×
Ad

​'ಮೋದಿ' ಮಾನಹಾನಿ ಪ್ರಕರಣ: ರಾಹುಲ್ ಶಿಕ್ಷೆಗೆ ತಡೆ ಸಿಗುವುದೇ ?

Update: 2023-07-20 19:28 IST

ರಾಹುಲ್ ಗಾಂಧಿ | Photo: PTI

- ಆರ್. ಜೀವಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ​ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದಾರೆ. ಸಂಸತ್ ಸ್ಥಾನ ಉಳಿಸಿಕೊಳ್ಳಲು ಮಾತ್ರವಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗಿರುವ ಕೊನೆಯ ದಾರಿ ದೇಶದ ಪರಮೋಚ್ಚ ನ್ಯಾಯಾಲಯ ಮಾತ್ರ. ಅಲ್ಲಿ ಅವರ ಪರ ತೀರ್ಪು ಬರದಿದ್ದರೆ ಅವರು ಮುಂದಿನ ಎಂಟು ವರ್ಷಗಳ ಕಾಲ ಯಾವುದೇ ಚುನಾವಣೆ ಎದುರಿಸುವಂತಿಲ್ಲ. ಹಾಗಾಗಿ ಈಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ ಹಾಗು ಅದರ ತೀರ್ಪು.

ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿರುವ ತಮ್ಮ ಶಿಕ್ಷೆಯ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಎದುರು ಇಟ್ಟಿರುವ ವಾದಗಳು ಬಹಳ ಕುತೂಹಲಕಾರಿಯಾಗಿವೆ. ಅವುಗಳನ್ನು ವಿವರವಾಗಿ ನಿಮ್ಮ ಮುಂದಿಡುವ ಮುನ್ನ ರಾಹುಲ್ ಗಾಂಧಿ ಏಕೆ ಈಗ ಇಷ್ಟು ಚರ್ಚೆಯಲ್ಲಿದ್ದಾರೆ , ಯಾಕೆ ಇಷ್ಟು ಪ್ರಬಲ ಬಿಜೆಪಿ ಹಾಗು ಅದರ ಅತ್ಯಂತ ಪ್ರಭಾವೀ ನಾಯಕರು ರಾಹುಲ್ ಗಾಂಧಿ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಎಂಬುದನ್ನು ನಾವು ಗಮನಿಸಬೇಕಾಗಿದೆ.

ಒಂದು ಕಾಲವಿತ್ತು. ರಾಹುಲ್ ಗಾಂಧಿ ಪಪ್ಪು, ರಾಹುಲ್ ಗಾಂಧಿ ಬಾಯಿ ತೆರೆದರೆ ಏನಾದರೂ ಎಡವಟ್ಟು ಮಾಡಿಕೊಂಡು ನಮಗೆ ಲಾಭ ಮಾಡ್ತಾರೆ, ಅವರು ಚುನಾವಣಾ ಪ್ರಚಾರಕ್ಕೆ ಹೋದರೆ ಸಾಕು, ಅಲ್ಲಿ ಬಿಜೆಪಿಯೇ ವಿನ್ ಆಗುತ್ತೆ, ಅಷ್ಟು ದುರ್ಬಲ ನಾಯಕ ರಾಹುಲ್ ಗಾಂಧಿ ಎಂದು ಬಿಜೆಪಿ, ಅದರ ನಾಯಕರು,ಅದರ ಐಟಿ ಸೆಲ್ , ಅದರ ಬೆಂಬಲಿಗ ಮಾಧ್ಯಮಗಳು ತಮಾಷೆ ಮಾಡಿದ್ದೇ ಮಾಡಿದ್ದು. ಇವರೆಲ್ಲರೂ ಸೇರಿಕೊಂಡು ವ್ಯವಸ್ಥಿತವಾಗಿ ರಾಹುಲ್ ಗಾಂಧಿ ಅಂದ್ರೆ ಯಾವುದೇ ಕಾರ್ಟೂನ್ ಕ್ಯಾರೆಕ್ಟರ್ ಅನ್ನೋ ಥರದ ಇಮೇಜ್ ಅನ್ನು ಜನರಲ್ಲಿ ಸೃಷ್ಟಿಸಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಈಗ ರಾಹುಲ್ ಗಾಂಧಿ ಹೋದಲ್ಲೆಲ್ಲ ಜನ ಅವರನ್ನು ಮುತ್ತಿಕೊಳ್ತಾರೆ. ರಾಹುಲ್ ಗಾಂಧಿ ಜನರೊಂದಿಗೆ ಯಾವುದೇ ಕೃತಕತೆ ಇಲ್ಲದೆ ಬೆರೀತಾರೆ. ಹಿರಿಯರು, ಕಿರಿಯರು, ಪುರುಷರು, ಮಹಿಳೆಯರು, ಕಾರ್ಮಿಕರು, ರೈತರು ಎಲ್ಲರೊಳಗೊಂದಾಗಿ ಬಿಡುತ್ತಾರೆ ರಾಹುಲ್ ಗಾಂಧಿ. ಇನ್ನು ಅವರ ಮಾತುಗಳೂ ಅಷ್ಟೇ. ಈಗ ದೇಶದ ಅತ್ಯಂತ ಜನಸಾಮಾನ್ಯರಿಂದ ಹಿಡಿದು ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಬುದ್ದಿಜೀವಿಗಳು ಅವರ ಪ್ರಬುದ್ಧ, ಮುಕ್ತ, ಕಾಳಜಿಯುಕ್ತ ಮಾತುಗಳಿಗೆ ಫಿದಾ ಆಗ್ತಾ ಇದ್ದಾರೆ.

