ನಿಸರ್ಗ ಪ್ರವಾಸೋದ್ಯಮ ಮತ್ತು ಪರಿಸರಪ್ರಜ್ಞೆ
ನಿಸರ್ಗದೊಡಲಿನಂತಿರುವ ಬೆಟ್ಟವನ್ನು ನಗರವನ್ನಾಗಿ ಪರಿವರ್ತಿಸುತ್ತಿರುವ ಸರಕಾರಗಳು ಚಾಮುಂಡಿ ಬೆಟ್ಟದ ಪಾಲಿಗೆ ಮಾರಕವಾದ ಯೋಜನೆಗಳನ್ನೂ ಹಮ್ಮಿಕೊಳ್ಳುತ್ತವೆ. ಕೋಟ್ಯಂತರ ಜನತೆಯ ಶ್ರದ್ಧಾನಂಬಿಕೆಗಳನ್ನು ಗೌರವಿಸುತ್ತಲೇ, ಭಕ್ತಾದಿಗಳಿಗೆ ಅವಶ್ಯವಾದ ಸೌಕರ್ಯಗಳನ್ನು ಒದಗಿಸುವುದು ಅವಶ್ಯಕವೇ ಆದರೂ ಒಂದು ಬೆಟ್ಟ ಮತ್ತು ಅದರಲ್ಲಿನ ಹಸಿರು, ಅದರ ಗರ್ಭದಲ್ಲಡಗಿದ ಜಲಮೂಲಗಳು, ಅದರ ಮಡಿಲಲ್ಲಿ ವಾಸಿಸುವ ಜೀವ ಜಂತುಗಳು, ವನ್ಯಜೀವಿಗಳು ಮತ್ತು ಅವು ಜನಸಾಮಾನ್ಯರಿಗೆ ಒದಗಿಸುವ ಬದುಕುವ ನೆಲೆಗಳು ಇವೆಲ್ಲವನ್ನೂ ಅವಸಾನದಂಚಿಗೆ ತಳ್ಳುವ ಕ್ರಮಗಳು ನಾವು ಪರಿಸರ ಸೂಕ್ಷ್ಮತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ.
- ನಾ. ದಿವಾಕರ
ಕರ್ನಾಟಕದ ದಕ್ಷಿಣ ತುದಿಯಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಯೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟವನ್ನೂ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ರಾಜ್ಯ ಸರಕಾರದ ನಿರ್ಧಾರ ಸ್ವಾಗತಾರ್ಹವೇ ಆಗಿದ್ದು ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ಸರಕಾರ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ಮುಂದಾಗಿರುವುದು ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೆ ಅಭಿವೃದ್ಧಿ ಎಂಬ ಮಾರುಕಟ್ಟೆಯ ಪರಿಭಾಷೆಯಿಂದ ಹೊರಬಂದು ಸರಕಾರ ತನ್ನ ಪ್ರಾಧಿಕಾರವನ್ನು ಮುನ್ನಡೆಸುವ ಜವಾಬ್ದಾರಿಯೂ ಇದೆ. ಮೈಸೂರಿನ ಪವಿತ್ರ ಹಾಗೂ ಇತಿಹಾಸಪ್ರಸಿದ್ಧ ಚಾಮುಂಡಿ ಬೆಟ್ಟವನ್ನು ಆಧುನಿಕ ಪ್ರವಾಸೋದ್ಯಮದ ಮಾರುಕಟ್ಟೆ ದಾಳಿಯಿಂದ ತಪ್ಪಿಸುವ ನಿಟ್ಟಿನಲ್ಲಿ ‘ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ’ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದೆಲ್ಲಾ ಆಡಳಿತ ನಿರ್ವಹಣೆ, ಹಣಕಾಸು ಹಾಗೂ ಕಾಮಗಾರಿಗಳ ಜವಾಬ್ದಾರಿಯನ್ನು ನೂತನ ಪ್ರಾಧಿಕಾರವು ವಹಿಸಿಕೊಳ್ಳುವುದು ಸೂಕ್ತ ಎನಿಸುತ್ತದೆ.
