ಮಂಡ್ಯ | ಕಂಬಕ್ಕೆ ಬೈಕ್ ಢಿಕ್ಕಿ; ಇಬ್ಬರು ಯುವಕರು ಮೃತ್ಯು
ಮಂಡ್ಯ, ಸೆ.26: ರಸ್ತೆ ಅಪಘಾತದಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮುಂಜಾನೆ ನಗರದ ಮಹಿಳಾ ಸರಕಾರಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ನಡೆದಿರುವುದು ವರದಿಯಾಗಿದೆ.
ನಗರದ ಉದಯಗಿರಿ ಬಡಾವಣೆಯ ಬಾಲವೇಂದ್ರನ್ ಸೈಮನ್ ಅವರ ಪುತ್ರ ಡ್ಯಾನಿಯಲ್(23) ಹಾಗೂ ಸಿದ್ಧಾರ್ಥನಗರದ ಬಡಾವಣೆಯ ಸ್ನೇಹಾಲಯ ರಸ್ತೆ ನಿವಾಸಿ ಅಲೆಕ್ಸ್(23) ಸಾವನ್ನಪ್ಪಿದವರು.
ಡ್ಯಾನಿಯಲ್ ಮತ್ತು ಅಲೆಕ್ಸ್ ಇಬ್ಬರೂ ಬುಲೆಟ್ ಬೈಕ್‍ನಲ್ಲಿ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಮಹಿಳಾ ಸರಕಾರಿ ಕಾಲೇಜು ಮುಂಭಾಗದಲ್ಲಿರುವ ಪಾದಾಚಾರಿ ಮೇಲ್ಸೇತುವೆಯ ಕಂಬಗಳಿಗೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು. ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಮಿಮ್ಸ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಶವಪರೀಕ್ಷೆ ನಡೆಸಿದ ನಂತರ, ವಾರಸುದಾರರಿಗೆ ಮೃತದೇಹಗಳನ್ನು ನೀಡಲಾಯಿತು.