ರಾಹುಲ್ ಗಾಂಧಿ ಅವರೂ ಅಷ್ಟೇ. ಎಲ್ಲ ಹಿಂಜರಿಕೆ ಬಿಟ್ಟು ಪ್ರತಿದಿನವೆಂಬಂತೆ ದೇಶದ ಒಂದೊಂದೇ ಭಾಗದ, ಒಂದೊಂದೇ ಕ್ಷೇತ್ರದ ಜನರನ್ನು ಭೇಟಿಯಾಗಿ ಅವರಲ್ಲೇ ಒಬ್ಬರಂತೆ ಅವರ ಸುಖ,ದುಃಖ, ದುಮ್ಮಾನಗಳನ್ನು ಆಲಿಸಿ ಅವರಿಗೆ ಭರವಸೆ ತುಂಬುತ್ತಿದ್ದಾರೆ. ಒಟ್ಟಾರೆ ನಾಳೆ ಅವರು ಓಟು ಪಡೀತಾರೋ ಇಲ್ವೋ. ಆದರೆ ಶುದ್ಧ ಮನಸ್ಸಿನ, ಪ್ರಬುದ್ಧ ಚಿಂತನೆಯ, ಸಹಜತೆಯೇ ತುಂಬಿಕೊಂಡಿರುವ, ಕೃತಕತೆ ಇಲ್ಲದ ರಾಹುಲ್ ಈಗ ದೇಶದೆಲ್ಲೆಡೆ ಜನಮನ ಗೆಲ್ಲುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶ ಆಳುತ್ತಿರುವವರ ವೈಫಲ್ಯಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಮಾತಾಡುತ್ತಿದ್ದಾರೆ ರಾಹುಲ್ ಗಾಂಧಿ. ಯಾವುದೇ ಮುಚ್ಚುಮರೆಯಿಲ್ಲದೆ ಮೋದಿ ಸರಕಾರದ ವಿರುದ್ಧ ಇರುವ ಒಂದೊಂದೇ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ, ಅವರ ಕಾರ್ಯವೈಖರಿಯಿಂದಾದ ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ಮಾತಾಡುತ್ತಿದ್ದಾರೆ.

