×
Ad

ಮಂಡ್ಯ | ಜಯಕುಮಾರ್ ನಿಗೂಢ ಸಾವು ಪ್ರಕರಣ; ಪೊಲೀಸರ ಅಮಾನತಿಗೆ ಒತ್ತಾಯಿಸಿ ಧರಣಿ

Update: 2025-05-30 23:05 IST

ಮಂಡ್ಯ : ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ವ್ಯಕ್ತಿ ಜಯಕುಮಾರ ನಿಗೂಢ ಸಾವಿನ ಪ್ರಕರಣದ ಸಂಬಂಧ ಪೊಲೀಸರ ಅಮಾನತಿಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ದಲಿತ ಸಮುದಾಯದ ಜಯಕುಮಾರ ಎಂಬ ಯುವಕನನ್ನು ಅದೇ ಗ್ರಾಮದ ಅನಿಲಕುಮಾರ ಎಂಬ ರೌಡಿಶೀಟರ್ ಕೊಲೆಮಾಡಿ ಹುಲ್ಲಿನ ಮೆದೆಗೆ ಹಾಕಿ ಸುಟ್ಟುಹಾಕಿದ್ದ ವಿಚಾರ ಅಲ್ಲಿನ ಗ್ರಾಮದ ಜನ ಮಾತನಾಡುತ್ತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ಈ ಸಂಬಂಧ ದೂರು ನೀಡಲು ಬಂದ ಜಯಕುಮಾರ ಪತ್ನಿ ಲಕ್ಷ್ಮಿ ಅವರ ದಿಕ್ಕು ತಪ್ಪಿಸಿ ಆತ್ಮಹತ್ಯೆ ಎಂದು ಕಂಪ್ಲೇಂಟ್ ಬರೆಸಿ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಕೆ.ಆರ್.ಪೇಟೆ ಡಿವೈಎಸ್ಪಿ, ಎಸ್ಸೈ ಮತ್ತು ಪೊಲೀಸರು ಯತ್ನ ನಡೆಸಿದ್ದಾರೆ ಎಂದು ಅವರು ದೂರಿದರು.

ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವ ಡಿವೈಎಸ್ಪಿ ಚಲುವರಾಜು, ಇನ್ಸ್ಪೆಕ್ಟರ್ ಆನಂದೇಗೌಡ, ಸಬ್‍ಇನ್ಸ್ಪೆಕ್ಟರ್ ಸುಬ್ಬಯ್ಯ ಮತ್ತು ಪೇದೆ ವ್ಯರಮುಡಿಗೌಡ ಅವರನ್ನು ಅಮಾನತುಪಡಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಸ್ವಾಭಿಮಾನಿ ಸಮಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ಸಂಘಟನೆ ರಾಜ್ಯಾಧ್ಯಕ್ಷ ಹನಕೆರೆ ಗಂಗರಾಜು, ನಾವು ದ್ರಾವಿಡರು ಸಂಘಟನೆಯ ಅಭಿಗೌಡ, ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ, ಸೋಮನಹಳ್ಳಿ ಅಂದಾನಿ, ನಾಗರಾಜು, ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ, ವಕೀಲ ಜೆ.ರಾಮಯ್ಯ, ಟಿ.ಡಿ.ನಾಗರಾಜು, ಚಿಕ್ಕಮಂಡ್ಯ ಮೋಹನ್‍ಕುಮಾರ್, ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News