×
Ad

ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಮತ್ತೊಂದು ದುರಂತ

Update: 2023-10-28 14:25 IST

Photo: canva.com

ಆ ಅಮಾಯಕ, ಬಡ ಮಕ್ಕಳು ಆ ಸರಕಾರಿ ಆಸ್ಪತ್ರೆಗೆ ಬಂದಿದ್ದು ತಮಗಿದ್ದ ತಲಸೇಮಿಯ ಎಂಬ ಕಾಯಿಲೆಗೆ ಚಿಕಿತ್ಸೆ ಪಡೆಯಲು.

ಆದರೆ ಅಲ್ಲಿ ಆಗಿದ್ದೇನು ?. ಈಗಾಗಲೇ ಇರುವ ಕಾಯಿಲೆ ಜೊತೆಗೆ ಎಚ್ ಐ ವಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ನಂತಹ ಮಾರಕ ಸೋಂಕಿಗೆ ಆ ನಿರಪರಾಧಿ ಮಕ್ಕಳು ತುತ್ತಾಗಿದ್ದಾರೆ. ಆ ಮಕ್ಕಳು ಈಗ ಎದುರಿಸುತ್ತಿರುವ ಪರಿಸ್ಥಿತಿಯನ್ನು ಸುಮ್ಮನೆ ಊಹಿಸಿದರೂ ನಮ್ಮ ಮೈ ನಡುಗಿ ಹೋಗುತ್ತದೆ. ತಲೆ ನಾಚಿಕೆಯಿಂದ ತಗ್ಗಿಬಿಡುತ್ತದೆ.

ಈ ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ದುರವಸ್ಥೆಗೆ ಮುಟ್ಟಿದೆ ಎಂಬುದು ಮತ್ತೆ ಮತ್ತೆ ಬಯಲಾಗುತ್ತಲೇ ಇದೆ. ಆದರೆ ​ಈಗ ನಡೆದಿರುವುದು ಅಷ್ಟೇ ಆಘಾತಕಾರಿಯೂ ತೀವ್ರ ಕಳವಳ ಹುಟ್ಟಿಸುವ ಸಂಗತಿಯೂ ಆಗಿದೆ.

ಮೊನ್ನೆಮೊನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರಿ ಆಸ್ಪತ್ರೆಯಲ್ಲಿನ ದುರವಸ್ಥೆ ಮತ್ತು ಸರ್ಕಾರದ ನಿಷ್ಕಾಳಜಿ ಹೇಗೆ ಮಕ್ಕಳೂ ಸೇರಿದಂತೆ ಹಲವು ಜೀವಗಳನ್ನು ಬಲಿ ಪಡೆಯಿತು ಎಂಬುದನ್ನು ನೋಡಿದ್ದೇವೆ. ದೇಶವನ್ನೇ ಬೆಚ್ಚಬೀಳಿಸಿದ ಮಹಾರಾಷ್ಟ್ರ ಆಸ್ಪತ್ರೆಗಳಲ್ಲಿನ ದುರಂತದ ಬಳಿಕ ಈಗ ಮತ್ತೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರದ ಆಸ್ಪತ್ರೆಯಲ್ಲಿ ರಕ್ತಪೂರಣಕ್ಕೆ ಒಳಗಾಗಿದ್ದ 14 ಮಕ್ಕಳು ಎಚ್‌ಐವಿ, ​ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಯಂತಹ ಸೋಂಕಿಗೆ ತುತ್ತಾಗಿರುವ ಅತ್ಯಂತ ಕಳವಳಕಾರಿ ಘಟನೆ ವರದಿಯಾಗಿದೆ. ಕಾನ್ಪುರದಲ್ಲಿನ ಸರ್ಕಾರಿ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ರಕ್ತಪೂರಣಕ್ಕೆ ಒಳಗಾಗಿದ್ದ ಮಕ್ಕಳು ​ಈಗ ಕಂಗಾಲಾಗಿದ್ದಾರೆ.