ಯಾವ ರಾಹುಲ್ ಗಾಂಧಿ ಯಾವುದಕ್ಕೂ ಸಲ್ಲದ ವ್ಯಕ್ತಿ ಎಂದು ಮೋದಿ, ಅಮಿತ್ ಶಾ ಹಾಗು ಇಡೀ ಬಿಜೆಪಿ ಜರೆಯುತ್ತಿದ್ದರೋ ಅದೇ ರಾಹುಲ್ ಗಾಂಧಿ ಇಂದು ಅವರಿಗೆ ಕಂಟಕದಂತೆ ಕಾಣುತ್ತಿದ್ದಾರೆ. ಒಂದು ಕಡೆ ರಾಹುಲ್ ಗಾಂಧಿ ಜನಪ್ರಿಯತೆಯ ಗ್ರಾಫ್ ಇನ್ನಿಲ್ಲದಂತೆ ಏರುತ್ತಿದೆ. ಇನ್ನೊಂದು ಕಡೆ ರಾಹುಲ್ ಗಾಂಧಿ ಬಿಜೆಪಿ ಹಾಗು ಮೋದಿ ವಿರುದ್ಧ ಒಂದಿಷ್ಟೂ ರಿಯಾಯಿತಿ ನೀಡದೆ ಮಾತಾಡುತ್ತಿದ್ದಾರೆ.

ರಾಹುಲ್ ಗಾಂಧಿ ಸಂಸತ್ತಿನಲ್ಲಿ, ಅದಾನಿ ಮಾಡಿದ್ದಾರೆ ಎನ್ನಲಾದ ಹಗರಣಗಳ ಬಗ್ಗೆ ಹಾಗು ಅವರಿಗೂ ಪ್ರಧಾನಿಗೂ ಇದೆ ಎನ್ನಲಾದ ನಂಟಿನ ಬಗ್ಗೆ ಮಾತಾಡಿದ ಬೆನ್ನಿಗೇ ಗುಜರಾತ್ ನ ಸೂರತ್ ನ್ಯಾಯಾಲಯದಲ್ಲಿ ಅವರಿಗೆ ಮೋದಿ ಉಪನಾಮ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷಗಳ ಶಿಕ್ಷೆಯಾಯಿತು. ಶಿಕ್ಷೆ ಪ್ರಕಟವಾದ ಬೆನ್ನಿಗೇ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಅವರ ಮನೆಯಿಂದಲೂ ಅವರನ್ನು ಹೊರಹಾಕಲಾಯಿತು. ಮೊನ್ನೆ ಗುಜರಾತ್ ಹೈಕೋರ್ಟ್ ಕೂಡ ಅತ್ಯಂತ ನ್ಯಾಯಯುತವಾದ ತೀರ್ಪು ಎಂದು ಸೂರತ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.

ರಾಹುಲ್ ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಈ ಹಿಂದೆ ವಕೀಲರಾಗಿದ್ದಾಗ ಗುಜರಾತ್ ಹತ್ಯಾಕಾಂಡದಲ್ಲಿ ಜೈಲು ಸೇರಿದ್ದ ಸಚಿವೆ ಮಾಯಾ ಕೊಡ್ನಾನಿ ಪರ ವಾದಿಸಿದ್ದರು. ಸೂರತ್ ನ್ಯಾಯಾಲಯದ ನ್ಯಾಯಾಧೀಶರು ವಕೀಲರಾಗಿದ್ದಾಗ ಅಮಿತ್ ಶಾ ಪರ ವಾದಿಸಿದವರು. ಇದನ್ನು ಕೇವಲ ಮಾಹಿತಿಗಾಗಿ ನಿಮಗೆ ಹೇಳುತ್ತಿದ್ದೇವೆ. ಅವರ ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಗೂ ಈ ಎರಡೂ ಮಾಹಿತಿಗಳಿಗೂ ಯಾವುದೇ ಸಂಬಂಧವಿಲ್ಲ.

​ಈಗ ಮೋದಿ ಉಪನಾಮ ಮಾನಹಾನಿ ​ಮೊಕದ್ದಮೆಯಲ್ಲಿ ತಮಗೆ ವಿಧಿಸಲಾಗಿರೋ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ​ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಹತ್ತು ಪ್ರಮುಖ ಆಧಾರಗಳನ್ನು ಅವರು ತಮ್ಮ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.​ ಅವುಗಳನ್ನು ಒಂದೊಂದಾಗಿ ನಿಮ್ಮ ಮುಂದಿಡುತ್ತೇವೆ. ​

