×
Ad

ಪ್ರಚೋದನಕಾರಿ ಭಾಷಣ, ಅನೈತಿಕ ಪೊಲೀಸ್ ಗಿರಿ: ಸಿಎಂ ಸಿದ್ದರಾಮಯ್ಯ ಸೂಚನೆ ಪಾಲನೆ ಆಗುವುದೇ ?

Update: 2023-08-04 19:39 IST

- ಆರ್. ಜೀವಿ

ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಹಾಗು ಉಡುಪಿಗೆ ಭೇಟಿ ನೀಡಿದ್ದಾರೆ. ಆಗ ಜಿಲ್ಲಾಡಳಿತದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಅನೈತಿಕ ಪೊಲೀಸ್ ಗಿರಿಯನ್ನು ಸಹಿಸಬಾರದು, ಕಾನೂನು ಕೈಗೆತ್ತಿಕೊಳ್ಳುವವರನ್ನು ಹೆಡೆಮುರಿ ಕಟ್ಟಬೇಕು ಎಂದು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಸ್ವತಃ ಈ ರಾಜ್ಯದ ಮುಖ್ಯಮಂತ್ರಿಗಳೇ ಜಿಲ್ಲೆಗೆ ಭೇಟಿ ನೀಡಿ ಈ ಸೂಚನೆ ನೀಡಿ ಹೋಗಿ ಎರಡು ದಿನವೂ ಆಗಿಲ್ಲ.

ಉಡುಪಿಯಲ್ಲಿ ಗುರುವಾರ ವಿಶ್ವ ಹಿಂದೂ ಪರಿಷತ್ ನ ನಾಯಕ ಶರಣ್ ಪಂಪ್ ವೆಲ್ ಭಾಷಣ ಮಾಡಿದ್ದಾನೆ.

ಉಡುಪಿ ಕಾಲೇಜಿನಲ್ಲಿ ನಡೆದ ವೀಡಿಯೊ ಪ್ರಕರಣವನ್ನು ನೆಪ ಮಾಡಿಕೊಂಡು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್, ವಿವಿಧ ಸಂಘ ಪರಿವಾರ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ ನಡೆಸಿತ್ತು. ಅಲ್ಲಿ ಶರಣ್ ಪಂಪ್ ವೆಲ್ ಮಾತಾಡಿದ್ದಾನೆ.

ಪ್ರತಿಭಟನೆಗೂ ಮೊದಲು ಉಡುಪಿಯ ಜೋಡುಕಟ್ಟೆಯಿಂದ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದ ವರೆಗೆ ನಡೆದ ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಬೃಹತ್ ಪಾದಯಾತ್ರೆಯಲ್ಲಿ ಶಾಸಕರಾದ ಸುನಿಲ್ ಕುಮಾರ್, ಯಶಪಾಲ್‌ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ , ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ, ನಾಯಕರಾದ ಶ್ಯಾಮಲಾ ಕುಂದರ್, ಉದಯಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ರಘುಪತಿ ಭಟ್, ರೇಷ್ಮಾ ಉದಯ ಶೆಟ್ಟಿ ಮತ್ತಿರರು ಭಾಗವಹಿಸಿದ್ದರು.

ಅಲ್ಲಿ ಶರಣ್ ಪಂಪ್ ವೆಲ್ ಹಸಿ ಹಸಿ ಸುಳ್ಳು ಹಾಗು ತೀರಾ ಪ್ರಚೋದನಕಾರಿ ಹೇಳಿಕೆಗಳಿದ್ದ ಭಾಷಣ ಮಾಡಿದ್ದಾನೆ. ನೇರವಾಗಿ ಹಿಂಸೆಗೆ ಕರೆ ಕೊಟ್ಟಿದ್ದಾನೆ. ಉಡುಪಿಯ ವಿದ್ಯಾರ್ಥಿನಿಯರು ತನ್ನ ಒಟ್ಟಿಗೆ ಇದ್ದವರ ನಗ್ನ ವಿಡಿಯೋವನ್ನು ತೆಗೆದು ಇನ್ನೊಬ್ಬರ ಜೊತೆಗೆ ಹಂಚುತ್ತಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ನಿಂತು ಹಸಿ ಹಸಿ ಹೇಳಿದ್ದಾನೆ ಶರಣ್ ಪಂಪ್ ವೆಲ್.