ತಲಸ್ಸೆಮಿಯ ಎಂಬ ರಕ್ತ ಸಂಬಂಧಿತ ಕಾಯಿಲೆಯಿಂದ ಈಗಾಗಲೇ ಬಳಲುತ್ತಿದ್ದ ಮಕ್ಕಳು ಈಗ ಆಸ್ಪತ್ರೆ​ಗಳ ಯಡವಟ್ಟಿನಿಂದ ​ಇನ್ನೂ ಹಲವು ಬಗೆಯಲ್ಲಿ ಬಲಿಪಶುಗಳಾಗುವಂತಾಗಿದೆ. 6ರಿಂದ 16 ವರ್ಷದ ಈ ಮಕ್ಕಳು ಕಾನ್ಪುರ ನಗರ, ಫರೂಖಾಬಾದ್, ಇಟಾವಾ, ಕನೌಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಸೇರಿದವರು. ಈ 14 ಮಕ್ಕಳ ಪೈಕಿ 7 ಮಕ್ಕಳಲ್ಲಿ ಹೆಪಟೈಟಿಸ್ ಬಿ, 5 ಮಕ್ಕಳಲ್ಲಿ ಹೆಪಟೈಟಿಸ್ ಸಿ ಮತ್ತು ಇಬ್ಬರಲ್ಲಿ ಎಚ್‌ಐವಿ ಸೋಂಕು ಕಂಡುಬಂದಿರುವುದಾಗಿ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಅರುಣ್ ಆರ್ಯ ಮಾಹಿತಿ ನೀಡಿರುವುದಾಗಿ ವರದಿಗಳು ಹೇಳುತ್ತಿವೆ.

ಇರುವ ಆರೋಗ್ಯ ಸಮಸ್ಯೆ ಬಗೆಹರಿಸಬೇಕಿದ್ದ ಆಸ್ಪತ್ರೆಗಳಲ್ಲಿ ಮಕ್ಕ​ಳು ಮತ್ತೊಂದು ​ಗಂಭೀರ ಸೋಂಕಿಗೆ ತುತ್ತಾಗುವ ಹಾಗಾಗಿರುವುದು ​ ಆ ಮಕ್ಕಳು ಹಾಗು ಅವರ ಕುಟುಂಬದ ಪಾಲಿಗೆ ಅದೆಷ್ಟು ದೊಡ್ಡ ಆಘಾತ ನೀಡಿರಬಹುದು ?. ರಕ್ತದಾನಿಗಳ ರಕ್ತವನ್ನು ಈಗಿನ ವೈರಸ್ ಸೋಂಕುಗಳ ಹಿನ್ನೆಲೆಯಲ್ಲಿ ತಪಾಸಣೆ ಮಾಡದೇ ಪೂರಣ ಮಾಡಿರುವುದು ಇದಕ್ಕೆ ಕಾರಣವಾಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಲಾಗಿದೆ.

ಈಗ ಆ ರಕ್ತಪೂರಣಕ್ಕೆ ಒಳಗಾದ ಮಕ್ಕಳಲ್ಲಿ ಆನುವಂಶೀಯ ಸಮಸ್ಯೆಗಳೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ವೈದ್ಯರು ವ್ಯಕ್ತಪಡಿಸುತ್ತಿರುವ ಮತ್ತೊಂದು ಆತಂಕ. ತಲಸ್ಸೆಮಿಯ ಕಾಯಿಲೆಗೊಳಗಾಗಿರುವ 180 ಮಕ್ಕಳು ಈ ಕೇಂದ್ರದಲ್ಲಿದ್ದು, ವೈರಸ್ ಸೋಂಕಿನ ತಪಾಸಣೆಯನ್ನು ಪ್ರತಿ 6 ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಅಂಥ ಸಂದರ್ಭದಲ್ಲಿಯೇ ಈ 14 ಮಕ್ಕಳು ಸೋಂಕಿಗೆ ಒಳಗಾಗಿರುವುದು ದೃಢವಾಗಿದೆ.

