ಡಾರ್ಕ್ ಚಾಕಲೇಟ್ ಗಳ ಭಯಾನಕ ಡಾರ್ಕ್ ಸೈಡ್ ತಿಳಿದುಕೊಳ್ಳಿ
Photo: Canva
ಚಾಕೊಲೇಟ್ ಎಂದರೆ ಇಷ್ಟ ಇಲ್ದೇ ಇರೋರು ಯಾರು ?. ಮಕ್ಕಳಂತೂ ಅತಿ ಚಾಕೊಲೇಟ್ ಪ್ರಿಯರು. ಉಡುಗೊರೆಯ ಒಂದು ರೂಪವಾಗಿಯೂ ಚಾಕೊಲೇಟ್ ಅನ್ನೇ ಆರಿಸುವವರಿದ್ದಾರೆ. ಚಾಕೊಲೇಟ್ ಕೇವಲ ಟೇಸ್ಟಿ ಎಂಬುದಕ್ಕಿಂತ ಹೆಚ್ಚಾಗಿ ಅನೇಕರು ಅದನ್ನು ಎಂಥದೋ ಖುಷಿ ಕೊಡುತ್ತದೆ, ಶಕ್ತಿ ವರ್ಧಕ ಎಂದೂ ಭಾವಿಸುತ್ತಾರೆ. ಕೆಲವು ಸಂಭಾವ್ಯ ಆರೋಗ್ಯ ಲಾಭಕ್ಕಾಗಿ ಡಾರ್ಕ್ ಚಾಕೊಲೇಟ್ ಸೇವಿಸುವವರೂ ಇದ್ದಾರೆ.
ಹೀಗೆಲ್ಲ ವಿಶೇಷತೆ ಪಡೆದಿರುವ ಡಾರ್ಕ್ ಚಾಕೊಲೇಟ್ ಸೇರಿದಂತೆ ಬಹುತೇಕ ಚಾಕೊಲೇಟ್ ಉತ್ಪನ್ನಗಳಿಗೆ ಒಂದು ಭಯಾನಕ ಡಾರ್ಕ್ ಸೈಡ್ ಕೂಡ ಇದೆ ಎಂಬುದನ್ನು ಈಗ ಅಧ್ಯಯನವೊಂದು ಬಯಲು ಮಾಡಿದೆ. ಈ ಅಧ್ಯಯನ ಹೇಳುತ್ತಿರುವುದೇನು?. ಸಾಮಾಜಿಕ ಸೇವಾ ಉದ್ದೇಶದ ಸಂಘಟನೆ ಕನ್ಸೂಮರ್ ರಿಪೋರ್ಟ್ಸ್ ಅಧ್ಯಯನ ಬಹಿರಂಗಪಡಿಸಿರುವ ಆಘಾತಕಾರಿ ಅಂಶಗಳು ಇವು:
ಕೆಲವು ಡಾರ್ಕ್ ಚಾಕೊಲೇಟ್ ಬಾರ್‌ಗಳು ಕ್ಯಾಡ್ಮಿಯಮ್ ಮತ್ತು ಸೀಸವನ್ನು ಅಪಾಯಕಾರಿ ಮಟ್ಟದಲ್ಲಿ ಹೊಂದಿರುತ್ತವೆ. ಪರೀಕ್ಷಿಸಿದ ವಿವಿಧ ಚಾಕೊಲೇಟ್ ಉತ್ಪನ್ನಗಳ ಮೂರನೇ ಒಂದು ಭಾಗದಲ್ಲಿ ಈ ಭಾರಲೋಹಗಳಾದ ಸೀಸ ಮತ್ತು ಕ್ಯಾಡ್ಮಿಯಂ ಪತ್ತೆಯಾಗಿವೆ. ವಿಜ್ಞಾನಿಗಳು ಪರೀಕ್ಷಿಸಿದ ವಿವಿಧ 48 ಚಾಕೊಲೇಟ್ ಉತ್ಪನ್ನಗಳಲ್ಲಿ 16 ಉತ್ಪನ್ನಗಳು ಸೀಸ ಅಥವಾ ಕ್ಯಾಡ್ಮಿಯಮ್, ಅಥವಾ ಎರಡನ್ನೂ ಹಾನಿಕಾರಕ ಮಟ್ಟದಲ್ಲಿ ಹೊಂದಿವೆ.
