ ನೀಡದೆ, ಊಟ ತಿನ್ನಲು ಬಿಡದೆ, ಬಾಣಂತಿ, ಮಗುವನ್ನು ಹೊರ ದಬ್ಬಿರುವುದು ಅತ್ಯಂತ ಅಮಾನುಷ ವರ್ತನೆ. ತಕ್ಷಣ ಆರೋಪಿಗಳನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೊಂದ ಕುಟುಂಬಕ್ಕೆ ಸ್ಪಂದಿಸಬೇಕು ಹಾಗೂ ಪರಿಹಾರ ಕೊಡಿಸಲು ಮುಂದಾಗಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಸರಕಾರ ಗಂಭೀರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ತಾಕೀತು ಮಾಡಿದರು.

ಉಜ್ಜೀವನ್ ಬ್ಯಾಂಕ್‍ನಿಂದ 6 ಲಕ್ಷ ರೂ. ಸಾಲ ಪಡೆದಿದ್ದ ಪ್ರೇಮಾ ಕೆಲವು ತಿಂಗಳ ಕಂತುಗಳನ್ನು ಪಾವತಿಸಿಲ್ಲವಾದ್ದರಿಂದ ಫೈನಾನ್ಸ್ ಕಂಪನಿ ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಫೈನಾನ್ಸ್ ಸಂಸ್ಥೆವರು ಪ್ರೇಮಾ ಅವರ ಕುಟುಂಬವನ್ನು ಹೊರದಬ್ಬಿ ಮನೆಯನ್ನು ಸೀಝ್ ಮಾಡಿದ್ದರು. ಇದರಿಂದ ನೊಂದ ಪ್ರೇಮಾ ಬುಧವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News