ಈ ಮಕ್ಕಳು ಖಾಸಗಿ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ರಕ್ತಪೂರಣ ಮಾಡಿಸಿಕೊಂಡವರು ಎನ್ನಲಾಗಿದೆ. ಕೆಲವರಂತೂ ತುರ್ತು ವೈದ್ಯಕೀಯ ಸಂದರ್ಭದಲ್ಲಿ ಸ್ಥಳೀಯ ಕೇಂದ್ರಗಳಲ್ಲೆಲ್ಲೋ ರಕ್ತಪೂರಣಕ್ಕೆ ಒಳಗಾದವರೂ ಇದ್ದಾರೆ. ನಿಖರವಾದ ಕಾರಣ ಅಸ್ಪಷ್ಟವಾಗಿದ್ದರೂ, ವಿಂಡೋ ಅವಧಿ ಅಂದರೆ ಪ್ರಮಾಣೀಕೃತ ತಪಾಸಣೆ ನಡೆಸಿದ ಅವಧಿಯಲ್ಲಿ ವೈರಸ್ ಪತ್ತೆಯಾಗದೆ, ಅನಂತರ ಸೋಂಕಿಗೆ ತುತ್ತಾಗಿರುವ ಅವಧಿಯಲ್ಲಿ ರಕ್ತಪೂರಣ ನಡೆದಿರಬಹುದು ಎಂಬುದು ಡಾ.ಆರ್ಯ ಅವರ ಅನುಮಾನ.

ಅಂದರೆ, ಮಕ್ಕಳ ವಿಚಾರವಾಗಿ ಯಾವ ಕೇಂದ್ರಗಳಲ್ಲಿಯೂ ಎಷ್ಟು ಕಾಳಜಿ ವಹಿಸಬೇಕಿತ್ತೊ ಅದನ್ನು ವಹಿಸಲಾಗಿಲ್ಲ ಎಂಬುದು ​ಅತ್ಯಂತ ಸ್ಪಷ್ಟ. ಇದರಿಂದಾಗಿ, ಈಗಾಗಲೇ ಗಂಭೀರ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಮಕ್ಕಳು ಈಗ ಇನ್ನೂ ಹೆಚ್ಚಿನ ಅಪಾಯಕ್ಕೆ ಒಳಗಾಗುವಂತಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಈಗ ಸೋಂಕಿನ ಮೂಲ ಹುಡುಕುವ ಪ್ರಯತ್ನದಲ್ಲಿದ್ದಾರಾದರೂ, ಸೋಂಕಿಗೆ ಒಳಗಾಗಿಬಿಟ್ಟಿರುವ ಮಕ್ಕಳ ​ಆತಂಕಕಾರಿ ಸ್ಥಿತಿಯ ಹೊಣೆ ಹೊರುವವರು ಯಾರು?.

ಆವರನ್ನು ದೊಡ್ಡ ಅಪಾಯದಲ್ಲಿ ಸಿಲುಕಿಸಿರುವ ಈ ವ್ಯವಸ್ಥೆಗೆ, ಈ ಸರ್ಕಾರಗಳಿಗೆ ಕೊಂಚವೂ ಅಪರಾಧಿ ಭಾವನೆ ಕಾಡುವುದಿಲ್ಲವೆ​ ?. ಎಲ್ಲವನ್ನೂ ಬರೀ ಬಾಯಿಮಾತಲ್ಲಿಯೇ ತೋರಿಸುವ ಬಿಜೆಪಿ ಮಂದಿಗೆ ಇಂಥದೊಂದು ಆರೋಗ್ಯ ಅವಘಡ ತಮ್ಮ ಆಡಳಿತದಲ್ಲಿ ಆಗಿರುವುದರ ಬಗ್ಗೆ ಸಂಕಟವಾಗುತ್ತಿಲ್ಲವೆ?. ​ನಮ್ಮ ರಾಜ್ಯದಲ್ಲಿ ಅಭೂತಪೂರ್ವ ಅಭಿವೃದ್ಧಿ ಆಗಿದೆ ಎಂದು ಉತ್ತರ ಪ್ರದೇಶ ಮಾತ್ರವಲ್ಲ ದೇಶಾದ್ಯಂತ ಪತ್ರಿಕೆಗಳಿಗೆ ಜನರ ಕೋಟಿ ಕೋಟಿ ದುಡ್ಡು ಖರ್ಚು ಮಾಡಿ ಪೇಜುಗಟ್ಟಲೆ ಜಾಹೀರಾತು ಕೊಡುವ ಆದಿತ್ಯನಾಥ್ ಈ ಘಟನೆ ಬಗ್ಗೆ ಏನಾದರೂ ಹೇಳಿದ್ದಾರಾ ?