ಇಲ್ಲಿ ಸೇರಿದ ತಾಯಂದಿರು ಮನೆಯಲ್ಲಿ ಅಡುಗೆ ಮಾಡ್ಬೇಕಾರ್ದೆ ಕೈಯಲ್ಲಿ ಸೌಟು ಹಿಡಿದುಕೊಂಡು ಅಡುಗೆ ಮಾಡ್ತೀರಿ . ಮನೆಯಲ್ಲಿ ಸ್ವಚ್ಛತೆ ಮಾಡ್ಬೇಕಾದ್ರೆ ಇಡುಸುಡಿ ಹಿಡ್ಕೊಂಡು ನಾವು ಸ್ವಚ್ಛತೆ ಮಾಡ್ತೀರಿ. ಆದರೆ ನಮ್ಮ ಇದೇ ಊರಲ್ಲಿ ನಮ್ಮ ಕಣ್ಣೆದುರು ನಮ್ಮ ಹೆಣ್ಣು ಮಕ್ಕಳಿಗೆ ಈ ರೀತಿಯ ತೊಂದರೆ ಯಾದಾಗ ಸೌಟು ಹಿಡಿದಂತ ಕೈಯಲ್ಲಿ ತಾವು ಶಸ್ತ್ರವನ್ನು ಹಿಡಿಯಿರಿ, ತಲವಾರನ್ನು ಹಿಡಿಯಿರಿ ಅಥವಾ ಕತ್ತಿಯನ್ನು ಬೇಕಾದರೂ ಹಿಡಿಯಿರಿ... ಎಂದು ಹೇಳಿದ್ದಾನೆ ಶರಣ್ ಪಂಪ್ ವೆಲ್.

ಕೇರಳ ಸ್ಟೋರಿ ಚಿತ್ರದಲ್ಲಿ ತೋರಿಸಿದಂತಹ ಘಟನೆ ಇವತ್ತು ಉಡುಪಿಯಲ್ಲಿ ಆಗಿದೆ ಎಂದೂ ಹಸಿ ಸುಳ್ಳು ಹೇಳಿದ್ದಾನೆ ಶರಣ್ ಪಂಪ್ ವೆಲ್. "ಬೆಳ್ ಬೆಳಿಗ್ಗೆ 5, 6 ಗಂಟೆಗೆ ರಸ್ತೆಯಲ್ಲಿ ಹೋಗಬೇಕಾದರೆ ಸಣ್ಣ ಸಣ್ಣ ಮುಸಲ್ಮಾನ ಹೆಣ್ಣು ಮಕ್ಕಳು ಮುಸಲ್ಮಾನ ಯುವಕರು ಮದರಸ ಶಿಕ್ಷಣಕ್ಕೆ ಹೋಗ್ತಾರೆ ಆ ಮದರಸದಲ್ಲಿ ಕೊಡುವ ಶಿಕ್ಷಣ ಇದೇ. ಈ ದೇಶವನ್ನು ಇಸ್ಲಾಮೀಕರಣ ಮಾಡಬೇಕು, ಈ ದೇಶದಲ್ಲಿ ಹಿಂದುತ್ವವನ್ನು ನಾಶ ಮಾಡಬೇಕು, ಈ ದೇಶದಲ್ಲಿ ಹಿಂದೂಗಳನ್ನು ನಾಶ ಮಾಡಬೇಕು ಎಂಬ ಶಿಕ್ಷಣವನ್ನು ಕೊಟ್ಟ ಕಾರಣ ಇವತ್ತು ದೇಶದಲ್ಲಿ ಈ ರೀತಿಯ ವಾತಾವರಣ ನಿರ್ಮಾಣ ಆಗಿದೆ " ಎಂದು ಹೇಳಿ ಒಂದು ಸಮುದಾಯದ ವಿರುದ್ಧ ದ್ವೇಷ ಹರಡುವ, ಸುಳ್ಳು ಹರಡುವ, ಸಮಾಜದ ಶಾಂತಿ ಕದಡುವ ಕೆಲಸ ಮಾಡಿದ್ದಾನೆ ಶರಣ್ ಪಂಪ್ ವೆಲ್.

ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೊಬ್ಬ ಸುಳ್ಳುಗಾರ್ತಿ ಹಾಗು ದ್ವೇಷ ಪ್ರಚಾರಕಿ ರಶ್ಮಿ ಸಾಮಂತ್.

