ಫೆಲೆಸ್ತೀನ್ ನಲ್ಲಿ ಶಾಂತಿ ನೆಲೆಸಲಿ ಎಂದು ಆಗ್ರಹಿಸುವುದು ರಾಜ್ಯದಲ್ಲಿ ಕಾನೂನು ಬಾಹಿರವೇ ?
ಫೆಲೆಸ್ತೀನ್ ಮೇಲೆ ಇಸ್ರೇಲ್ ನಿಂದ ನಿರಂತರ ಆಕ್ರಮ ನಡೆಯುತ್ತಿರುವ ಹೊತ್ತಲ್ಲಿ ಇಸ್ರೇಲ್ ಪರ ನಿಲುವನ್ನು ವ್ಯಕ್ತಪಡಿಸುತ್ತ, ಹಮಾಸ್ ದಾಳಿಯನ್ನು ಮುಸ್ಲಿಂರ ವಿರುದ್ಧ ದ್ವೇಷ ಕಾರಲು ನೆಪವಾಗಿಸುತ್ತಿರುವ ತಂತ್ರವೊಂದು ಬಿಜೆಪಿ ಮತ್ತು ಸಂಘಪರಿವಾರದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.
ಆದರೆ, ಇದರ ನಡುವೆಯೇ ಅಚ್ಚರಿಯೆಂಬಂತೆ, ಅದಕ್ಕಿಂತಲೂ ಅಪಾಯಕಾರಿಯೆಂಬಂತೆ ಕಾಣಿಸುತ್ತಿರುವುದು ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿನ ಸನ್ನಿವೇಶ. ಕೇಂದ್ರದ ನರೇಂದ್ರ ಮೋದಿ ಸರಕಾರ ಫೆಲೆಸ್ತೀನ್ ಪರ ಹೇಳಿಕೆ ಕೊಟ್ಟಿದೆ. ಫೆಲೆಸ್ತೀನ್ ಗೆ ಮಾನವೀಯ ಸಹಾಯ ಕಳಿಸಿ ಕೊಟ್ಟಿದೆ.
ಆದರೆ ರಾಜ್ಯದಲ್ಲಿ ಫೆಲೆಸ್ತೀನ್ ಪರ ಮಾತನಾಡಿದರೆ ಪೊಲೀಸರು ಕೇಸ್ ಹಾಕುತ್ತಿದ್ದಾರೆ. ಶಾಂತಿಯುತ ಪ್ರದರ್ಶನ ನಡೆಸಿದರೂ ಕೇಸ್ ದಾಖಲಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿಚಾರವಾಗಿರುವುದರಿಂದ ಪ್ರತಿಭಟನೆ ನಡೆಸುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದೆಲ್ಲ ನೆಪಗಳನ್ನು ಹೇಳಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಫೆಲೆಸ್ತೀನ್ ಪರ ನಿಲುವನ್ನು ಪ್ರಕಟಿಸಿದೆ. ಕಾಂಗ್ರೆಸ್ ಮುಖ್ಯ ಪಕ್ಷವಾಗಿರುವ ಇಂಡಿಯಾ ಒಕ್ಕೂಟ ಕೂಡ ಫೆಲೆಸ್ತೀನ್ ಪರ ಹೇಳಿಕೆ ನೀಡಿದೆ.
ಹೀಗಿರುವಾಗ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಫೆಲೆಸ್ತೀನ್ ಪರ ಶಾಂತಿಯುತ ಪ್ರದರ್ಶನಕ್ಕೆ ಏಕೆ ಅವಕಾಶ ನೀಡುತ್ತಿಲ್ಲ? ಏಕೆ ಪ್ರತಿಭಟನಾಕಾರರ ಮೇಲೆ ಕೇಸ್ ಹಾಕಲಾಗುತ್ತಿದೆ?. ಸಿದ್ದರಾಮಯ್ಯನವರ ಸರಕಾರದಲ್ಲೇ ಹೀಗಾಗುತ್ತಿರುವುದು ಏಕೆ?. ಅಥವಾ ಇದೆಲ್ಲವೂ ರಾಜ್ಯ ಸರ್ಕಾರದ ಸೂಚನೆಯಂತೆಯೇ ಆಗುತ್ತಿದೆಯೆ ಎಂಬ ಅನುಮಾನ ಕೂಡ ಮೂಡದೇ ಇರುವುದಿಲ್ಲ.