ಬೀಡಾಡಿ ದನಗಳನ್ನು ನೋಡಿಕೊಳ್ಳಲು ಏಳು ಸಾವಿರ ಗೋಶಾಲೆಗಳನ್ನು ನಿರ್ಮಿಸಿ ಆ ಗೋಶಾಲೆಗಳಲ್ಲಿ ಎಲ್ಲ ದನಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆಯೇ ಎಂದು ಖಾತರಿಪಡಿಸಲು ಪ್ರತಿ ಜಿಲ್ಲೆಗೆ ಒಬ್ಬ ನೋಡಲ್ ಆಫೀಸರ್ ಅನ್ನು ನೇಮಿಸುವ ರಾಜ್ಯ ಆದಿತ್ಯನಾಥ್ ಅವರ ಉತ್ತರ ಪ್ರದೇಶ. ಆ ಅಧಿಕಾರಿ ಪ್ರತಿ ವಾರ ಗೋಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ತಿಂಗಳಿಗೊಮ್ಮೆ ಸರಕಾರಕ್ಕೆ ವರದಿ ಕೊಡಬೇಕು. ಇದು ಉತ್ತರ ಪ್ರದೇಶದಲ್ಲಿ ದನಗಳ ಪರಿಸ್ಥಿತಿ. ಆದರೆ ಜನರ ಪರಿಸ್ಥಿತಿ ಹೇಗಿದೆ ಅಲ್ಲಿ ? ಅಂತ ಪ್ರಶ್ನೆ ಕೇಳಿದ್ರೆ ಮುಗ್ಧ ಮಕ್ಕಳಿಗೆ ಮಾರಕ ಕಾಯಿಲೆ ಕೊಟ್ಟು ಕಳಿಸಿರುವ ಸುದ್ದಿ ಸಿಗುತ್ತದೆ.

ದೇಶದಲ್ಲಿನ ಜನರ ಆರೋಗ್ಯ ಸ್ಥಿತಿ ಬಗ್ಗೆ ಸತ್ಯ ಹೇಳುವವರನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತದೆ. ಕಡೆಗೆ ಅವರು ಉದ್ಯೋಗವನ್ನೇ ಬಿಟ್ಟುಹೋಗುವಂಥ ಸ್ಥಿತಿಯನ್ನೂ ತಂದಿಡಲಾಗುತ್ತದೆ. ದೇಶದ ಜನ ಇವರ ಹಾಳು ಆರೋಗ್ಯ ವ್ಯವಸ್ಥೆಯಿಂದ ಪ್ರಾಣ ಕಳೆದುಕೊಂಡರೂ ಪರವಾಗಿಲ್ಲ, ಸರ್ಕಾರದ ವಿರುದ್ಧ ಮಾತ್ರ ಏನನ್ನೂ ಹೇಳಬಾರದು ಎಂಬ ಇವರ ಧೋರಣೆ, ಇಂಥವರ ಆಳ್ವಿಕೆಯಲ್ಲಿ ಇನ್ನೇನಾಗಲು ಸಾಧ್ಯವಿದೆ?

ಇದೇ ಉತ್ತರಪ್ರದೇಶದಲ್ಲಿ ಇದೇ ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿಯೇ ಗೋರಖ್ಪುರ ಆಸ್ಪತ್ರೆ ದುರಂತ ಹೇಗೆ ಮಕ್ಕಳನ್ನು ಬಲಿಪಡೆಯಿತು ಎಂಬುದು ಗೊತ್ತಿದೆ. ಅಲ್ಲಿ ಮಕ್ಕಳ ಪ್ರಾಣ ಕಾಪಾಡಲು ಹೋರಾಡಿದ್ದ ವೈದ್ಯ ಡಾ.ಕಫೀಲ್ ಅವರನ್ನೇ​ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವವರೆಗೂ ಸರ್ಕಾರ ಹೋಯಿತು.