ಉಡುಪಿ ಕಾಲೇಜಿನ ಪ್ರಕರಣದ ಬಗ್ಗೆ ಹಸಿ ಹಸಿ ಸುಳ್ಳು ಟ್ವೀಟ್ ಮಾಡಿ ಅದನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿಸಿದ್ದು ಇದೇ ರಶ್ಮಿ ಸಾಮಂತ್.

ಆದರೆ ಆಕೆಯ ಮೇಲೆ ಒಂದು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿಲ್ಲ ಉಡುಪಿ ಪೊಲೀಸರು. ಅವರ ಮೇಲೆ ಅದ್ಯಾವ ಒತ್ತಡವಿತ್ತೋ ಗೊತ್ತಿಲ್ಲ.

ಅದೇ ಧೈರ್ಯದಲ್ಲಿ ಆಕೆ ಗುರುವಾರವೂ ಸಾರ್ವಜನಿಕ ವೇದಿಕೆಯಲ್ಲೇ ನಿಂತು ಮಾತಾಡಿ " ಉಡುಪಿಯ ಈ ಘಟನೆಯ ಬಗ್ಗೆ ಹಿಂದೂ ಸಮಾಜ ಮೌನವಾಗಿರುವುದು ಅಚ್ಚರಿಯಾಗಿದೆ. ಇಂತಹ ಘಟನೆಗಳಲ್ಲಿ ಒಂದು ಬಾರಿ ಯುವತಿಯರ ಮಾನ ಹೋದರೆ ಅದು ಜೀವನ ಪರ್ಯಂತ ನೋವಿಗೆ ಕಾರಣವಾಗುತ್ತದೆ " ಎಂದು ಮತ್ತೊಮ್ಮೆ ಸುಳ್ಳು ಹೇಳಿದ್ದಾಳೆ. ಜನರನ್ನು ಹಿಂಸೆಗೆ ಪರೋಕ್ಷವಾಗಿ ಪ್ರಚೋದಿಸಿದ್ದಾಳೆ.

ಮುಖ್ಯಮಂತ್ರಿ ಬಂದು ಹೋದ ಬೆನ್ನಲ್ಲೇ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆ ಎರಡರಲ್ಲೂ ಅನೈತಿಕ ಪೊಲೀಸ್ ಗಿರಿಯ ಕನಿಷ್ಠ ಎರಡು ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗು ಪ್ರೊಫೆಸರ್ ಮೇಲೆ ದಾಳಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ರಿಕ್ಷಾದಲ್ಲಿ ಹಿಂದೂ ಮಹಿಳೆ ಪ್ರಯಾಣಿಸಿದರು ಎಂದು ರಿಕ್ಷಾ ಚಾಲಕನ ಮೇಲೆ ದಾಳಿ ಮಾಡಲಾಗಿದೆ.

ಈಗ ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಜನರು ಇಲ್ಲಿನ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ದಿನೇಶ್ ಗುಂಡೂರಾವ್ ಅವರಲ್ಲಿ ಕೇಳೋದು ಇಷ್ಟೇ !. ಮುಖ್ಯಮಂತ್ರಿಗಳೇ ಕೊಟ್ಟಿರುವ ಸೂಚನೆಯನ್ನು ಪಾಲಿಸಲಾಗುವುದೇ ಇಲ್ಲವೇ ?. ಸಾರ್ವಜನಿಕ ವೇದಿಕೆಯಲ್ಲಿ ಹಸಿ ಸುಳ್ಳು ಹೇಳಿದ, ಜನರನ್ನು ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಹೇಳಿದ, ಹಿಂಸೆಗೆ ಪ್ರಚೋದಿಸಿದ ಶರಣ್ ಪಂಪ್ ವೆಲ್ ಹಾಗು ರಶ್ಮಿ ಸಾಮಂತ್ ಅವರ ವಿರುದ್ಧ ಕಾನೂನು ಕ್ರಮವಾಗುತ್ತದೆಯೇ ಇಲ್ಲವೇ ? ಆತನ ಮೇಲೆ ಕೇಸು ದಾಖಲಿಸಿದ ಮೇಲೆ ಆತನ ಬಂಧನ ಆಗುವುದೇ ಇಲ್ಲವೇ ? ಬಂಧನವಾದರೂ ಅಷ್ಟೇ ವೇಗವಾಗಿ ಆತನ ಬಿಡುಗಡೆ ಆಗಲಿದೆಯೇ ?

ಅನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮೇಲೆ ಕೇಸು ಹಾಕೋದು ಮಾತ್ರವಲ್ಲದೆ ಅವರನ್ನು ಅದಕ್ಕೆ ಪ್ರಚೋದಿಸುವವರನ್ನು ಹೆಡೆಮುರಿ ಕಟ್ಟುವ ಕೆಲಸ ಆಗುತ್ತದೆಯೇ ಇಲ್ಲವೇ ? . ಪ್ರಚೋದನಕಾರಿ ಭಾಷಣ ಮಾಡುವವರನ್ನು ಬಿಟ್ಟು ಬಿಟ್ಟರೆ ಏನಾಗುತ್ತದೆ ಎಂಬುದಕ್ಕೆ ಈಗ ಹರ್ಯಾಣ ನಮ್ಮೆದುರಲ್ಲೇ ಹೊತ್ತಿ ಉರಿಯುತ್ತಿದೆ. ಒಬ್ಬ ಕೊಲೆ ಆರೋಪಿ ಬಜರಂಗದಳ ನಾಯಕನನ್ನು ಐದಾರು ತಿಂಗಳು ಬಂಧಿಸದ ಅಲ್ಲಿನ ಪೋಲೀಸರ ನಿಷ್ಕ್ರಿಯತೆ ಹಾಗು ಪರೋಕ್ಷ ಬೆಂಬಲಕ್ಕೆ ಈಗ ಹರ್ಯಾಣದಲ್ಲಿ ಬೆಂಕಿ ಬಿದ್ದಿದೆ. ಅಮಾಯಕರು ಪ್ರಾಣ ಕಳಕೊಂಡಿದ್ದಾರೆ. ಕೋಟ್ಯಂತರ ರೂಪಾಯಿಯ ಸೊತ್ತು ನಾಶವಾಗಿದೆ.

ಕರ್ನಾಟಕದಲ್ಲೂ ಕೊಲೆ ಆರೋಪಿ ಸಂಘ ಪರಿವಾರದ ನಾಯಕ ಪುನೀತ್ ಕೆರೆಹಳ್ಳಿ ಬಹಳ ಸುಲಭವಾಗಿ ಜಾಮೀನು ಪಡೆದು ಹಾಯಾಗಿದ್ದಾನೆ. ಬೇಕಾಬಿಟ್ಟಿ ವೀಡಿಯೊ ಮಾಡಿಕೊಂಡಿದ್ದಾನೆ. ಈಗ ಶರಣ್ ಪಂಪ್ ವೆಲ್ ಹಾಗು ರಶ್ಮಿ ಸಾಮಂತ್ ಅವರ ವಿರುದ್ಧವೂ ಕ್ರಮವಾಗುತ್ತದೆಯೇ ಇಲ್ಲವೇ ಎಂದು ಉಡುಪಿಯ ಜನ ಕೇಳುತ್ತಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡುವವರು ಯಾವುದೇ ಧರ್ಮ , ಪಕ್ಷ, ಸಂಘಟನೆಗೆ ಸೇರಿರಲಿ ಅವರ ಸ್ಥಾನ ಜೈಲು ಮಾತ್ರ. ಅವರನ್ನು ಜನರ ನಡುವೆ ಇರಲು ಬಿಟ್ಟರೆ ಜನರ ಜೀವನವನ್ನು ದುಸ್ತರ ಮಾಡಿಬಿಡುತ್ತಾರೆ. ಒಬ್ಬ ಸುಳ್ಳುಗಾರ ಹಾಗು ಹಿಂಸೆ ಪ್ರಚೋದಕನನ್ನು ವ್ಯವಸ್ಥೆ ಬಿಟ್ಟು ಪ್ರೋತ್ಸಾಹಿಸಿದರೆ ಹತ್ತು ಜನ ಅಂತವರು ಹುಟ್ಟಿಕೊಳ್ತಾರೆ. ಇಷ್ಟು ಉಡುಪಿಯ ಜಿಲ್ಲಾಡಳಿತಕ್ಕೂ ಚೆನ್ನಾಗಿ ಗೊತ್ತಿದೆ. ಈಗ ಶರಣ್ ಪಂಪ್ ವೆಲ್ ಹಾಗು ರಶ್ಮಿ ಸಾಮಂತ್ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಉತ್ತರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News