ಬಹಳ ಮುಖ್ಯವಾಗಿ ಬೆಟ್ಟದ ಮೇಲೆ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳು, ನಿರ್ಮಾಣ ಕಾರ್ಯಗಳು ಮತ್ತು ಮಾರುಕಟ್ಟೆ ಪ್ರವಾಸೋದ್ಯಮವನ್ನು ಉತ್ತೇಜಿಸುವಂತಹ ಕಾಮಗಾರಿಗಳ ವಿರುದ್ಧ ಮೈಸೂರಿನ ನಾಗರಿಕರು ಹಲವು ವರ್ಷಗಳಿಂದಲೇ ಹೋರಾಟ ನಡೆಸುತ್ತಿರುವುದನ್ನೂ ಸರಕಾರ ಗಮನಿಸಬೇಕಿದೆ. ‘ಚಾಮುಂಡಿ ಬೆಟ್ಟ ಉಳಿಸಿ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಈಗಾಗಲೇ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸಹಿ ಸಂಗ್ರಹದ ಮೂಲಕ ಬೆಟ್ಟದ ಪರಿಸರವನ್ನು ಸಂರಕ್ಷಿಸುವ ಪ್ರಯತ್ನಗಳನ್ನು ನಾಗರಿಕ ಸಮಾಜದ ಸಂಸ್ಥೆಗಳು ನಡೆಸಿವೆ. ಒಂದು ಪ್ರವಾಸಿ ಕೇಂದ್ರವಾಗಿ, ಧಾರ್ಮಿಕ ಕೇಂದ್ರವಾಗಿ ಚಾಮುಂಡಿಬೆಟ್ಟದ ಅಭಿವೃದ್ಧಿ ಅತ್ಯವಶ್ಯವಾದರೂ, ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಳ್ಳಲಾಗುವ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಜನತೆ ಜಾಗೃತರಾಗಬೇಕಿದೆ. ಈಗಾಗಲೇ ಬೆಟ್ಟದ ಮೇಲೆ ವಸತಿಗೃಹಗಳು, ಅತಿಥಿಗೃಹ, ಪಾರ್ಕಿಂಗ್ ತಾಣ, ವಾಣಿಜ್ಯ ಕಟ್ಟಡಗಳು ಮುಂತಾದ ಕಾಮಗಾರಿಗಳ ನಡುವೆ ಹಿಂದಿನ ಸರಕಾರವು ಪ್ರಸಾದ ಯೋಜನೆಯಡಿ ಅನುಮತಿ ನೀಡಿರುವುದು ಪರಿಸರವಾದಿಗಳಲ್ಲಿ ಆತಂಕವನ್ನೂ ಮೂಡಿಸಿದೆ.
ಏಕೆಂದರೆ ನವ ಉದಾರವಾದದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಸರಕಾರಗಳ ಬೊಕ್ಕಸ ತುಂಬಿಸುವ ಪ್ರಮುಖ ವಲಯವಾಗಿದ್ದು, ಸರಕಾರಗಳು ಪ್ರಸಿದ್ಧ ಯಾತ್ರಾಸ್ಥಳಗಳನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಪರಿಸರ ಸೂಕ್ಷ್ಮತೆಗಳನ್ನೂ ಲೆಕ್ಕಿಸದೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೆಟ್ಟ ಪ್ರದೇಶಗಳನ್ನು ಕಾಂಕ್ರಿಟ್ ಕಾಡುಗಳನ್ನಾಗಿ ಪರಿವರ್ತಿಸುತ್ತವೆ. ಈ ಅಭಿವೃದ್ಧಿಯ ಮಾದರಿ ಸೃಷ್ಟಿಸುವ ಅನಾಹುತಗಳನ್ನು ಜೋಷಿಮಠ, ಕೇದಾರನಾಥ ಮತ್ತು ಇತರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಕಾಣುತ್ತಲೇ ಇದ್ದೇವೆ. ಚಾಮುಂಡಿ ಬೆಟ್ಟವೂ ನಿಸರ್ಗದ ಒಂದು ಸುಂದರ ತಾಣವಾಗಿದ್ದು, ಇಲ್ಲಿ ಆಧುನಿಕ ಸ್ವರೂಪದ ಅಭಿವೃದ್ಧಿಯ ಕಾಮಗಾರಿಗಳಿಗೆ ಅವಕಾಶ ನೀಡುವುದು ಹಾನಿಕಾರಕವಾಗುತ್ತದೆ. ದೇವಿಕೆರೆಗೆ ಹೊಸ ರೂಪ ನೀಡುವ ಭರದಲ್ಲಿ ಹೂಳೆತ್ತುವ ಕಾಮಗಾರಿಗೂ ಚಾಲನೆ ನೀಡಲಾಗಿದ್ದು ಆಧುನಿಕ ಮಾದರಿಯ ಟೈಲ್ಸ್ ಹಾಕಿದ ರಸ್ತೆಗಳನ್ನು ನಿರ್ಮಾಣ ಮಾಡುವುದರಿಂದ, ಜನಸಂಚಾರ ಮತ್ತು ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬ ಆತಂಕವನ್ನೂ ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.