ತಪ್ಪು ಸರ್ಕಾರದ್ದಾಗಿದ್ದರೂ, ಅದನ್ನು ನಿರಪರಾಧಿಗಳ ಮೇಲೆ ಹೊರಿಸುವ ದುಷ್ಟತನವನ್ನು ಇವರು ಅನಾಯಾಸವಾಗಿ ತೋರಿಸಬಲ್ಲರು. ಆದರೆ ತಮ್ಮ ಆಡಳಿತದಲ್ಲಿ ನಿರ್ಲಕ್ಷ್ಯದ ಕಾರಣದಿಂದಾಗಿ ಜೀವಗಳು ಬಲಿಯಾದವು ಎಂಬ ಸಂಕಟ ಮಾತ್ರ ಇವರನ್ನು ಕಾಡುವುದೇ ಇಲ್ಲ. ತನ್ನ ಪ್ರಚಾರಕ್ಕಾಗಿ ಕೋಟ್ಯಂತರ ಖರ್ಚು ಮಾಡುವ ಬಿಜೆಪಿ ಸರ್ಕಾರ, ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಅಷ್ಟೇ ಅಜಾಗರೂಕತೆ, ಅಲಕ್ಷ್ಯವನ್ನು ತೋರುವುದು ಮಾತ್ರ ನಿಜಕ್ಕೂ ​ಸಂಕಟ ತರುವ ವಿಚಾರ. ಆರೋಗ್ಯ ವಿಚಾರದಲ್ಲಿ ಒಂದರ ಬೆನ್ನಲ್ಲೊಂದು ಅವಘಡಗಳು ನಡೆಯುತ್ತಲೇ ಇದ್ದರೂ ಇವರಿಗೆ ಬುದ್ಧಿ ಬರುವುದಿಲ್ಲ.

ಅಥವಾ ಇವರ ಕಾಳಜಿ ಅದಲ್ಲವೇ ಅಲ್ಲ. ಇವರಿಗೆ ತಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂಬ ಭ್ರಮೆಯನ್ನು ಹಬ್ಬಿಸುವುದು ಮಾತ್ರ ಆಗುತ್ತಿರಬೇಕು. ಆ ಭ್ರಮೆಯನ್ನು ಹಬ್ಬಿಸುವುದಕ್ಕಾಗಿ, ಸುಳ್ಳು ಪ್ರಚಾರ ಮಾಡುವುದಕ್ಕಾಗಿ ಇದೇ ಸಾರ್ವಜನಿಕರ ದುಡ್ಡು ದುಂದು ಮಾಡುವ ಇವರು ಸಾರ್ವಜನಿಕರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಏನನ್ನೂ ಮಾಡಲಾರರು. ಮಾಡುವುದೆಲ್ಲವೂ ಪ್ರಚಾರದ ದೊಡ್ಡ ದೊಡ್ಡ ಫಲಕಗಳಲ್ಲಿ ಮಾತ್ರ. ಅದೊಂದು ಜನರ ಕಣ್ಣಿಗೆ ರಾಚುತ್ತಿದ್ದರೆ ಇವರು ಸಂತೃಪ್ತರು.

ಇದು ಈ ದೇಶವನ್ನಾಳುತ್ತಿರುವವರ ಭಂಡತನ.

ಇಂಥವರ ಆಡಳಿತದಲ್ಲಿ ಜನಸಾಮಾನ್ಯರು ತಮ್ಮ ಆರೋಗ್ಯವನ್ನು ಸರ್ಕಾರ ಕಾಯುತ್ತದೆಂದು ನಂಬುವುದಾದರೂ ಹೇಗೆ ಸಾಧ್ಯವಿದೆ?. ಇವರ ಬಡಾಯಿಗಳಲ್ಲಿ ಮಾತ್ರ ಎಲ್ಲವೂ ಸುಭಿಕ್ಷ ಮತ್ತು ಸಮೃದ್ಧ.​ " ಸಬ್ ಚಂಗಾಸಿ...". ಇವರ ಇಂಥ ಧೋರಣೆಗೆ ಇನ್ನೆಷ್ಟು ಅಮಾಯಕ ಜೀವಗಳು ಅಪಾಯಕ್ಕೆ ತುತ್ತಾಗಬೇಕಾದೀತೊ ಗೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News