ಡಾರ್ಕ್ ಚಾಕೊಲೇಟ್ ಬಾರ್‌ಗಳು, ಮಿಲ್ಕ್ ಚಾಕೊಲೇಟ್ ಬಾರ್‌ಗಳು, ಕೋಕೋ ಪೌಡರ್, ಚಾಕೊಲೇಟ್ ಚಿಪ್‌ಗಳು ಮತ್ತು ಬ್ರೌನಿಗಳಿಗೆ ಮಿಶ್ರಣಗಳು, ಚಾಕೊಲೇಟ್ ಕೇಕ್ ಮತ್ತು ಹಾಟ್ ಚಾಕೊಲೇಟ್ - ಈ 7 ವಿಭಾಗಗಳಲ್ಲಿನ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ವಾಲ್‌ಮಾರ್ಟ್ ಕಂಪನಿಯ ಡಾರ್ಕ್ ಚಾಕೊಲೇಟ್ ಬಾರ್ ಮತ್ತು ಹಾಟ್ ಚಾಕೊಲೇಟ್ ಮಿಕ್ಸ್, ಹರ್ಶಿ ಮತ್ತು ಡ್ರೊಸ್ಟೆಯ ಕೋಕೋ ಪೌಡರ್, ಟಾರ್ಗೆಟ್ ಕಂಪನಿಯ ಸೆಮಿ ಸ್ವೀಟ್ ಚಾಕೊಲೇಟ್ ಚಿಪ್ಸ್ ಹಾಗೂ ಟ್ರೇಡರ್ ಜೋ, ನೆಸ್ಲೆ, ಸ್ಟಾರ್‌ಬಕ್ಸ್ ಕಂಪನಿಗಳ ಹಾಟ್ ಚಾಕೊಲೇಟ್ ಮಿಕ್ಸ್ಗಳಲ್ಲಿ ಮಿತಿಮೀರಿದ ಲೋಹದ ಅಂಶಗಳು ಪತ್ತೆಯಾಗಿವೆ.
ಸೀಸ ಅತಿಹೆಚ್ಚು ಇರುವ ಚಾಕಲೇಟ್ ಗಳು, ಕ್ಯಾಡ್ಮಿಯಂ ಅತಿ ಹೆಚ್ಚು ಇರುವ ಚಾಕಲೇಟ್ ಗಳು ಹಾಗು ಇವೆರಡೂ ಅತಿ ಹೆಚ್ಚು ಇರುವ ಚಾಕಲೇಟ್ ಗಳ ಪಟ್ಟಿಯನ್ನು ವರದಿ ನೀಡಿದೆ. ಇವುಗಳಲ್ಲಿ ಹೆಚ್ಚಿನವು ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್ ಗಳು. ಆದರೆ ಈಗ ಬಹುತೇಕ ಎಲ್ಲ ವಿದೇಶಿ ಬ್ರ್ಯಾಂಡ್ ಗಳ ಚಾಕಲೇಟ್ ಗಳು ನಮ್ಮಲ್ಲೇ ಸಿಗುತ್ತಿವೆ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ಅತ್ಯಂತ ಅಗತ್ಯ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಕೂಡ ಕನ್ಸೂಮರ್ ರಿಪೋರ್ಟ್ಸ್ ಇಂಥ ಪರೀಕ್ಷೆ ನಡೆಸಿತ್ತು. ಪರೀಕ್ಷೆಗೆ ಒಳಪಡಿಸಿದ 28 ಡಾರ್ಕ್ ಚಾಕೊಲೇಟ್ ಬಾರ್‌ಗಳಲ್ಲಿ 23ರಲ್ಲಿ ಮಿತಿಮೀರಿದ ಸೀಸ ಅಥವಾ ಕ್ಯಾಡ್ಮಿಯಮ್ ಇದ್ದುದು ಪತ್ತೆಯಾಗಿತ್ತು. ಹರ್ಶಿ ಉತ್ಪನ್ನಗಳು ಮತ್ತು ಲಿಲಿ ಮತ್ತು ಸ್ಕಾರ್ಫೆನ್ ಬರ್ಗರ್ ಬ್ರಾಂಡ್‌ಗಳು