1,500 ಎಕರೆಗೂ ಹೆಚ್ಚು ಅರಣ್ಯ ಪ್ರದೇಶದ ಚಾಮುಂಡಿಬೆಟ್ಟದಲ್ಲಿ 550 ಜಾತಿಯ ಸಸ್ಯ-ವೃಕ್ಷಗಳು, 150 ಜಾತಿಯ ಚಿಟ್ಟೆಗಳು, 90 ಜಾತಿಯ ಪಕ್ಷಿಗಳು, 10 ಚಿರತೆಗಳು ಇರುವುದನ್ನು ಪರಿಸರ ಇಲಾಖೆಯೇ ಗುರುತಿಸಿದೆ. ಚಾಮುಂಡಿಬೆಟ್ಟ ಮೈಸೂರಿನ ಜಲಾನಯನ ಪ್ರದೇಶವಾಗಿದ್ದು 20 ಕೆರೆಗಳಿಗೆ ನೀರು ಉಣಿಸುತ್ತದೆ. ಹಾಗಾಗಿ ಚಾಮುಂಡಿ ಬೆಟ್ಟ ಕಾಂಕ್ರಿಟ್ಮಯವಾದಷ್ಟೂ ಅಂತರ್ಜಲಕ್ಕೆ ಹಾನಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟವನ್ನು ಅಭಿವೃದ್ಧಿಪಡಿಸುವ ಯಾವುದೇ ಯೋಜನೆ ಈ ನಿಸರ್ಗ ವೈವಿಧ್ಯ ಮತ್ತು ನೈಸರ್ಗಿಕ ಸಂಪತ್ತು ನಾಶವಾಗದಂತೆ ಎಚ್ಚರವಹಿಸುವುದು ಅತ್ಯವಶ್ಯ. ಈ ಕಾರಣಕ್ಕಾಗಿಯೇ ಬೆಟ್ಟಕ್ಕೆ ರೋಪ್ವೇ ನಿರ್ಮಿಸುವ ಐಷಾರಾಮಿ ಯೋಜನೆಯನ್ನೂ ವಿರೋಧಿಸಲಾಗುತ್ತಿದೆ. ಪಶ್ಚಿಮ ಘಟ್ಟಗಳಿಂದ ಹಿಡಿದು ಕೋಲಾರದ ನಂದಿಬೆಟ್ಟದವರೆಗೆ ಬೋಳಾಗುತ್ತಿರುವ ಬೆಟ್ಟಗಳ ಪೈಕಿ ಮೈಸೂರಿನ ಚಾಮುಂಡಿ ಬೆಟ್ಟವೂ ಒಂದು ಎನ್ನುವ ಸೂಕ್ಷ್ಮ ಸಂಗತಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ನಿಸರ್ಗದೊಡಲಿನಂತಿರುವ ಬೆಟ್ಟವನ್ನು ನಗರವನ್ನಾಗಿ ಪರಿವರ್ತಿಸುತ್ತಿರುವ ಸರಕಾರಗಳು ಚಾಮುಂಡಿ ಬೆಟ್ಟದ ಪಾಲಿಗೆ ಮಾರಕವಾದ ಯೋಜನೆಗಳನ್ನೂ ಹಮ್ಮಿಕೊಳ್ಳುತ್ತವೆ. ಕೋಟ್ಯಂತರ ಜನತೆಯ ಶ್ರದ್ಧಾನಂಬಿಕೆಗಳನ್ನು ಗೌರವಿಸುತ್ತಲೇ, ಭಕ್ತಾದಿಗಳಿಗೆ ಅವಶ್ಯವಾದ ಸೌಕರ್ಯಗಳನ್ನು ಒದಗಿಸುವುದು ಅವಶ್ಯಕವೇ ಆದರೂ ಒಂದು