1. ಮೋದಿ ಎಂಬುದು ವ್ಯಾಖ್ಯಾನವಿರದ ಅಸ್ಪಷ್ಟ ಗುಂಪು: ಐಪಿಸಿ ಸೆಕ್ಷನ್ 499/500ರಡಿ, ನಿರ್ದಿಷ್ಟ ಗುಂಪಿನ ವಿಚಾರದಲ್ಲಿನ ಟೀಕೆ ಮಾತ್ರ ಮಾನನಷ್ಟ ಅಪರಾಧವೆನ್ನಿಸುತ್ತದೆ. ಆದರೆ ಮೋದಿ ಎಂಬುದು ವ್ಯಾಖ್ಯಾನಿಸದ ಒಂದು ಅಸ್ಪಷ್ಟ ಗುಂಪು. ದೇಶದ ವಿವಿಧೆಡೆ ವಾಸಿಸುವ ಮತ್ತು ವಿವಿಧ ಸಮುದಾಯಗಳಿಗೆ ಸೇರಿದ ಸುಮಾರು 13 ಕೋಟಿ ಜನರನ್ನು ಈ ಅಸ್ಪಷ್ಟ ಗುಂಪು ಹೊಂದಿದೆ. ಮೋದಿ ಎಂಬ ಪದ ಐಪಿಸಿ ಸೆಕ್ಷನ್ 499ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಸಂಘ ಅಥವಾ ವ್ಯಕ್ತಿಗಳ ಸಮೂಹದ ಯಾವುದೇ ವರ್ಗದಲ್ಲಿ ಬರುವುದಿಲ್ಲ.

2. ​ನನ್ನ ವಿರುದ್ಧ ದೂರು ನೀಡಿರುವುದು ​​​ಪೂರ್ಣೇಶ್ ಈಶ್ವರಭಾಯಿ ಮೋದಿ ​. ಆದರೆ ನನ್ನ ​ ​ಹೇಳಿಕೆ ದೂರುದಾರರ ವಿರುದ್ಧ ಅಲ್ಲ: ಲಲಿತ್ ಮೋದಿ ಮತ್ತು ನೀರವ್ ಮೋದಿ ಹೆಸರು ಪ್ರಸ್ತಾಪದ ನಂತರ, ​" ​ಎಲ್ಲಾ ಕಳ್ಳರಿಗೂ ಒಂದೇ ಉಪನಾಮ ಏಕೆ​ "​ ಎಂದು ಕೇಳಿದ್ದು ನಿರ್ದಿಷ್ಟ ವ್ಯಕ್ತಿಗಳಿಗೆ ಸಂಬಂಧಿಸಿ. ನಿರ್ದಿಷ್ಟ ಸಂದರ್ಭದಲ್ಲಿನ ಈ ಹೇಳಿಕೆಯಿಂದ ದೂರುದಾರರಾದ ​​ಪೂರ್ಣೇಶ್ ಈಶ್ವರಭಾಯಿ ಮೋದಿ ಅವರಿಗೆ ಮಾನಹಾನಿಯಾಗಲು ಸಾಧ್ಯವಿಲ್ಲ.​ ​ಈ ಹೇಳಿಕೆ ಪೂರ್ಣೇಶ್ ಮೋದಿಯ ಕುರಿತು ಆಗಿರಲಿಲ್ಲ​. ಆದ್ದರಿಂದ ಅವರ ದೂರು ತಪ್ಪು​. ​ಅಂದ ಹಾಗೆ ಈ ಪೂರ್ಣೇಶ್ ಮೋದಿ ​ಅವರು ಗುಜರಾತ್ ನ ಬಿಜೆಪಿ ಶಾಸಕರು.

