ಮಂಡ್ಯ | ತನ್ನ ಜಮೀನಿಗಾಗಿ ಹೋರಾಟ ನಡೆಸುತ್ತಿದ್ದ ದಲಿತ ವ್ಯಕ್ತಿ ನಿಗೂಢ ಸಾವು
ಮಂಡ್ಯ: ತನ್ನ ಜಮೀನಿಗಾಗಿ ಹೋರಾಟ ನಡೆಸುತ್ತಿದ್ದ ದಲಿತ ವ್ಯಕ್ತಿ ನಿಗೂಢವಾಗಿ ಸಾವನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಸಾವಿಗೀಡಾದ ವ್ಯಕ್ತಿ ಗ್ರಾಮದ ಜಯಕುಮಾರ್. ಇವರ ಮೃತದೇಹ ಹೊತ್ತಿ ಉರಿಯುತ್ತಿದ್ದ ಹುಲ್ಲಿನ ಬಣವೆಯಲ್ಲಿ ಪತ್ತೆಯಾಗಿದೆ. ತನ್ನ ಪತಿಯನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿ ಜಯಕುಮಾರ್ ಅವರ ಪತ್ನಿ ಲಕ್ಷ್ಮಿ, ಅನಿಲ್ ಕುಮಾರ್ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆ ಶನಿವಾರ ನಡೆದಿದ್ದು, ಇದರ ಹಿಂದಿನ ದಿನ ಸಾವಿಗೀಡಾದ ಜಯಕುಮಾರ್ ಮತ್ತು ಅನಿಲ್ ಕುಮಾರ್ ನಡುವೆ ಜಗಳ ನಡೆದಿದ್ದು, ಈ ಸಂಬಂಧ ಜಯಕುಮಾರ್ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.
ಜಮೀನು ವಿಚಾರವಾಗಿ ದಲಿತ ಜಯಕುಮಾರ್ ಮತ್ತು ಅನಿಲ್ ಕುಮರ್ ನಡವೆ ವ್ಯಾಜ್ಯವಿತ್ತು. ಸದರಿ ಜಾಗದಲ್ಲಿ ಅನಿಲ್ ಕುಮಾರ್ ಹುಲ್ಲಿನ ಬಣವೆ ಹಾಕಿಕೊಂಡಿದ್ದ. ಈ ವಿಚಾರವಾಗಿ ನ್ಯಾಯಾಲಯವು ಜಮೀನು ಜಯಕುಮಾರ್ ಅವರಿಗೆ ಸೇರಿದ್ದು ಎಂದು ತೀರ್ಪು ನೀಡಿತ್ತು ಎಂದು ತಿಳಿದು ಬಂದಿದೆ.
ಆದರೂ, ಸದರಿ ಭೂಮಿಯನ್ನು ಬಿಟ್ಟುಕೊಡಲು ಅನಿಲ್ ಕುಮಾರ್ ನಿರಾಕರಿಸಿದ್ದು, ಊರಿನ ಮುಖಂಡರು ರಾಜಿ ಪಂಚಾಯತಿ ನಡೆಸಿದ್ದಾರೆ. ಆದರೂ, ಅನಿಲ್ ಕುಮಾರ್ ಭೂಮಿ ಬಿಟ್ಟುಕೊಡಲು ಒಪ್ಪದಿದ್ದ ಹಿನ್ನೆಲೆ ಜಯಕುಮಾರ್ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಶನಿವಾರ ಹುಲ್ಲಿನ ಬಣವೆ ಹೊತ್ತಿ ಉರಿದಿದ್ದು, ಅದರಲ್ಲಿ ಜಯಕುಮಾರ್ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಜಯಕುಮಾರ್ ಪತ್ನಿ ಲಕ್ಷ್ಮಿ, ಅನಿಲ್ ಕುಮಾರ್ ತನ್ನ ಪತಿಯನ್ನು ಕೊಲೆಮಾಡಿದ್ದಾರೆ ಎಂದು ಆರೋಪಿಸಿ ಕೆ.ಅರ್.ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪೇಟೆ ಪೊಲೀಸರು ಅನಿಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿ ಅನಿಲ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.
‘ಕತ್ತರಘಟ್ಟದ ಜಯಕುಮಾರ್ ಮೃತದೇಹ ಪತ್ತೆಯಾದ ಹಿಂದಿನ ದಿನ ಜಯಕುಮಾರ್ ತನ್ನ ಮೇಲೆ ಅನಿಲ್‍ಕುಮಾರ್ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಈ ಸಂಬಂಧ ಆರೋಪಿ ಅನಿಲ್ ಕುಮಾರ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿ ಪತ್ತೆಗೆ ಕ್ರಮವಹಿಸಿದ್ದೇವೆ.’
-ಆನಂದ್‍ಗೌಡ, ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್