ಬೆಟ್ಟ ಮತ್ತು ಅದರಲ್ಲಿನ ಹಸಿರು, ಅದರ ಗರ್ಭದಲ್ಲಡಗಿದ ಜಲಮೂಲಗಳು, ಅದರ ಮಡಿಲಲ್ಲಿ ವಾಸಿಸುವ ಜೀವ ಜಂತುಗಳು, ವನ್ಯಜೀವಿಗಳು ಮತ್ತು ಅವು ಜನಸಾಮಾನ್ಯರಿಗೆ ಒದಗಿಸುವ ಬದುಕುವ ನೆಲೆಗಳು ಇವೆಲ್ಲವನ್ನೂ ಅವಸಾನದಂಚಿಗೆ ತಳ್ಳುವ ಕ್ರಮಗಳು ನಾವು ಪರಿಸರ ಸೂಕ್ಷ್ಮತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ.
ನಾಗರಿಕತೆಯನ್ನು ಮೈಗೂಡಿಸಿಕೊಂಡು, ಸಾಕ್ಷರತೆಯನ್ನು ಪ್ರತಿಶತ ಸಾಧಿಸಿ ಒಂದು ಸುಂದರ ಸಮಾಜವನ್ನು ನಿರ್ಮಿಸುವ ಹಂತದಲ್ಲಿರುವ ಒಂದು ದೇಶದಲ್ಲಿ ಹಸಿರು ಮತ್ತು ಉದ್ಯಮ ಮುಖಾಮುಖಿಯಾದಾಗ ಉದ್ಯಮ ನೇಪಥ್ಯಕ್ಕೆ ಸರಿಯಬೇಕು, ಹಸಿರು ಉಳಿಯಬೇಕು. ಆದರೆ ಭಾರತ ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ನಡೆಯುತ್ತಿದೆ. ಇಲ್ಲಿ ಹಸಿರು ಉದ್ಯಮದ ಕಚ್ಚಾವಸ್ತುವಾಗಿ ಪರಿಣಮಿಸಿದೆಯೇ ಹೊರತು ಆಕರವಾಗಿ ಉಳಿದಿಲ್ಲ. ಹಾಗಾಗಿಯೇ ಹಸಿರು ಕಾಡುಗಳ ನಡುವೆ ಕಂಗೊಳಿಸುವ ಶ್ರದ್ಧಾ ನಂಬಿಕೆಯ ಸ್ಥಾವರಗಳೂ ಸಹ ಉದ್ಯಮದ ಅಡಿಪಾಯಗಳಾಗುತ್ತಿವೆ. ತೀರ್ಥಯಾತ್ರೆಗೂ ಪ್ರವಾಸಕ್ಕೂ ಅಂತರ ಕಡಿಮೆಯಾಗುತ್ತಿರುವ ಆಧುನಿಕ ಜಗತ್ತಿನಲ್ಲಿ, ಆರಾಧನಾ ಕೇಂದ್ರಗಳೆಲ್ಲವೂ ಪ್ರವಾಸಿಗರ ಮನತಣಿಸುವ ಔದ್ಯಮಿಕ ರಮ್ಯ ಸ್ಥಾವರಗಳಾಗಿ ಪರಿವರ್ತನೆಯಾಗುತ್ತಿರುವುದನ್ನು ರಾಮೇಶ್ವರದಿಂದ ಸೋಮನಾಥದವರೆಗೂ ನೋಡಬಹುದು. ಇದರ ಲಾಭ ಪಡೆಯುತ್ತಿರುವುದು ಲಾಭಕೋರ ಬಂಡವಾಳಶಾಹಿಗಳು ಮತ್ತು ಮಾರುಕಟ್ಟೆ ಶಕ್ತಿಗಳು.
