ಮಂಗಳೂರಲ್ಲಿ ಕೊಲೆ ಆರೋಪಿಯನ್ನು ಸ್ವಾಗತಿಸಿ, ಮೈಸೂರಲ್ಲಿ ಪ್ರತಿಭಟಿಸುವ ಭಂಡತನ
-ಆರ್. ಜೀವಿ
ಚುನಾವಣೆಯಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದ್ದರೂ ಅದ್ಯಾಕೋ ಬಿಜೆಪಿ ತನ್ನ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ.
ಈಗ ಮತ್ತೆ ಅದೇ ಹಳೆ ಚಾಳಿ ಪ್ರಾರಂಭಿಸಿದೆ. ಪ್ರತಿಯೊಂದು ಘಟನೆಗೂ ಕೋಮು ಬಣ್ಣ ಹಚ್ಚುವ, ಪ್ರತಿಯೊಂದರಲ್ಲೂ ಹಿಂದೂ - ಮುಸ್ಲಿಂ ಅಂತ ಹುಡುಕಿ ಗುಲ್ಲೆಬ್ಬಿಸುವ ರಾಜಕಾರಣವನ್ನು ಅದು ಮತ್ತೆ ಶುರು ಮಾಡಿದೆ. ಈಗ ಅದು ರಾಜ್ಯದಲ್ಲಿ ಮೊನ್ನೆ ನಡೆದ ಎರಡು ಕೊಲೆ ಪ್ರಕರಣಗಳನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದೆ.
ಒಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ನಡೆದ ಜೈನ ಮುನಿಗಳ ಭೀಕರ ಹತ್ಯೆ.
ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಯೊಬ್ಬರನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ. ಆಮೇಲೆ ಅವರ ದೇಹವನ್ನು ತುಂಡು ತುಂಡು ಮಾಡಿ ಬಿಸಾಡಲಾಗಿದೆ. ಇದರ ವಿವರಗಳನ್ನು ಕೇಳಿದರೆ ಯಾರೂ ಬೆಚ್ಚಿ ಬೀಳಬಹುದು. ಇದು ಅತ್ಯಂತ ಖಂಡನೀಯ ಘಟನೆ. ಕೊಲೆ ಪ್ರಕರಣದ ಅಪರಾಧಿಗಳಿಗೆ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆಯಾಗಬೇಕು.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಬೆಳಗಾವಿ ಪೊಲೀಸರು ಕಾರ್ಯಪ್ರವೃತ್ತರಾಗಿ ನಾರಾಯಣ ಮಾಳಿ ಮತ್ತು ಹಸನ್ ದಲಾಯತ್ ಎಂಬವರನ್ನು ಬಂಧಿಸಿದ್ದಾರೆ. ಮುನಿಗಳಿಂದ ಸಾಲ ಪಡೆದಿದ್ದು ಅದನ್ನು ಅವರು ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಕಂಡು ಬಂದಿದೆ. ಬಂಧಿತರೂ ಇದನ್ನು ಪೊಲೀಸರಿಗೆ ಹೇಳಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಬೆಳಗಾವಿಗೆ ಭೇಟಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಎಲ್ಲೆಡೆ ಜೈನ ಮುನಿಗಳ ರಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದೂ ಹೇಳಿದ್ದಾರೆ.
ಆದರೆ ಬಿಜೆಪಿಗೆ ಆರೋಪಿಗಳಲ್ಲಿ ಹಸನ್ ದಲಾಯತ್ ಎಂಬ ಹೆಸರಿನ ಒಬ್ಬನನ್ನು ನೋಡಿದ ಕೂಡಲೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅವಕಾಶ ಕಂಡು ಬಂದಿದೆ. ಇಡೀ ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಹೇಗೆಲ್ಲ ಸಾಧ್ಯವೋ ಹಾಗೆಲ್ಲ ಪ್ರಯತ್ನಿಸಿದ್ದಾರೆ ಆ ಪಕ್ಷದ ನಾಯಕರು. ಆ ಪಕ್ಷದ ಶಾಸಕರು ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ್ದು ಕೂಡ ಇದೇ ಪ್ರಚೋದನಕಾರಿ ಹಾಗು ತೀರಾ ಬೇಜವಾಬ್ದಾರಿಯುತ ಧಾಟಿಯಲ್ಲಿ.