3. ​ನಾನು ನೀಡಿರುವ ಹೇಳಿಕೆ ​ತನಗೇಕೆ ಸಂಬಂಧಪಡುತ್ತದೆ ಎಂದು ದೂರುದಾರ​ ​ಪೂರ್ಣೇಶ್ ​ ಮೋದಿ​ ತೋರಿಸಿಲ್ಲ​. ದೂರುದಾರ ಮೋದಿ ಉಪನಾಮ ಹೊಂದಿದ್ದು, ಯಾವುದೇ ನಿರ್ದಿಷ್ಟ ಅಥವಾ ವೈಯಕ್ತಿಕ ಬಗೆಯಲ್ಲಿ ತನ್ನ ಮಾನಹಾನಿ ಹೇಗೆ ಆಗಿದೆ ಎಂದು ತೋರಿಸಿಲ್ಲ. ಅಲ್ಲದೆ, ದೂರುದಾರ ತಾನು ​​ಮೋಡ್ ವಾಣಿಕ ಸಮಾಜದಿಂದ ಬಂದಿರುವುದಾಗಿ ಒಪ್ಪಿಕೊಂಡಿದ್ದು, ಈ ಪದ​ ಹಾಗು ಮೋದಿ ಪದ ಬೇರೆ ಬೇರೆ. ಮೋದಿ ಉಪನಾಮ ವಿವಿಧ ಜಾತಿಗಳಲ್ಲಿದೆ.

4. ​ನನಗೆ ​ಮಾನಹಾನಿ ಉದ್ದೇಶವಿಲ್ಲ: ಈ ಹೇಳಿಕೆ 2019ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಾಡಿದ ರಾಜಕೀಯ ಭಾಷಣದ ಭಾಗ. ದೂರುದಾರರ ಮಾನಹಾನಿ ಉದ್ದೇಶ ಇದರಲ್ಲಿಲ್ಲ.

5. ಅಪರಾಧಕ್ಕೆ ಕಠಿಣ ಶಿಕ್ಷೆ ಅಗತ್ಯ ಎಂದು ಹೈಕೋರ್ಟ್ ತಪ್ಪಾಗಿ ಹೇಳಿದೆ​. ಪ್ರಜಾಸತ್ತಾತ್ಮಕ ಸಂದರ್ಭದಲ್ಲಿ, ಆರ್ಥಿಕ ಅಪರಾಧಿಗಳನ್ನು ಮತ್ತು ಪ್ರಧಾನಿಯನ್ನು ಟೀಕಿಸುವ ರಾಜಕೀಯ ಭಾಷಣವನ್ನು ಕಠಿಣ ಶಿಕ್ಷೆ ನೀಡಬೇಕಾದ ನೈತಿಕ​ ​​ಅಧಪತನ ಎಂದು ಪರಿಗಣಿಸಲಾಗಿದೆ. ಚುನಾವಣಾ ಪ್ರಚಾರದ ವೇಳೆಯ ವಾಕ್ ಸ್ವಾತಂತ್ರ್ಯಕ್ಕೆ ಇದು ತೀವ್ರ ಹಾನಿಕಾರಕ. ಪ್ರಶ್ನೆಯೆತ್ತುವ ಯಾವುದೇ ರೀತಿಯ ರಾಜಕೀಯ ಸಂವಾದ ಅಥವಾ ಚರ್ಚೆಯನ್ನು ಇಲ್ಲವಾಗಿಸುವ ವಿನಾಶಕಾರಿ ಮಾದರಿಯನ್ನು ಇದು ಹುಟ್ಟುಹಾಕುತ್ತದೆ.

6. ಕೇವಲ 2 ವರ್ಷಗಳ ಗರಿಷ್ಠ ಶಿಕ್ಷೆಯಿರುವ ಅಪರಾಧಕ್ಕೆ ನೈತಿಕ ​ಅಧಪತನ ಎಂಬ ಪದ ಅನ್ವಯಿಸುವುದಿಲ್ಲ. ಜಾಮೀನು ನೀಡಬಹುದಾದ ಮತ್ತು ವಾರಂಟ್ ಇಲ್ಲದೆ ಬಂಧಿಸಲಾಗದ ಈ ಅಪರಾಧವನ್ನು ಘೋರ ಎಂದು ಪರಿಗಣಿಸಲಾಗದು.

ನೈತಿಕ ​ಅಧಪತನ ಎಂದು ಪರಿಗಣಿತವಾಗುವುದು ಮೂರು ಆಧಾರಗಳ ಮೇಲೆ.

ಕೃತ್ಯ ಸಮಾಜದ ನೈತಿಕ ಆತ್ಮಸಾಕ್ಷಿಗೆ ಆಘಾತ ತಂದಿದೆಯೆ?

