ಮಂಡ್ಯ : ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ; ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಿಷೇಧಾಜ್ಞೆ ಜಾರಿ
ಮಂಡ್ಯ: ಗಣೇಶಮೂರ್ತಿ ವಿಜರ್ಸನೆ ವೇಳೆ ರವಿವಾರ ರಾತ್ರಿ ನಡೆದ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ಹಿಂದುತ್ವ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಸೋಮವಾರ ಬೆಳಗ್ಗೆ 6 ರಿಂದ ಮಂಗಳವಾರ ಮಧ್ಯಾಹ್ನ 12 ವರೆಗೆ ಮದ್ದೂರು ಪಟ್ಟಣದಾದ್ಯಂತ ಕಲಂ 163ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅದೇಶಿಸಿದ್ದರೂ, ಇದರ ನಡುವೆ ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳ ನೂರಾರು ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತ ವ್ಯಕ್ತಿಯೊಬ್ಬ, ಹೂವಿನ ಸರ್ಕಲ್ ಬಳಿ ಕಂಬದಲ್ಲಿ ಹಾರಾಡುತ್ತಿದ್ದ ಹಸಿರು ಬಾವುಟ ಕಿತ್ತು ಕೇಸರಿ ಬಾವುಟ ಹಾರಿಸಿದ್ದಾನೆ.
ಉದ್ರಿಕ್ತ ಪ್ರತಿಭಟನಾಕಾರರನ್ನು ಪೊಲೀಸರು ಲಾಟಿಚಾರ್ಜ್ ಮಾಡಿ ಚದುರಿಸಿದರು. ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಏನಿದು ಘಟನೆ :
ರವಿವಾರ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಘಟನೆ ನಡೆದಿದ್ದು, ಮದ್ದೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ನಾಲ್ವರು ಪೊಲೀಸರು ಸೇರಿದಂತೆ ಒಟ್ಟು 8 ಮಂದಿಗೆ ಗಾಯಗಳಾಗಿದ್ದು, ಅವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದ 5ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನಡುವೆ ಸಾಗುತ್ತಿತ್ತು.
ರಾಮ್ ರಹೀಂ ನಗರದ ಮಸೀದಿ ಬಳಿ ಹೋದಾಗ ರಾತ್ರಿ 8ರ ಸುಮಾರಿಗೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ. ಪ್ರತಿಯಾಗಿ ಮಸೀದಿ ಮೇಲೂ ಕಲ್ಲು ತೂರಾಟವಾಯಿತು ಎನ್ನಲಾಗಿದೆ. ಆಗ ಘರ್ಷಣೆ ತೀವ್ರ ಸ್ವರೂಪ ಪಡೆಯಿತು.
ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.