ಇನ್ನೊಂದು ಪ್ರಕರಣ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ರವಿವಾರ ರಾತ್ರಿ ನಡೆದ ಕೊಲೆಗೆ ಸಂಬಂಧಿಸಿದ್ದು.
ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ವ್ಯಕ್ತಿ ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ನಿವಾಸಿ ವೇಣುಗೋಪಾಲ ನಾಯಕ (32).
ಈತ ಯುವ ಬ್ರಿಗೇಡ್ ನ ಪಟ್ಟಣ ಸಂಚಾಲಕನಾಗಿದ್ದ ಎನ್ನಲಾಗುತ್ತಿದೆ. ಟಿ.ನರಸೀಪುರ ಪಟ್ಟಣದಲ್ಲಿ ವೀರಾಂಜನೇಯ ಬಳಗದ ವತಿಯಿಂದ ಜು.8 ರ ಶನಿವಾರ ಹನುಮ ಜಯಂತಿ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಆಚರಣೆಯ ಮುಂದಾಳತ್ವವನ್ನು ರಾಮಾನುಜಂ ಮತ್ತು ವೇಣುಗೋಪಾಲ ನಾಯಕ ವಹಿಸಿದ್ದರು ಎಂದು ತಿಳಿದು ಬಂದಿದೆ.
ವೇಣುಗೋಪಾಲ ನಾಯಕ ವಿವಾಹಿತನಾಗಿದ್ದು, ಪತ್ನಿ ಪೂರ್ಣಿಮ ಮತ್ತು ಓರ್ವ ಪುಟ್ಟ ಮಗಳನ್ನು ಅಗಲಿದ್ದಾನೆ. ಇವರ ತಂದೆ ಮತ್ತು ತಾಯಿ ಕೂಡ ಇದ್ದು ಇವರು ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ವೇಣುಗೋಪಾಲ ಕೂಡ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಶನಿವಾರ ಮಧ್ಯಾಹ್ನ 1 ಗಂಟೆಗೆ ಗಂಜಾಂ ನರಸಿಂಹಸ್ವಾಮಿ ಮುಖ್ಯದ್ವಾರದ ಒಳಗೆ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತಿತ್ತು. ಈ ವೇಳೆ ಬೈಕ್‍ನಲ್ಲಿ ಬಂದ ಮಣಿಕಂಠ ಹಾಗೂ ಸಂದೇಶ್ ಎಂಬ ಯುವಕರು ಮುಖ್ಯದ್ವಾರದ ಒಳಗೆ ಹೋಗುತಿದ್ದನ್ನು ವೇಣುಗೋಪಾಲ ನಾಯಕ ಮತ್ತು ರಾಮಾನುಜಂ ತಡೆದು ಮೆರವಣಿಗೆ ಹೊರಡುವವರೆಗೆ ಯಾವುದೇ ವಾಹನಗಳನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಣಿಕಂಠ ಹಾಗೂ ಸಂದೇಶ್ ಒಳಗೆ ಬಿಡುವಂತೆ ಒತ್ತಾಯಿಸಿದ್ದಾರೆ. ಆಗ ಪರಸ್ಪರ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಈ ವೇಳೆ ಸಾರ್ವಜನಿಕರು ಹೆಚ್ಚು ಸೇರುತ್ತಿದ್ದಂತೆ ಸುಮ್ಮನಾಗಿ ಎಲ್ಲರೂ ಒಟ್ಟಿಗೆ ಹನುಮ ಜಯಂತಿ ಮೆರವಣಿಗೆಯಲ್ಲಿ ಸೇರಿಕೊಂಡಿದ್ದಾರೆ.