ಅವುಗಳಲ್ಲಿ ಸೇರಿದ್ದವು. ಸೀಸ ಮತ್ತು ಕ್ಯಾಡ್ಮಿಯಂ ಸಾಮಾನ್ಯವಾಗಿ ಎಲ್ಲ ಚಾಕಲೇಟ್ ಗಳಲ್ಲಿ ಇರುತ್ತವೆ. ಚಾಕಲೇಟ್ ಗೆ ಬಳಸುವ ಕೊಕೊವಾ ಬೆಳೆಯುವಾಗಲೇ ಅದು ಸೀಸ ಹಾಗು ಕ್ಯಾಡ್ಮಿಯಂ ಅನ್ನು ಹೀರಿಕೊಂಡಿರುತ್ತದೆ. ಆದರೆ ಈಗ ಇವೆರಡರ ಪ್ರಮಾಣ ಚಾಕಲೇಟ್ ಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ.
ಇವು ತರುವ ಹಾನಿಯೇನು?:
ಸೀಸ ಮತ್ತು ಕ್ಯಾಡ್ಮಿಯಮ್ಗಳ ದೀರ್ಘ ಕಾಲದ ಸೇವನೆಯಿಂದ ನರಮಂಡಲದ ಸಮಸ್ಯೆಗಳು, ರೋಗನಿರೋಧಕ ವ್ಯವಸ್ಥೆಯಲ್ಲಿ ವ್ಯತ್ಯಯ, ಮೂತ್ರಪಿಂಡದ ಹಾನಿ ಮತ್ತು ಸಂತಾನೋತ್ಪತ್ತಿ ಸಮಸ್ಯೆಯಂಥ ಗಂಭೀರ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಕ್ಯಾಡ್ಮಿಯಂ ಕ್ಯಾನ್ಸರ್ ರೋಗಕ್ಕೆ ಹಾಗು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಸೀಸದ ದೀರ್ಘಕಾಲೀನ ಬಳಕೆಯಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ, ಉಸಿರಾಟದ ಸಮಸ್ಯೆಗಳು ತಲೆದೋರಬಹುದು.
ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಲ್ಲಿ ಇವು ಇನ್ನೂ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು ಎಂಬುದು ಕನ್ಸೂಮರ್ ರಿಪೋರ್ಟ್ಸ್ ಎಚ್ಚರಿಕೆ. ಮಕ್ಕಳು ಮಾತ್ರವಲ್ಲದೆ ಯಾವುದೇ ವಯಸ್ಸಿನವರಲ್ಲಿಯೂ ಇದು ಅಪಾಯವನ್ನು ತರಬಲ್ಲದು ಎನ್ನುತ್ತಾರೆ ಪರಿಣಿತರು. ಉತ್ಪನ್ನಗಳಲ್ಲಿ ಈ ಲೋಹಗಳ ಪ್ರಮಾಣ ತಗ್ಗಿಸುವಂತೆ ಅಮೆರಿಕದ ಅತ್ಯಂತ ದೊಡ್ಡ ಚಾಕೊಲೇಟ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಹರ್ಶಿಗೆ ಅದು ಸೂಚಿಸಿರುವುದಾಗಿಯೂ ರಾಯ್ಟರ್ಸ್ ವರದಿ ಮಾಡಿದೆ.