×
Ad

ಮಂಡ್ಯ | ವಾಹನ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಮಗು ಮೃತ್ಯು; ಆಕ್ರೋಶಗೊಂಡ ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ

Update: 2025-05-26 17:46 IST

ಮಂಡ್ಯ : ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್‌ನಿಂದ ಬಿದ್ದಿದ್ದ ಮಗುವಿನ ಮೇಲೆ ಲಾರಿ ಹರಿದ ಪರಿಣಾಮ ಮೂರೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಸೋಮವಾರ ಮಂಡ್ಯ ನಗರದಲ್ಲಿ ನಡೆದಿದ್ದು, ಸಾರ್ವಜನಿಕರು ರಸ್ತೆತಡೆ ನಡೆಸಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯಲ್ಲಿ ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ಅಶೋಕ್-ವಾಣಿ ದಂಪತಿ ಪುತ್ರಿ ಹೃತೀಕ್ಷಾ ಸಾವನ್ನಪ್ಪಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮೂವರು ಎಎಸ್‌ಐಗಳನ್ನು ಅಮಾನತುಗೊಳಿಸಿದ್ದಾರೆ.

ನಾಯಿ ಕಡಿತದಿಂದ ಗಾಯಗೊಂಡಿದ್ದ ತಮ್ಮ ಮಗುವನ್ನು ಮಿಮ್ಸ್ ಜಿಲ್ಲಾಸ್ಪತ್ರೆಗೆ ಅಶೋಕ್-ವಾಣಿ ದಂಪತಿ ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದಾಗ ಸ್ವರ್ಣಸಂದ್ರ ಬಳಿ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸಿಲ್ಲವೆಂದು ತಡೆದು ತಪಾಸಣೆ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ತಕ್ಷಣ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ಕರೆತರಲಾಯಿತಾದರೂ ಮಗು ಆ ವೇಳೆಗೆ ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದರು. ಮಗು ಕಳೆದುಕೊಂಡ ದಂಪತಿ ರೋದನ ಮುಗಿಲು ಮುಟ್ಟಿತು. ಆ ವೇಳೆಗೆ ಸಾವಿರಾರು ಸಾರ್ವಜನಿಕರು ಆಗಮಿಸಿ ಪೊಲೀಸರ ವಿರುದ್ಧ ಪ್ರತಿಭಟಿಸಿದರು. 

ಈ ಸಂದರ್ಭ ಹೆದ್ದಾರಿಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಬಿಗಡಾಯಿಸತೊಡಗಿತು. ಸ್ಥಳಕ್ಕಾಗಮಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯನ್ನೂ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಮಗುವಿನ ಸಾವಿಗೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ವರ್ತನೆಯೇ ಕಾರಣ. ಆಸ್ಪತ್ರೆಗೆ ಕರೆತರುತ್ತಿದ್ದ ಮಗುವನ್ನೂ ತಡೆದು ಕಿರುಕುಳ ನೀಡಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ವಜಾಮಾಡಬೇಕು. ಮೃತ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಲ್ಲಿವರೆಗೂ ಕದಲುವುದಿಲ್ಲವೆಂದು ಸಾರ್ವಜನಿಕರು ಪಟ್ಟುಹಿಡಿದರು.

ಸಾರ್ವಜನಿಕರನ್ನು ಸಮಾಧಾನಪಡಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಕ್ಷಣ ಘಟನೆಗೆ ಸಂಬಂಧಿಸಿದಂತೆ ಮೂವರು ಎಎಸ್‌ಐಗಳನ್ನು ಸೇವೆಯಿಂದ ಅಮಾನತುಪಡಿಸಿರುವುದಾಗಿ ಮತ್ತು ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ನಂತರ, ಸಾರ್ವಜನಿಕರು ಪ್ರತಿಭಟನೆಯಿಂದ ಹಿಂದೆ ಸರಿದರು.

“ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಾಹನ ಪರಿಶೀಲನೆ ಮಾಡುತ್ತಿದ್ದರು. ಆ ವೇಳೆ ನಾಯಿ ಕಚ್ಚಿದ್ದರಿಂದ ಮಗುವಿಗೆ ಚಿಕಿತ್ಸೆ ಕೊಡಿಸಲು ದಂಪತಿ ಮಗು ಜತೆ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಟ್ರಾಫಿಕ್ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸುತ್ತಿರುವಾಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆಂದು ದಂಪತಿ ಹೇಳಿದ ಮೇಲೆ ಬಿಟ್ಟು ಕಳುಹಿಸುವ ಸಂದರ್ಭದಲ್ಲಿ ಇನ್ನೊಂದು ವಾಹನ ಬೈಕ್‌ಗೆ ತಾಕೀದಾಗ ಅಯತಪ್ಪಿ ಮಗು ದಾರಿಗೆ ಬಿದ್ದಾಗ ಹಿಂದಿನಿಂದ ಬರುತ್ತಿದ್ದ ಲಾರಿ ಮಗುವಿನ ಮೇಲೆ ಹರಿದು ಸಾವನ್ನಪ್ಪಿದೆ” ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಮೂವರು ಎಎಸ್‌ಐ ಅಮಾನತು :

ಘಟನೆ ಸಂಬಂಧ ವಾಹನ ತಪಾಸಣೆ ನಡೆಸುತ್ತಿದ್ದ ಎಎಸ್‌ಐಗಳಾದ ಜಯರಾಮು, ನಾಗರಾಜು ಹಾಗೂ ಗುರುದೇವ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಮೂವರು ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸದೆ ವಾಹನ ತಪಾಸಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವರನ್ನು ಅಮಾನತು ಪಡಿಸಿದ್ದೇನೆ. ಮುಂದೆ ಇವರ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ತಿಳಿಸಿದರು.

ಮಗುವಿನ ಪೋಷಕರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಪ್ರತಿಭಟನಾನಿರತ ಜನರ ಬೇಡಿಕೆಯಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಪರಿಹಾರ ದೊರಕಿಸಿಕೊಡಲಾಗುವುದು. ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ನಮ್ಮ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡುತ್ತೇನೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News