ಮೆರವಣಿಗೆ ಹೊರಟ ನಂತರ ಭಾರತಾಂಭೆಯ ಭಾವಚಿತ್ರದ ಮುಂದೆ ಕರ್ನಾಟಕ ರತ್ನ ದಿ.ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ಹಾಕಲಾಗಿತ್ತು ಎನ್ನಲಾಗಿದೆ. ಆಗ ಮುಂದಾಳತ್ವ ವಹಿಸಿದ್ದ ವೇಣುಗೋಪಾಲ ನಾಯಕ " ಯಾವ ನಟರ ಭಾವಚಿತ್ರವನ್ನೂ ಹಾಕುವುದು ಬೇಡ" ಎಂದು ತೆಗೆಸಿ ಹಾಕಿದ್ದಾರೆ. ಆಗಲೂ ಮಣಿಕಂಠ, ಸಂದೇಶ್ ಮತ್ತು ವೇಣುಗೋಪಾಲ ನಡುವೆ ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕರು ಎರಡೂ ಗುಂಪಿನವರನ್ನು ಸಮಾಧಾನಪಡಿಸಿ ಹುನಮ ಜಯಂತಿ ಮೆರವಣಿಗೆ ಸಾಗುವಂತೆ ನೋಡಿಕೊಂಡಿದ್ದಾರೆ. ನಂತರ ಮೆರವಣಿಗೆ ಸಾಂಗವಾಗಿ ಜರುಗಿ ಮುಕ್ತಾಯಗೊಂಡಿದೆ.
ಮರುದಿನ ಜು.9 ರವಿವಾರ ವೇಣುಗೋಪಾಲ ನಾಯಕ ಮತ್ತು ರಾಮಾನುಜಂ ಟಿ.ನರಸೀಪುರ ಪಟ್ಟಣದಲ್ಲಿರುವ ಶಾಮಿಯಾನ ಅಂಗಡಿ ಬಳಿ ಬಾಡಿಗೆಗೆ ತಂದಿದ್ದ ವಸ್ತುಗಳನ್ನು ಹಿಂದಿರುಗಿಸುವ ವೇಳೆ ಮಣಿಕಂಠ, ಸಂದೇಶ್, ಶಂಕರ,ಅನಿಲ್ ಬಂದು ವೇಣುಗೋಪಾಲ ನಾಯಕನನ್ನು ಕುರಿತು "ನಿನ್ನೆ ನಮ್ಮ ಬೈಕ್‍ಗಳನ್ನು ಒಳಗಡೆ ಬಿಡದೆ ಅವಮಾನ ಮಾಡಿದ್ದೀರಿ. ಪುನೀತ್ ಭಾವಚಿತ್ರ ಕಟ್ಟಲು ಬಿಡಲಿಲ್ಲ" ಎಂದು ಗಲಾಟೆ ಮಾಡಿದ್ದಾರೆ. ಆಗ ವೇಣುಗೋಪಾಲ ನಾಯಕನಿಗೆ ಹಲ್ಲೆ ಮಾಡಿ ಬಟ್ಟೆ ಹರಿದು ಹಾಕಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ಪೊಲೀಸ್ ವಾಹನ ಬಂದ ಕಾರಣ ಅಲ್ಲಿಂದ ಎಲ್ಲರೂ ಜಾಗ ಖಾಲಿ ಮಾಡಿದ್ದಾರೆ.
ನಂತರ ರವಿವಾರ ರಾತ್ರಿ 8.15 ಗಂಟೆ ಸಮಯದಲ್ಲಿ ವೇಣುಗೋಪಾಲ ನಾಯಕನಿಗೆ ಮೊಬೈಲ್ ಕರೆ ಮಾಡಿ " ನಿನ್ನ ಜೊತೆ ಮಾತನಾಡಬೇಕು ಮೈಸೂರು ರಸ್ತೆಯ ಸರ್ವೀಸ್ ಸ್ಟೇಷನ್ ಬಳಿ ಅಥವಾ ಅಗ್ನಿಶಾಮಕ ಆಫೀಸಿನ ಬಳಿ ಬರುವಂತೆ " ಮಣಿಕಂಠ ಹಾಗೂ ಸಂದೇಶ್ ತಿಳಿಸಿದ್ದಾರೆ. ವೇಣುಗೋಪಾಲ ನಾಯಕ ತನ್ನ ಬೈಕ್‍ನಲ್ಲಿ ಚೇತನ್ ಎಂಬ ಸ್ನೇಹಿತನನ್ನು ಕರೆದುಕೊಂಡು ಅಗ್ನಿ ಶಾಮಕ ಕಚೇರಿ ಬಳಿಗೆ ಹೋಗಿದ್ದಾನೆ.
