×
Ad

ಮಂಡ್ಯ: ವೈದ್ಯರ ನಿರ್ಲಕ್ಷ್ಯ ಆರೋಪ; ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಬಾಲಕಿ ಮೃತ್ಯು

Update: 2025-06-01 14:57 IST

ಆಶ್ಪತ್ರೆಯ ಹೊರಗೆ  ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು

ಮಂಡ್ಯ: ಟ್ರಾಫಿಕ್ ಪೊಲೀಸರ ನಡವಳಿಕೆಯಿಂದ ಮೂರೂವರೆ ವರ್ಷದ ಮಗು ಹೃತೀಕ್ಷಾ ಮೃತಪಟ್ಟ ಸುದ್ದಿ ಹಸಿಯಾಗಿರುವಾಗಲೇ ಶಸ್ತ್ರ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಪಾದದ ಮೂಳೆ ಮುರಿತ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಳವಳ್ಳಿ ತಾಲೂಕು ನಲ್ಲೂರು ಗ್ರಾಮದ ನಿಂಗರಾಜು, ರಂಜಿತಾ ದಂಪತಿಯ ಪುತ್ರಿ  ಸಾನ್ವಿ (7) ಮೃತ ಬಾಲಕಿ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಪೋಷಕರು, ಗ್ರಾಮಸ್ಥರು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಿಮ್ಸ್ ಆಸ್ಪತ್ರೆ ಎದುರು ರವಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಟೈಲ್ಸ್ ಬಿದ್ದು ಸಾನ್ವಿಯ ಪಾದದ ಮೂಳೆ ಮುರಿದಿದ್ದು, ಮೇ 29ರಂದು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ತಡರಾತ್ರಿ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ನಂತರ ಬಾಲಕಿ ಆರೋಗ್ಯವಾಗಿ ಇದ್ದಳು ಎಂದು ಪೋಷಕರು ತಿಳಿಸಿದರು.

ಆದರೆ, ಮೇ 31ರಂದು ತಡರಾತ್ರಿ ಬಾಲಕಿ ಮೃತಪಟ್ಟಿದ್ದು, ವೈದ್ಯರು ನೀಡಿದ್ದ ಚುಚ್ಚುಮದ್ದಿನಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಬಾಲಕಿಯ ಪೋಷಕರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವೈದ್ಯರ ಅಮಾನತಿಗೆ ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಬದಲಿಗೆ ವಿದ್ಯಾರ್ಥಿಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ಸಾನ್ವಿಗೂ ವೈದ್ಯ ವಿದ್ಯಾರ್ಥಿಗಳೇ ಚಿಕಿತ್ಸೆ ನೀಡಿದ್ದರು. ಹಾಗಾಗಿ ಸಾನ್ವಿ ಸಾವು ಸಂಭವಿಸಿದೆ ಎಂದು ಪೋಷಕರು ಮತ್ತು ಪ್ರತಿಭಟನಾಕಾರರು ಆಪಾದಿಸಿದರು.

ಸಂಬಂಧಿಸಿದ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲು ಮಾಡದ ಹೊರತು ತಾವು ಕದಲುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಮಕ್ಕಳ ವಿಭಾಗದ ವೈದ್ಯರ ವಿರುದ್ಧ ದೂರು ದಾಖಲಾಯಿತು. ಶವಪರೀಕ್ಷೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮಗುವಿನ ಪಾದದ ಮೂಳೆ ಮುರಿತಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ತೀವ್ರ ನಿಗಾಘಟಕದಲ್ಲಿ ಇಡುವ ಬದಲು ಜನರಲ್ ವಾರ್ಡ್ ನಲ್ಲಿ ಇರಿಸಿ ನಿರ್ಲಕ್ಷ್ಯವಹಿಸಲಾಗಿದೆ. ಮೇಲ್ನೋಟಕ್ಕೆ ವೈದ್ಯರ ನಿರ್ಲಕ್ಷ್ಯ ಕಂಡುಬರುತ್ತಿದೆ. ಈ ಬಗ್ಗೆ ತನಿಖೆಯಾಗಿ ನಿರ್ಲಕ್ಷ್ಯವಹಿಸಿದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮವಾಗಬೇಕು. ಮತ್ತೆ ಇಂತಹ ಪ್ರಕರಣ ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಒತ್ತಾಯಿಸಿದರು.

ವಿಪರ್ಯಾಸವೆಂದರೆ ನಿಂಗರಾಜು, ರಂಜಿತಾ ದಂಪತಿಯ ಮತ್ತೊಂದು ಹೆಣ್ಣು ಮಗು ಮೂರು ತಿಂಗಳ ಹಿಂದೆ ಹೆರಿಗೆಯಾದ ಒಂದು ದಿನದಲ್ಲೇ ಮೃತಪಟ್ಟಿತ್ತು. ಇದೀಗ ಇದ್ದ ಮಗುವನ್ನೂ ಕಳೆದುಕೊಂಡಿರುವ ದಂಪತಿಯ ಗೋಳಾಟ ಮುಗಿಲು ಮುಟ್ಟಿತ್ತು.




 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News