ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ

Update: 2024-04-14 17:35 GMT

ಮಂಡ್ಯ : ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಲ್ಪ ದಾರಿತಪ್ಪಿದ್ದಾರೆ ಎಂಬ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ನೇತೃತ್ವದಲ್ಲಿ ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಸದಸ್ಯರು, ʼಕುಮಾರಸ್ವಾಮಿ ಗೋ ಬ್ಯಾಕ್ʼ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ವಿರುದ್ಧ ಘೋಷಣೆ ಧಿಕ್ಕಾರ ಕೂಗಿದ ಮಹಿಳೆಯರು ವೃತ್ತದಲ್ಲಿ ಧರಣಿ ಕುಳಿತ ಪರಿಣಾಮ ಮಾರ್ಗದ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯವಾಯಿತು.

ಪುಷ್ಪ ಅಮರನಾಥ್ ಮಾತನಾಡಿ, ಈಗ ಹೆಣ್ಣು ಮಕ್ಕಳ ಸ್ವಾಭಿಮಾನದ ಪ್ರಶ್ನೆ ಎದ್ದಿದೆ. ರಾಜ್ಯದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂದು ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಇದನ್ನು ಸಹಿಸಲಾರದೆ ಕುಮಾರಸ್ವಾಮಿ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಹೆಣ್ಣು ಮಕ್ಕಳು ಅಭಿವೃದ್ದಿ ಆಗುವುದು ಕುಮಾರಸ್ವಾಮಿ ಅವರಿಗೆ ಬೇಕಿಲ್ಲವೇ. ಕುಮಾರಸ್ವಾಮಿ ಅವರಿಗೆ ಇದು ಶೋಭೆ ಅಲ್ಲ. ಈ ಹಿಂದೆ ಸುಮಲತಾ ಅಂಬರೀಷ್ ಅವರ ಬಗ್ಗೆ ಪ್ರಶ್ನೆ ಮಾಡಿದ ಬಡ ಮಹಿಳೆ ಬಗ್ಗೆ ಹೀಗೆಯೇ ಮಾತನಾಡಿದ್ದರು. ಮಂಡ್ಯದಲ್ಲಿ ಓಟು ಕೇಳಲು ಬರುತ್ತಿರುವ ಕುಮಾರಸ್ವಾಮಿ ಅವರಿಗೆ ಮಂಡ್ಯದ ಸ್ವಾಭಿಮಾನಿ ಮಹಿಳೆಯರು ಉತ್ತರ ಕೊಡಲಿದ್ದಾರೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹೋರಾಟವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುತ್ತೇವೆ. ಚುನಾವಣಾ ಆಯೋಗ, ಮಹಿಳಾ ಆಯೋಗಕ್ಕೂ ದೂರು ಕೊಡುತ್ತೇವೆ. ಕುಮಾರಸ್ವಾಮಿ ಅವರ ಹೇಳಿಕೆಗೆ ಮೈತ್ರಿ ಪಾಲುದಾರರಾದ ಪ್ರದಾನಿ ನರೇಂದ್ರ ಮೋದಿ ಅವರು ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಮಾತನಾಡಿ, ಕಳೆದ ಬಾರಿ ಸುಮಲತಾ ಬಗ್ಗೆ ಮಾತನಾಡಿ ಸೋತಿದ್ದಾರೆ. ಈ ಬಾರಿಯೂ ಅವರನ್ನು ಸ್ವಾಭಿಮಾನಿ ಮಹಿಳೆಯರು ಸೋಲಿಸಿ ಮನೆಗೆ ಕಳುಹಿಸಬೇಕು. ಇಂತಹವರು ಜನಪ್ರತಿನಿಧಿಯಾದರೆ ಮಹಿಳೆಯರಿಗೆ ರಕ್ಷಣೆ ಸಿಗುತ್ತದೆಯೇ ಎಂಬುದನ್ನು ಹೆಣ್ಣು ಮಕ್ಕಳು ಅರ್ಥಮಾಡಿಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News