ʼಗೋ ಬ್ಯಾಕ್ ಗರ್ವನರ್ʼ ಅನ್ನೋದು ರಾಜಕೀಯ ನಾಟಕ: ಎಚ್.ಡಿ. ಕುಮಾರಸ್ವಾಮಿ
ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎರಡೂ ಮುಕ್ಕಾಲು ವರ್ಷದಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರಕಾರ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು.
ಸಂಘರ್ಷಗಳಿಂದ ಸಮಸ್ಯೆ ಬಗೆಹರಿವುದಿಲ್ಲ. ರಾಜ್ಯ ಸರಕಾರ ಕೇಂದ್ರದ ಜತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗಳಾಗಬೇಕು. ಅದನ್ನು ಬಿಟ್ಟು ಕೇವಲ ಹೈಡ್ರಾಮಾ ನಡೆಸಿದರೆ ಏನೂ ಆಗುವುದಿಲ್ಲ ಎಂದು ಅವರು ಸಲಹೆ ನೀಡಿದರು.
ಕರ್ನಾಟಕ ರಾಜ್ಯವೇ ನನ್ನ ರಾಜಕೀಯ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ. ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋದವರು ಜೆಡಿಎಸ್ ಕಥೆ ಮುಗಿಯಿತು ಎಂದರು. ಆದರೆ, ನಮ್ಮ ಪಕ್ಷ ಯಾವ ರೀತಿಯಲ್ಲಿ ಗಟ್ಟಿಯಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ನಮ್ಮ ಪಕ್ಷ ಮುಗಿಸಬೇಕು ಎನ್ನುವುದೇ ಅರಿಗೆ ಚಿಂತೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಮಂಡ್ಯ ಜಿಲ್ಲೆಗೆ ಏನು ಮಾಡಬೇಕೆಂಬುದು ನನಗೆ ಗೊತ್ತಿದ್ದು, ಬೇರೆಯವರ ಸರ್ಟಿಫಿಕೇಟ್ ಬೇಕಿಲ್ಲ. ಮಂಡ್ಯದಲ್ಲಿ ಕೇಂದ್ರ ಸರಕಾರಿ ಸ್ವಾಮ್ಯದ ಆಟೋಮ್ಯಾಟಿವ್ ರಿಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ ಸಂಸ್ಥೆ ಸ್ಥಾಪಿಸಲು ಜಾಗ ಕೊಡುವಂತೆ ನನ್ನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಅನವಶ್ಯಕ ರಾಜಕೀಯ ಅಗತ್ಯ ಇಲ್ಲ. ಜಿಲ್ಲೆಯ ಅಭಿವೃದ್ಧಿ ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಜೆಡಿಎಸ್‍ನ ಹಲವು ಮುಖಂಡರು ಉಪಸ್ಥಿತರಿದ್ದರು.
“ಕಾಂಗ್ರೆಸ್‍ನ ಕೆಟ್ಟ ಆಡಳಿತವನ್ನು ಕಿತ್ತೊಗೆಯಲು ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ನಾವು ಮೈತ್ರಿ ಬಗ್ಗೆ ತೀರ್ಮಾನ ಮಾಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಪೈಪೋಟಿ ಇರುವುದು ಸಹಜ. ಎಲ್ಲಾ ಪಕ್ಷಗಳಲ್ಲಿ ಅದು ಇರುತ್ತದೆ. ಕಾರ್ಯಕರ್ತರು ಸ್ಥಾನಮಾನಕ್ಕಾಗಿ ಚರ್ಚೆ ಮಾಡುತ್ತಾರೆ. ಆ ಕುರಿತು ಅಂತಿಮವಾಗಿ ನಾವು ತೀರ್ಮಾನ ಮಾಡುತ್ತೇವೆ.”
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