ಈ ವೇಳೆ ಮಣಿಕಂಠ, ಸಂದೇಶ್, ಅನಿಲ್, ಶಂಕರ, ಮಂಜ ಮತ್ತು ಹ್ಯಾರಿಸ್ ಎಂಬುವವರು ವೇಣುಗೋಪಾಲ ನಾಯಕ ಬೈಕ್‍ನಿಂದ ಕೆಳಗಿಳಿಯುತ್ತಿದ್ದಂತೆ " ನಮಗೆ ಬೈಕ್ ಒಳಗಡೆ ಬಿಡದೆ ಅವಮಾನ ಮಾಡಿದ್ದೀಯ" ಎಂದು ಗಲಾಟೆ ತೆಗೆದಿದ್ದಾರೆ. ಆಗ ವೇಣುಗೋಪಾಲ ಕೂಡ ಅವರ ವಿರುದ್ಧ ತಿರುಗಿ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಪರಸ್ಪರ ಗಲಾಟೆ ನಡೆದು ಬಿಯರ್ ಬಾಟಲಿಯಿಂದ ವೇಣುಗೋಪಾಲ ನಾಯಕ ನ ತಲೆಗೆ ಹೊಡೆದು ಇದೇ ಬಾಟಲಿಯಿಂದ ಚುಚ್ಚಲಾಗಿದೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದ ವೇಣುಗೋಪಾಲ ನಾಯಕನನ್ನು ಇತರೆ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸಾವಿಗೀಡಾಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆ ಸಂಬಂಧ ಹುನುಮ ಜಯಂತಿ ಮುಂದಾಳತ್ವ ವಹಿಸಿದ್ದ ರಾಮಾನುಜಂ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ ಮಣಿಕಂಠ , ಸಂದೇಶ್, ಬಿಜೆಪಿ ಕಾರ್ಪೊರೇಟರ್ ಲಕ್ಷ್ಮಿ ಕಿರಣ್ ಸಹೋದರ ಶಂಕರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಅನಿಲ್, ಮಂಜ ಮತ್ತು ಹ್ಯಾರಿಸ್ ಎಂಬ ಮೂವರಿಗಾಗಿ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ವೇಣುಗೋಪಾಲ ನಾಯಕನ ಕೊಲೆಗೆ ಸಂಬಂಧಿಸಿದಂತೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿ " ಇದು ಕೋಮು ಸಂಘರ್ಷದಿಂದ ನಡೆದಿರುವ ಕೊಲೆಯಲ್ಲ, ಪೋಸ್ಟರ್ ವಿಚಾರ ಮತ್ತು ಇತರೆ ವೈಯಕ್ತಿಕ ವಿಚಾರಕ್ಕೆ ಒಂದೇ ಧರ್ಮಕ್ಕೆ ಸೇರಿದವರ ನಡುವೆ ಗಲಾಟೆಯಾಗಿ ನಡೆದಿರುವ ಕೊಲೆ " ಎಂದು ಸ್ಪಷ್ಟಪಡಿಸಿದ್ದಾರೆ. ಆಗಿದ್ದು ಇಷ್ಟು.