ಆಧುನಿಕ ಜಗತ್ತಿನಲ್ಲಿ ಜನಸಾಮಾನ್ಯರಿಗೆ ಸಾಂತ್ವನ ಒದಗಿಸುವ ಈ ಆರಾಧನಾ ಕೇಂದ್ರಗಳು ನಿತ್ಯಾರಾಧನೆಯ ಕೇಂದ್ರಗಳಾಗಿ ಕಾಣುವುದರಿಂದ ಕ್ರಮೇಣ ಪೂಜಾ ಕೇಂದ್ರಗಳಾಗಿ ಪರಿವರ್ತನೆಯಾಗುತ್ತವೆ. ಮನುಷ್ಯನ ಅಂತರಂಗದಲ್ಲಡಗಿರಬೇಕಾದ ಆರಾಧನೆಯ ಭಾವಕ್ಕೆ ಬಾಹ್ಯ ಜಗತ್ತಿನ ತೋರಿಕೆಯ ಪೂಜಾ ಸಂಸ್ಕೃತಿಯ ಸ್ಪರ್ಶ ಆಗತೊಡಗಿದಂತೆಯೇ ಪೂಜಾ ಕೇಂದ್ರಗಳು ನಿರ್ದಿಷ್ಟ ಜಾತಿ, ಮತ, ಪಂಥ ಮತ್ತು ಸಾಮುದಾಯಿಕ ಅಸ್ಮಿತೆಗಳ ಚೌಕಟ್ಟಿಗೊಳಪಟ್ಟು, ಆಧುನಿಕ ಬದುಕಿನ ಒಂದು ಭಾಗವಾಗಿಬಿಡುತ್ತದೆ. ಧಾರ್ಮಿಕ ಶ್ರದ್ಧಾನಂಬಿಕೆಗಳೇ ಪ್ರಧಾನವಾಗಿರುವ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಇದು ಸಹಜವಾಗಿದೆ. ಈ ಹೊಸ ಲೋಕದ ಆಶಯಗಳಿಗನುಗುಣವಾಗಿ ತೀರ್ಥಸ್ಥಳಗಳೂ ಪ್ರವಾಸಿ ತಾಣಗಳಾಗಿ ಬದಲಾಗುವುದು ಸಹ ಸಹಜವೇ ಆಗಿದೆ. ಪ್ರವಾಸ ಎನ್ನುವುದು ಮನುಷ್ಯನ ಬದುಕಿನ ಒಂದು ಆಂಶಿಕ ಭಾಗವಾಗಿರುವುದರಿಂದ, ಪ್ರವಾಸಕ್ಕೆ ಅವಕಾಶ ಮಾಡಿಕೊಡುವ ತಾಣಗಳೆಲ್ಲವೂ ಆಧುನಿಕ ಜಗತ್ತಿಗೆ ಪೂರಕವಾಗಿಯೇ ಅಭಿವೃದ್ಧಿ ಹೊಂದುವುದು ಅನಿವಾರ್ಯವಾಗುತ್ತದೆ.