ಕೃತ್ಯ ​ಮಾನಹಾನಿಯ ಮೂಲ ಉದ್ದೇಶ ಹೊಂದಿದೆಯೆ?

ಕೃತ್ಯದಿಂದಾಗಿ ವ್ಯಕ್ತಿಯನ್ನು ಭ್ರಷ್ಟ ಅಥವಾ ಸಮಾಜದ ದೃಷ್ಟಿಯಲ್ಲಿ ಕೀಳೆಂದು ಪರಿಗಣಿಸಬಹುದಾಗಿದೆಯೆ?

ಇಲ್ಲಿ ದೂರುದಾರ ಒಬ್ಬರೇ ಆಗಿರುವುದರಿಂದ, ಸಮಾಜದ ನೈತಿಕ ಆತ್ಮಸಾಕ್ಷಿಗೆ ಆಘಾತವಾಗಿದೆ ಎಂಬ ಯಾವುದೇ ಪುರಾವೆಗಳಿಲ್ಲ.ಹೇಳಿಕೆ ನೀಡಿದ ಸಂದರ್ಭದ ಭಾಷಣ ರಾಜಕೀಯ ವ್ಯಂಗ್ಯದ ಭಾಗವಾಗಿದ್ದು, ಆರ್ಥಿಕ ಅಪರಾಧಿಗಳು ಮತ್ತು ಸರ್ಕಾರದ ಪ್ರಮುಖರ ನಡುವಿನ ಸಂಬಂಧದ ಬಗ್ಗೆ ಹೇಳಿದೆ. ರಾಜಕೀಯ ವಿಡಂಬನೆಯನ್ನು ​ಮಾನಹಾನಿಯ ಮೂಲ ಉದ್ದೇಶ ಎಂದು ಪರಿಗಣಿಸಿದರೆ, ಸರ್ಕಾರ ಅಥವಾ ಯಾವುದೇ ಇತರ ರಾಜಕೀಯ ಪಕ್ಷ ಕುರಿತ ರಂಜನೀಯ ಟೀಕೆಯುಳ್ಳ ರಾಜಕೀಯ ಭಾಷಣ ಅಥವಾ ತಮಾಷೆ ಧಾಟಿಯ ಭಾಷಣವೂ ನೈತಿಕ ​ಅಧಪತನ ಎನಿಸಿಕೊಳ್ಳುತ್ತದೆ. ಇದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶಪಡಿಸುತ್ತದೆ. ನೈತಿಕ ​ಅಧಪತನ​ದ​ ಮೂಲವಾದ ​ಭ್ರಷ್ಟತನ ಮತ್ತು ನೀಚತನ ​. ​ಇವು ಅತ್ಯಾಚಾರ, ಕೊಲೆ, ಘೋರ ಹಿಂಸಾಚಾರ ಮತ್ತಿತರ ಅಪರಾಧಗಳೊಂದಿಗೆ ಸಂಬಂಧ ಹೊಂದಿವೆ. ರಾಜಕೀಯ ವಿಡಂಬನಾತ್ಮಕ ಹೇಳಿಕೆಯನ್ನು ನೈತಿಕ ಅಧಃಪತನದ ಕೃತ್ಯವೆಂದು ನಿರೂಪಿಸಲಾಗದು.

7. ​ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಶಿಕ್ಷೆ ವಿಧಿಸಿರುವುದರಿಂದ, ವಯನಾಡ್ ಕ್ಷೇತ್ರದಿಂದ 4.3 ಲಕ್ಷ ಮತಗಳ ಭಾರೀ ಅಂತರದಿಂದ ಗೆದ್ದ ಸಂಸದನನ್ನು ಅನರ್ಹಗೊಳಿಸಲಾಗಿದೆ. ಶಿಕ್ಷೆ ತಡೆಗೆ ನಿರಾಕ​ರಿಸಿರುವುದು​ ಪ್ರಮುಖ ವಿರೋಧಿ ಧ್ವನಿಯನ್ನು ಭವಿಷ್ಯದ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ತಡೆಯುತ್ತದೆ.

8. ಶಿಕ್ಷೆ ತಡೆಗೆ ಮೂಲಭೂತ ಮಾನದಂಡಗಳನ್ನು ಹೈಕೋರ್ಟ್ ನಿರ್ಲಕ್ಷಿಸಿದೆ​. ಶಿಕ್ಷೆ ರದ್ದತಿಗೆ ಸೂಚಿಸುವ ಎರಡು ಮುಖ್ಯ ಮಾನದಂಡಗಳೆಂದರೆ, ಒಂದು, ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳಿಗಿಂತ ಕಡಿಮೆ​ಯಲ್ಲದ​ ಅವಧಿಯ ಜೈಲು ಶಿಕ್ಷೆಯಂಥ ಯಾವುದೇ ಗಂಭೀರ ಅಪರಾಧವಾಗಿರಕೂಡದು; ಎರಡನೆಯದಾಗಿ, ನೈತಿಕ ​ಅಧಪತನ​ದಿಂದಾದ ಅಪರಾಧವಾಗಿರಕೂಡದು. ಇವೆರಡೂ ಅಲ್ಲದಿರುವಾಗಲೂ ಹೈಕೋರ್ಟ್ ನೈತಿಕ ​ಅಧಪತನ ಅಪರಾಧದ ತಪ್ಪು ಅರ್ಥೈಸುವಿಕೆ ಮೂಲಕ ಶಿಕ್ಷೆ ರದ್ದತಿಗೆ ನಿರಾಕರಿಸಿದೆ.

9. ಹೊರಗಿನ ವಿಚಾರಗಳ ಆಧಾರದಲ್ಲಿ ಹೈಕೋರ್ಟ್ ಕ್ರಮ: ಭಾವೋದ್ರೇಕಗೊಳಿಸುವುದು ಮತ್ತು ಪ್ರಧಾನಿಯವರ ರಾಜಕೀಯ ಪಕ್ಷದ ಅಭ್ಯರ್ಥಿಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಉದ್ದೇಶದಿಂದ ಪ್ರಧಾನಿ ಹೆಸರನ್ನು ತರಲಾಗಿದೆ ಎಂಬಂಥ ಪರಿಗಣನೆಗಳು ಶಿಕ್ಷೆ ರದ್ದು ಕೋರಿದ ಅರ್ಜಿಯ ಬಗ್ಗೆ ನಿರ್ಧರಿಸುವಲ್ಲಿ​ ಅಪ್ರಸ್ತುತ. ಅದರಲ್ಲೂ, ಪ್ರಧಾನಿ ಮೋದಿ ವಿರುದ್ಧದ ಯಾವುದೇ ಆರೋಪದ ಕಾರಣಕ್ಕಾಗಿ ಶಿಕ್ಷೆ ಆಗಿರದೇ ಇರುವಾಗ​ ಅವು​ ಸಂಪೂರ್ಣ ಅಪ್ರಸ್ತುತವಾಗಿವೆ​.

ಅಪರಾಧ ಗಂಭೀರವಾಗಿದೆಯೆ ಇಲ್ಲವೆ ಎಂಬುದನ್ನು ನಿರ್ಧರಿಸಲು ಹೈಕೋರ್ಟ್ ತೆಗೆದುಕೊಂಡಿರುವ ಮತ್ತೊಂದು ಬಾಹ್ಯ ಮತ್ತು ಹೊಸ ಅಂಶ​, ರಾಜಕೀಯದಲ್ಲಿ ಶುದ್ಧತೆ ಎಂಬುದು. ಅಪರಾಧ ಸಾಬೀತಾಗಿಲ್ಲದಿರುವಾಗಲೂ, ಬಾಕಿ ಉಳಿದಿರುವ ಪ್ರಕರಣಗಳನ್ನು ಅಪರಾಧಕ್ಕೆ ಪೂರಕವೆಂದು ಹೈಕೋರ್ಟ್ ಪರಿಗಣಿಸಿರುವುದು ಮಾತ್ರವಲ್ಲ, ಆಡಳಿತ ಪಕ್ಷ ಬಿಜೆಪಿಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳೇ ಅವೆಲ್ಲ ಪ್ರಕರಣಗಳನ್ನು ದಾಖಲಿಸಿದವರು ಎಂಬ ಪ್ರಮುಖ ಅಂಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

