ಪುಸ್ತಕ ಭಂಡಾರ ಸೃಷ್ಟಿಸಿದ ಮಂಡ್ಯದ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ
ಮಂಡ್ಯ: ಪುಸ್ತಕ ಪ್ರೇಮಿ, ಲಕ್ಷಾಂತರ ಪುಸ್ತಕಗಳ ಸಂಗ್ರಹಕಾರ ಜಿಲ್ಲೆಯ ಪುಸ್ತಕದ ಮನೆ ಅಂಕೇಗೌಡ ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾರತ ಸರಕಾರ ದೇಶದ 45 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ್ದು, ಇವರಲ್ಲಿ ಮಂಡ್ಯದ ಪುಸ್ತಕದ ಮನೆ ಅಂಕೇಗೌಡರು ಸೇರಿದ್ದಾರೆ. ಇವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
ಅಂಕೇಗೌಡರ ಪರಿಚಯ:
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿ(ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ) 'ಪುಸ್ತಕದ ಮನೆ'ಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿರುವ ಎಂ.ಅಂಕೇಗೌಡರು, ಸುಮಾರು ನಾಲ್ಕು ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇದಲ್ಲದೆ ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹ ಈ ಪುಸ್ತಕ ಮನೆಯಲ್ಲಿ ಇವೆ.
ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಅಂಕೇಗೌಡ, ತನ್ನ ಸಂಬಳದ ಬಹುಪಾಲು ಪುಸ್ತಕಗಳಿಗೇ ಮೀಸಲಿಟ್ಟರು. ಉದ್ಯಮಿ ಹರಿಖೋಡೆ ಅವರು ನಿರ್ಮಿಸಿಕೊಟ್ಟಿರುವ ಈ ಪುಸ್ತಕದ ಮನೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದೆ.
ಎಂ.ಅಂಕೇಗೌಡರು ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಜನಿಸಿದರು. ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ.ಪದವಿ ಪಡೆದಿದ್ದಾರೆ. ಬಳಿಕ, ಮೈಸೂರು ವಿವಿಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ (ಈಗಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ) ಕನ್ನಡ ಎಂ.ಎ. ಪದವಿಯನ್ನೂ ಗಳಿಸಿದ್ದಾರೆ.
ಅಂಕೇಗೌಡ ಅವರು ಪುಸ್ತಕ ಪ್ರೀತಿಗೆ ಕಾರಣವಾದದ್ದು ಅವರ ಶಾಲಾ ದಿನಗಳು. ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯಲು ಅನುಮತಿ ಸಿಗದಿದ್ದಾಗ, ಅಂಕೇಗೌಡರು ಸ್ವತಃ ಪುಸ್ತಕಗಳನ್ನು ಸಂಗ್ರಹಿಸಲು ಮತ್ತು ಖರೀದಿಸಲು ಮುಂದಾದರು. ಈ ಚಿಕ್ಕ ಆಲೋಚನೆಯೇ ಇಂದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯಗಳಲ್ಲಿ ಒಂದಾಗಿ ಬೆಳೆದಿದೆ. ಹರಳಹಳ್ಳಿಯಲ್ಲಿನ ಪುಸ್ತಕ ಮನೆಗೆ ಯಾರೂ ಬೇಕಾದರೂ ಹೋಗಿ ಯಾವುದೇ ವಿಷಯದ ಪುಸ್ತಕಗಳನ್ನು ನೋಡಬಹುದು ಮತ್ತು ಓದಬಹುದಾಗಿದೆ.
ಜಿಲ್ಲಾಧಿಕಾರಿ ಅಭಿನಂದನೆ:
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಂಕೇಗೌಡರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅಭಿನಂದನೆ ಸಲ್ಲಿಸಿದ್ದಾರೆ.