ಆದರೆ ಜನಸಾಮಾನ್ಯರ ಶ್ರದ್ಧಾಭಕ್ತಿಗಳನ್ನು ಗೌರವಿಸುತ್ತಲೇ ಐತಿಹಾಸಿಕ ಪೂಜಾಕೇಂದ್ರಗಳನ್ನೂ, ಯಾತ್ರಾಸ್ಥಳಗಳನ್ನೂ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಸುತ್ತಲಿನ ಪರಿಸರವನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಆಡಳಿತ ವ್ಯವಸ್ಥೆಯ ಮೇಲಿರುತ್ತದೆ. ನಿಸರ್ಗ ರಮ್ಯ ಹಸಿರು ತಾಣಗಳು ಆಧುನಿಕ ಜಗತ್ತಿನ ಐಷಾರಾಮಿ ಬದುಕಿಗೆ ಬಲಿಯಾಗುತ್ತಿದ್ದರೆ ನಿರ್ದಿಷ್ಟ ಮತಕೇಂದ್ರಿತ ಪೂಜಾ ಕೇಂದ್ರಗಳನ್ನೊಳಗೊಂಡ ಹಸಿರು ಬೆಟ್ಟಗಳು ಪ್ರವಾಸಿಗರ, ಭಕ್ತಾದಿಗಳ ಡಾಂಭಿಕತೆಗೆ ಬಲಿಯಾಗುತ್ತಿವೆ. ದೇವಸ್ಥಾನಕ್ಕೆ ಹೋಗುವವರಿಗೆ ಇತರ ಎಲ್ಲಾ ಸರಕುಗಳು, ಮನರಂಜನೆ, ಐಷಾರಾಮಿ ಸವಲತ್ತುಗಳು ಲಭ್ಯವಾಗುವಂತಹ ಮಾರುಕಟ್ಟೆ ಬಂಡವಾಳದ ತಂತ್ರಕ್ಕೆ ಬಲಿಯಾಗುತ್ತಿರುವುದು ಬೆಟ್ಟಗಳ ಹೊದಿಕೆಯಾಗಿದ್ದ ಹಸಿರು ವೃಕ್ಷಗಳು ಮತ್ತು ಜೀವ ವೈವಿಧ್ಯತೆ ಹಾಗೂ ನಿಸರ್ಗದ ಒಡಲು. ಚಾಮುಂಡಿಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡರೆ ದೊಡ್ಡ ಸುದ್ದಿಮಾಡುವ ನಾವು, ಈ ಚಿರತೆಯಿಂದ ಬೆಟ್ಟಕ್ಕೆ ಅಪಾಯವಾಗುವುದಿಲ್ಲ ಎಂಬ ವಾಸ್ತವವನ್ನು ಗ್ರಹಿಸುವುದೇ ಇಲ್ಲ. ಚಿರತೆ, ಹುಲಿಗಳಿಗಿಂತಲೂ ಅಪಾಯಕಾರಿಯಾದ ಮೋಜು ಮಸ್ತಿ ಮಾಡುವ ಮನುಷ್ಯರು ಬೆಟ್ಟದ ಅಂದಗೆಡಿಸುವುದರಲ್ಲಿ ನಿರತರಾಗಿರುತ್ತಾರೆ.
ಯಾತ್ರಾಸ್ಥಳಗಳಲ್ಲಿ ಪರಿಸರ ಸೂಕ್ಷ್ಮತೆಯನ್ನೂ ಲೆಕ್ಕಿಸದೆ ವಾಣಿಜ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಸರಕಾರಗಳ ‘ಪ್ರವಾಸೋದ್ಯಮ’ ನೀತಿಯ ಒಂದು ಭಾಗವಾಗಿಬಿಡುತ್ತದೆ. ಹಾಗಾಗಿ ಐತಿಹಾಸಿಕ ಪೂಜಾ ಕೇಂದ್ರಗಳಲ್ಲಿ ಬಂಡವಾಳ ಹೂಡುವ ಮಾರುಕಟ್ಟೆ ಶಕ್ತಿಗಳು ಭಕ್ತಾದಿಗಳನ್ನು ಆಕರ್ಷಿಸಲು ನಿರ್ಮಿಸುವ ಅಂಗಡಿ ಮಳಿಗೆಗಳ ಸಾಲುಗಳು, ರೆಸಾರ್ಟ್ಗಳು, ಬೃಹತ್ ಕಟ್ಟಡಗಳು ಈ ಸುಂದರ ಹಸಿರು ಬೆಟ್ಟಗಳನ್ನು ಬೆಂಗಾಡುಗಳನ್ನಾಗಿ ಮಾಡುತ್ತವೆ. ನವ ಉದಾರವಾದದ ದಾಳಿ ತೀವ್ರವಾಗುತ್ತಿದ್ದಂತೆಲ್ಲಾ ಮೈಸೂರಿನ ಚಾಮುಂಡೇಶ್ವರಿ ಶಾಪಿಂಗ್ ಮಾಲ್ಗಳಿಗೆ ಆಶ್ರಯ ನೀಡುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು. ಈಗಾಗಲೇ ವಾಹನ ನಿಲುಗಡೆಗಾಗಿಯೇ ಎಕರೆಗಟ್ಟಲೆ ಭೂಮಿಯನ್ನು ಆಕ್ರಮಿಸಲಾಗಿದೆ. ಮಧ್ಯಮ ವರ್ಗಗಳನ್ನು ಪೋಷಿಸುವ ವ್ಯಾಪಾರಿ ಮಳಿಗೆಗಳಿಗಾಗಿ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಬಹುಶಃ ಇವೆಲ್ಲವನ್ನೂ ಮೀರುವ ಹೆಲಿಪ್ಯಾಡ್, ಶಾಪಿಂಗ್ ಮಾಲ್ ಮತ್ತು ಐಷಾರಾಮಿ ಹೋಟೆಲುಗಳು/ರೆಸಾರ್ಟುಗಳು ಕದ ತಟ್ಟುತ್ತಿವೆ. ಹಾಗಾಗಿಯೇ ಪ್ರವಾಸೋದ್ಯಮ ಇಲಾಖೆಗೆ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಆಕಾಂಕ್ಷೆಯೂ ಗರಿಗೆದರಿದೆ. ವಾಣಿಜ್ಯ ಚಟುವಟಿಕೆಗಳಿಗಾಗಿ ಅರಣ್ಯ ಭೂಮಿಯ ಒತ್ತುವರಿಯೂ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಒತ್ತುವರಿ ಹಾಗೂ ಕಟ್ಟಡ ಕಾಮಗಾರಿಯ ಪರಿಣಾಮವಾಗಿಯೇ ವಾಹನ ಸಂಚಾರವೂ ಹೆಚ್ಚಾಗಿ, ಕಳೆದ ವರ್ಷ ಹಲವು ಬಾರಿ ಭೂ ಕುಸಿತಗಳು ಉಂಟಾಗಿವೆ. ಇದು ಬೆಟ್ಟದ ಅರಣ್ಯ ಭೂಮಿಯನ್ನೇ ನಂಬಿ ಬದುಕುವ ಕೆಲವೇ ಸಮುದಾಯಗಳ ಬದುಕಿಗೆ ಮಾರಕವಾಗಿ ಪರಿಣಮಿಸುತ್ತದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯ ಸರಕಾರ ರಚಿಸಿರುವ ‘ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ’ ಭಕ್ತಾದಿ ಜನಸಮೂಹಗಳ ಶ್ರದ್ಧಾನಂಬಿಕೆಗಳಿಗೆ ಧಕ್ಕೆ ಉಂಟಾಗದಂತೆ, ಬೆಟ್ಟದ ಪರಿಸರ ಸಂಸ್ಥೆಯಾಗಿ ಸ್ವಾರ್ಥ ಹಿತಾಸಕ್ತಿಗಳ ಆಶ್ರಯತಾಣವಾಗದೆ, ಮೈಸೂರಿನ ನಾಗರಿಕರ ಸ್ವಾಯತ್ತ ಸಂಸ್ಥೆಯಾಗಿ ನಗರದ ಸೌಂದರ್ಯಕ್ಕೆ ಮುಕುಟ ಎನಿಸಿರುವ ಚಾಮುಂಡಿ ಬೆಟ್ಟದ ನಿಸರ್ಗದ ಬೆರಗನ್ನು ಕಾಪಾಡುವ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಿದೆ. ಇಲ್ಲಿ ಸಾರ್ವಜನಿಕರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಬೇಕಾದ್ದು ಅತ್ಯವಶ್ಯ.