10. ವಾಕ್ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಹೈಕೋರ್ಟ್ ಆದೇಶ: ಆಕ್ಷೇಪಾರ್ಹ ತೀರ್ಪನ್ನು ತಡೆಹಿಡಿಯದಿದ್ದಲ್ಲಿ, ಅದು ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ​,​ ವಿಚಾರ ಸ್ವಾತಂತ್ರ್ಯ ಮತ್ತು ಮುಕ್ತ ಹೇಳಿಕೆಗೆ ಅಡ್ಡಿಯಾಗಲಿದೆ. ಇದು ಪ್ರಜಾಪ್ರಭುತ್ವದ ಸಂಸ್ಥೆಗಳ ವ್ಯವಸ್ಥಿತ, ಪುನರಾವರ್ತಿತ ಭ್ರಷ್ಟಗೊಳಿಸುವಿಕೆ ಮತ್ತು ಅದರ ಪರಿಣಾಮವಾಗಿ ಪ್ರಜಾಪ್ರಭುತ್ವದ ಕತ್ತು ಹಿಸುಕುವಿಕೆಗೆ ಕಾರಣವಾಗಲಿದೆ. ಭಾರತದ ರಾಜಕೀಯ ವಾತಾವರಣ ಮತ್ತು ಭವಿಷ್ಯಕ್ಕೆ ತೀವ್ರ ಹಾನಿಕಾರಕವಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ರಾಹುಲ್ ಗಾಂಧಿ ಅವರ ಅರ್ಜಿಯನ್ನು ಹಲವು ವಕೀಲರು ಸಿದ್ಧಗೊಳಿಸಿದ ಬಳಿಕ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅಂತಿಮಗೊಳಿಸಿದ್ದಾರೆ.

ಮಾರ್ಚ್ 23, 2023ರಂದು, ಸೂರತ್‌ನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಹುಲ್ ಅವರಿಗೆ ಈ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅದಾಗುತ್ತಿದ್ದಂತೆಯೆ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.ಏಪ್ರಿಲ್ 3 ರಂದು ರಾಹುಲ್ ಸೂರತ್ ಸೆಷನ್ಸ್ ಕೋರ್ಟ್ ಮೊರೆ ಹೋದರು. ಏಪ್ರಿಲ್ 20ರಂದು ಅವರ ಮನವಿಯನ್ನು ತಿರಸ್ಕರಿಸಲಾಯಿತು. ಬಳಿಕ ಗುಜರಾತ್ ಹೈಕೋರ್ಟ್ ಕೂಡ ಶಿಕ್ಷೆ ರದ್ದು ಕೋರಿದ್ದ ರಾಹುಲ್ ಅರ್ಜಿಯನ್ನು ತಿರಸ್ಕರಿಸಿತ್ತು.

​ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಯಲ್ಲಿ ವಿಪಕ್ಷಗಳ ಮಹಾ ಮೈತ್ರಿಕೂಟದ ಪ್ರಮುಖ ನಾಯಕನಾಗಿ ರಾಹುಲ್ ಗಾಂಧಿಯೇ ಬಿಂಬಿತರಾಗುವ ಸಾಧ್ಯತೆ ನಿಚ್ಚಳವಾಗಿದೆ. ಎಲ್ಲ ಪ್ರಮುಖ ನಾಯಕರು ಅವರನ್ನು ಬೆಂಬಲಿಸುತ್ತಿದ್ದಾರೆ. ​ಅದೇ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಎದುರು ರಾಹುಲ್ ಗಾಂಧಿ ತಮ್ಮ ಶಿಕ್ಷೆಗೆ ತಡೆ ಕೋರಿ ನಿಂತಿದ್ದಾರೆ. ಸುಪ್ರೀಂ ಕೋರ್ಟ್ ನ ತೀರ್ಪಿನ ಬಗ್ಗೆ ಯಾವುದೇ ಊಹಾಪೋಹಕ್ಕೆ ಆಸ್ಪದ ಕೊಡದೆ ಅದು ಹೇಗೆ ಬರಲಿದೆ ಎಂದು ಕಾದು ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News