ಈಗ ಈ ಘಟನೆಗೂ ಕೋಮು ಬಣ್ಣ ಬಳಿಯಲು ಬಿಜೆಪಿ ಮುಖಂಡರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಜೊತೆಗೆ ಸುಳ್ಳುಕೋರ ಚಕ್ರವರ್ತಿ ಸೂಲಿಬೆಲೆ ಕೂಡ ಇದಕ್ಕೆ ಸೇರಿಕೊಂಡಿದ್ದಾರೆ. ಅಷ್ಟಕ್ಕೂ ಬಂಧಿತರಲ್ಲಿ ಒಬ್ಬ ಬಿಜೆಪಿ ಜನಪ್ರತಿನಿಧಿಯ ಸೋದರ.
ವೇಣುಗೋಪಾಲ ನಾಯಕ್ ಅವರನ್ನು ಕಾಂಗ್ರೆಸ್ ಬೆಂಬಲಿಗರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸೂಲಿಬೆಲೆ, "ಸಿದ್ದರಾಮಯ್ಯ 2.0 ತನ್ನ ಗ್ರಹಣಾಂಗಗಳನ್ನು ವಿಸ್ತರಿಸುತ್ತಿದೆ. ಹನುಮ ಜಯಂತಿಯ ಸಕ್ರಿಯ ಸಂಘಟಕನಾಗಿದ್ದರಿಂದ ನಾವು ನಿನ್ನೆ ನಮ್ಮ ಒಬ್ಬ ಸ್ವಯಂಸೇವಕನನ್ನು ಕಳೆದುಕೊಂಡೆವು!. ಅವರನ್ನು ಕಾಂಗ್ರೆಸ್ ಬೆಂಬಲಿಗರು ಬರ್ಬರವಾಗಿ ಹತ್ಯೆ ಮಾಡಿದರು. ಕರ್ನಾಟಕ ಹೊತ್ತಿ ಉರಿಯುತ್ತದೆ. ಶೀಘ್ರದಲ್ಲೇ ಮತ್ತೊಂದು ಪಶ್ಚಿಮ ಬಂಗಾಳ ಆಗಲಿದೆ " ಎಂದು ಹೇಳಿದ್ದಾರೆ.
ಕೊಲೆಯಾದ ವೇಣುಗೋಪಾಲ ನಾಯಕನ ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶವಪರೀಕ್ಷೆಗೆ ತಂದಿದ್ದ ವೇಳೆ ಸ್ಥಳೀಯ ಕೆಲ ಬಿಜೆಪಿ ಮುಖಂಡರುಗಳು ಮತ್ತು ಹಿಂದುತ್ವ ಕಾರ್ಯಕರ್ತರು ಶವಗಾರದ ಮುಂದೆ ಪ್ರತಿಭಟನೆ ನಡೆಸಿ ಹಿಂದೂ ಕಾರ್ಯಕರ್ತನ ಹತ್ಯೆ ಮಾಡಲಾಗಿದ್ದು. ಆತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಕೆಲವು ಟಿವಿ ಚಾನಲ್ ಗಳೂ ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಕೋಮು ಪ್ರಚೋದನೆ ನೀಡುತ್ತಿವೆ.
ವಿಶೇಷ ಅಂದ್ರೆ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗಾ ಎಂಬವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಯುವ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ . ಆ ಪ್ರಮುಖ ಆರೋಪಿ ಜೈಲಿನಿಂದ ಬಿಡುಗಡೆಯಾದಾಗ ಇದೇ ಸೂಲಿಬೆಲೆ ಹೋಗಿ ಆತನನ್ನು ತಬ್ಬಿಕೊಂಡು ಸ್ವಾಗತಿಸಿ ಕರೆದುಕೊಂಡು ಬಂದಿದ್ದ. ಈಗ ವೈಯಕ್ತಿಕ ಜಗಳಕ್ಕೆ ನಡೆದಿರುವ ಕೊಲೆಯನ್ನು " ಕಾಂಗ್ರೆಸ್ ಕಾರ್ಯಕರ್ತರಿಂದ ನಮೋ ಬ್ರಿಗೇಡ್ ಕಾರ್ಯಕರ್ತನ ಕೊಲೆ " ಅಂತ ಚೀರಾಡ್ತಾ ಇದ್ದಾನೆ. ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾನೆ.
