ಮಂಡ್ಯ | ʼಪಾಠ ಪೂರ್ಣಗೊಳಿಸಿಲ್ಲʼ ಎಂದು ಆರೋಪಿಸಿ ಪರೀಕ್ಷೆ ಬಹಿಷ್ಕಾರ ; ಶಿಕ್ಷಕರ ವಿರುದ್ಧ ಮಕ್ಕಳ ಜತೆ ಪೋಷಕರ ಆಕ್ರೋಶ
ಮಂಡ್ಯ: ತಾಲೂಕಿನ ಕೀಲಾರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಪೂರ್ಣವಾಗಿ ಮುಗಿಸದೇ ಪರೀಕ್ಷೆ ಬರೆಸುತ್ತಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಸೋಮವಾರ ಶಾಲೆಯಿಂದ ಹೊರಗುಳಿದ ಬಗ್ಗೆ ವರದಿಯಾಗಿದೆ.
ಪರೀಕ್ಷೆಯನ್ನು ಬಹಿಷ್ಕರಿಸಿ ಶಾಲೆಯ ಆವರಣದ ರಂಗಮಂದಿರದಲ್ಲಿ ವಿದ್ಯಾರ್ಥಿಗಳ ಜತೆ ಧರಣಿ ನಡೆಸಿದ ಪೋಷಕರು, ಮೊದಲು ಪರಿಪೂರ್ಣವಾಗಿ ಪಾಠ ಮುಗಿಸಿ ಆನಂತರ ಪರೀಕ್ಷೆ ಬರೆಸಿ ಎಂದು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಎಸ್‍ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಶಾಲೆ ಉಳಿವಿಗೆ ಏನೆಲ್ಲಾ ಬೇಕೋ ಆ ವ್ಯವಸ್ಥೆಯನ್ನು ಮಾಡಿದ್ದೇವೆ. ಇಲ್ಲಿಯತನಕ ಸುಮಾರು 20 ಲಕ್ಷ ರೂ.ಗಿಂತ ಹೆಚ್ಚು ಸೌಲಭ್ಯಗಳನ್ನು ನೀಡಿದ್ದೇವೆ. ನಿತ್ಯ ಸಚಿವರ ತವರೂರು ಎಂಬ ಕಾರಣಕ್ಕಾಗಿ ನಮ್ಮೂರಿನ ಹೆಸರು ಉಳಿವಿಗೆ ಸಹಕರಿಸಿದ್ದೇವೆ. ಮುಂದೆ ಅಂತಿಮ ಪರೀಕ್ಷೆ ಇದ್ದು, 1 ರಿಂದ 8ರವರೆಗೆ ಕಲಿಕಾ ಬಲವರ್ಧನೆ, ಗಣಿತ, ಕನ್ನಡ ಪುಸ್ತಕಗಳ ಪಾಠ ನಡೆದಿಲ್ಲ. ಇದನ್ನು ಬಿಇಒ ಬಳಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಈ ಶಾಲೆಯಲ್ಲಿ ಏಳು ಜನ ಶಿಕ್ಷಕರು ಹಾಗೂ ನಿಯೋಜನೆ ಶಿಕ್ಷಕರು ಒಬ್ಬರಿದ್ದಾರೆ. ಒಟ್ಟು ಎಂಟು ಜನ ಶಿಕ್ಷಕರಿದ್ದಾರೆ. ಅಕಾಡೆಮಿಕ್ ವರ್ಷ ಮುಗಿಯುವವರೆಗೂ ಯಾವುದೇ ತರಬೇತಿ ಬೇಡ ಎಂದು ಹೇಳಿದ್ದೇವೆ. ಈಗ ಮಕ್ಕಳು ಹೊರಗಡೆ ಕುಳಿತು ಮೊದಲು ಪಾಠ ಮಾಡಿ ಎಂದು ಕೇಳುತ್ತಿದ್ದಾರೆ. ಇಲ್ಲಿವರೆಗೆ ಯಾವ ಅಧಿಕಾರಿಗಳು ಸಹ ಈ ಶಾಲೆಯ ಬಳಿ ಬಂದಿಲ್ಲ. ಹೀಗಾದರೇ ಎಲ್ಲಿ ಸರಕಾರಿ ಶಾಲೆ ಉಳಿಯುತ್ತದೆ? ಎಂದು ಅವರು ಪ್ರಶ್ನಿಸಿದರು.
ಪೋಷಕರೊಬ್ಬರು ಮಾತನಾಡಿ, ಸರಕಾರಿ ಶಾಲೆಯ ಶಿಕ್ಷಕರಿಗೆ ಅವರ ಮಕ್ಕಳ ಕ್ಷೇಮವೇ ಮುಖ್ಯ. ಅವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಹಾಗಾಗಿ ನಮ್ಮ ಸರಕಾರ ಶಾಲೆಯ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಶಾಲೆಯಲ್ಲಿ ಮೊಟ್ಟೆ, ಊಟ ಕೊಟ್ಟರೆ ಸಾಕೇ? ಪಾಠಗಳು ಸಹ ಪರಿಪೂರ್ಣವಾಗಿಯಾದರೂ ಮಾಡಬೇಕಲ್ಲವೇ? ಬಿಇಒ ಅವರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನಕ್ಕೆ ಬಂದಿಲ್ಲ. ಮೊದಲು ಸಮಸ್ಯೆ ಬಗೆಹರಿಸಿ ನಂತರ ಮಕ್ಕಳಿಗೆ ಪರೀಕ್ಷೆ ಮಾಡಲಿ ಎಂದು ಆಗ್ರಹಿಸಿದರು.