ಮಂಡ್ಯ | ದಲಿತರು, ಸವರ್ಣೀಯರ ನಡುವೆ ಸಂಘರ್ಷ; ಎಲೆಚಾಕನಹಳ್ಳಿಗೆ ಪೊಲೀಸ್ ಬಂದೋಬಸ್ತ್
ಮಂಡ್ಯ : ದೇವಾಲಯ ಪ್ರವೇಶ ಕುರಿತಂತೆ ದಲಿತರು ಮತ್ತು ಸವರ್ಣೀಯರ ನಡುವೆ ಸಂಘರ್ಷ ಉಂಟಾಗಿದ್ದು, ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇತ್ತೀಚೆಗೆ ಗ್ರಾಮದ ಮಾರಮ್ಮ ದೇವಾಲಯದಲ್ಲಿ ದಲಿತರು ಪೂಜೆ ಸಲ್ಲಿಸಿದ್ದು, ದೇವಾಲಯ ಪ್ರವೇಶಕ್ಕೆ ಪಟ್ಟುಹಿಡಿದಿದ್ದಾರೆ. ಆದರೆ, ಗ್ರಾಮದ ಸವರ್ಣೀಯರು ದಲಿತರ ದೇವಾಲಯ ಪ್ರವೇಶಕ್ಕೆ ವಿರೋಧ ಒಡ್ಡಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಅಧಿಕಾರಿಗಳು ದೇವಾಲಯಕ್ಕೆ ಬೀಗ ಹಾಕಿದ್ದಾರೆ.
ಗ್ರಾಮದಲ್ಲಿ ತಲೆದೋರಿರುವ ಪ್ರಕ್ಷುಬ್ಧ ಸ್ಥಿತಿಯನ್ನು ಶಮನಗೊಳಿಸುವ ದೃಷ್ಟಿಯಿಂದ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಶಾಂತಿಸಭೆ ಆಯೋಜಿಸಿದ್ದರು. ಆದರೆ, ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಶಾಂತಿಸಭೆ ಅರ್ಧಕ್ಕೆ ಮೊಟಕುಗೊಂಡಿದೆ ಎಂದು ವರದಿಯಾಗಿದೆ.
ಈ ನಡುವೆ ಜೂ.3ರಂದು ತಡರಾತ್ರಿ ಸವರ್ಣೀಯರು ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ್ನು ಜಖಂಗೊಳಿಸಿದ್ದಾರೆಂದು ದಲಿತ ಯುವಕ ವಿಜಯಕುಮಾರ್ ದೂರು ನೀಡಿದ್ದು, ಶಿವಲಿಂಗ ಅಲಿಯಾಸ್ ಪಾಪು, ದಿನೇಶ್, ಜನಾರ್ದನ, ಚೇತನ್‌ಕುಮಾರ್, ರೂಪೇಶ, ಮನು ಸೇರಿದಂತೆ ಇತರರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.