ಹಾಗಾದರೆ ಈತನ ಸೋಗಲಾಡಿತನ ಅದ್ಯಾವ ಮಟ್ಟದ್ದು ಎಂದು ನೀವೇ ಲೆಕ್ಕ ಹಾಕಿ. ಈ ಸೂಲಿಬೆಲೆ ಈ ಹಿಂದೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಬಗ್ಗೆ ಕೂಡ ಬಾಯಿಗೆ ಬಂದಂತೆ ಮಾತಾಡಿ ಎಲ್ಲರಿಂದ ಛೀಮಾರಿ ಬಿದ್ದ ಮೇಲೆ ಕ್ಷಮೆ ಯಾಚಿಸಿದ ಇತಿಹಾಸವೂ ಇದೆ. ಈತನ ಈ ಸುಳ್ಳುಗಳೇ ತುಂಬಿರುವ ಪ್ರಚೋದನಕಾರಿ ಭಾಷಣಗಳನ್ನು ಕೇಳಿ ನಮೋ ಬ್ರಿಗೇಡ್ ನ ಕಾರ್ಯಕರ್ತರು ದಾರಿ ತಪ್ಪುತ್ತಿದ್ದಾರೆ. ಕನ್ನಡದ ಐಕಾನ್ ಗಳ, ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಅವರಲ್ಲಿ ತಪ್ಪು ತಿಳುವಳಿಕೆ ತುಂಬುತ್ತಿದೆ.
ಈಗ ವೈಯಕ್ತಿಕ ಗಲಾಟೆಯಿಂದ ನಡೆದಿರುವ ಕೊಲೆ ಪ್ರಕರಣವನ್ನು ಹಿಡಿದುಕೊಂಡು ಇಡೀ ರಾಜ್ಯದಲ್ಲಿ ಕೋಮು ಪ್ರಚೋದನೆ ಮಾಡಲು, ಆ ಮೂಲಕ ಅಶಾಂತಿ ಹರಡಲು ಸಜ್ಜಾಗಿದ್ದಾನೆ. ರಾಜ್ಯ ಸರಕಾರ ಇದನ್ನು ಗಮನಿಸಬೇಕಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಇರುವಾಗ ಇದೇ ಬಿಜೆಪಿ ಮುಖಂಡರು ಬದುಕಿದ್ದವರನ್ನು, ಅಪಘಾತ ಆದವರನ್ನು, ಆತ್ಮಹತ್ಯೆ ಮಾಡಿಕೊಂಡವರನ್ನು ಎಲ್ಲರನ್ನೂ ಸೇರಿಸಿ ಸುಳ್ಳು ಸುಳ್ಳೇ ಪಟ್ಟಿ ಮಾಡಿ ರಾಜ್ಯದಲ್ಲಿ 23 ಹಿಂದೂಗಳ ಹತ್ಯೆ ಎಂದು ಕೇಂದ್ರಕ್ಕೆ ಪತ್ರ ಬರೆದು ಸಿಕ್ಕಿ ಬಿದ್ದಿದ್ದರು. ಈಗ ಮತ್ತೆ ಸಿದ್ದರಾಮಯ್ಯ ಸರಕಾರ ಬಂದಿರುವಾಗ ಮತ್ತೆ ಅದೇ ಷಡ್ಯಂತ್ರ ನಡೆಯುವ ಲಕ್ಷಣಗಳಿವೆ. ಅದಕ್ಕೆ ಈ ಸೂಲಿಬೆಲೆಯಂತವರು ಒಗ್ಗರಣೆ ಹಾಕುತ್ತಾರೆ. ಹಾಗಾಗಿ ಸರಕಾರ ಇಂತಹ ಪ್ರಚೋದನಕಾರಿ ವ್ಯಕ್ತಿಗಳ ಬಗ್ಗೆ ಈ ಹಿಂದಿನ ನಿರ್ಲಕ್ಷ್ಯ ತೋರದೆ ಜಾಗರೂಕವಾಗಿರಬೇಕಾಗಿದೆ.