ಯಾಕೆಂದರೆ, ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಲು ಹೊರಟವರು ಸಿದ್ದರಾಮಯ್ಯನವರನ್ನು ಭೇಟಿಯಾಗಿ ಪೊಲೀಸರ ಇಂಥ ನಡೆಯ ಬಗ್ಗೆ ಗಮನಕ್ಕೆ ತಂದ ಬಳಿಕವೂ ಪೊಲೀಸರ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಫೆಲೆಸ್ತೀನ್ ಪರ ಶಾಂತಿಯುತ ಪ್ರದರ್ಶನಕ್ಕೆ ಪೊಲೀಸರು ಅನುಮತಿ ನಿರಾಕರಿಸುತ್ತಲೇ ಇದ್ದಾರೆ.
ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು ಎಂಬ ಸಂಘಟನೆ ಇದರ ಬಗ್ಗೆ ಆಕ್ಷೇಪವೆತ್ತಿದೆ. ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅದು ಬಹಿರಂಗ ಪತ್ರವನ್ನೂ ಬರೆದಿದೆ. ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿ ಕಳೆದ ಸೋಮವಾರ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆಯಲಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಬೇಕಿತ್ತು ಎಂದು ಹೇಳಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, 'ಬೆಂಗಳೂರು ಫಾರ್ ಜಸ್ಟೀಸ್ ಆ್ಯಂಡ್ ಪೀಸ್' ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಪೊಲೀಸರು ಕ್ಷುಲ್ಲಕ ಕಾರಣ ನೀಡಿ ಅನುಮತಿ ನಿರಾಕರಿಸಿದರು ಎಂಬುದು ಅದರ ದೂರು.
ಕೇಂದ್ರ ಸರ್ಕಾರವೇ ಫೆಲೆಸ್ತೀನ್ ಜನರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದರೂ, ಕರ್ನಾಟಕದಾದ್ಯಂತ ಫೆಲೆಸ್ತೀನ್ ಪರ ಪ್ರತಿಭಟನೆಗಳನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಅದು ಆರೋಪಿಸಿದೆ. ನಮ್ಮ ಪ್ರತಿಭಟನೆಯ ಹಕ್ಕನ್ನು ಪೊಲೀಸರು ಅಸಂವಿಧಾನಿಕವಾಗಿ ತಿರಸ್ಕರಿಸಿದ್ದಾರೆ ಎಂದೂ ಆರೋಪಿಸಿರುವ ಅದು, ಡಿಸಿಪಿ(ಪಶ್ಚಿಮ) ಅವರಿಗೂ ಈ ಸಂಬಂಧ ತನ್ನ ಪ್ರತಿಕ್ರಿಯೆಯನ್ನು ಬರೆದಿದೆ.
ಮುಖ್ಯಮಂತ್ರಿಗಳಿಗೆ ಅದು ಬರೆದ ಬಹಿರಂಗ ಪತ್ರದಲ್ಲಿನ ಅಂಶಗಳನ್ನು ಗಮನಿಸಬೇಕು. ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಹೊತ್ತಿನ ಸ್ಥಿತಿ ಯಾವ ರೀತಿಯಲ್ಲಿದೆ ಎಂಬುದನ್ನು ಅದು ವಿವರಿಸಿದೆ.
1.ಫೆಲೆಸ್ತೀನೀ ಜನಸಾಮಾನ್ಯರ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿಸಿರುವುದು, ಫೆಲೆಸ್ತೀನಿಯರ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವುದು, ಗಾಝಾದಲ್ಲಿನ ತೀವ್ರ ಬಿಕ್ಕಟ್ಟಿನ ಬಗ್ಗೆ ತಮಗೆ ತಿಳಿದೇ ಇದೆ.
2. ಅಲ್-ಅಹ್ಲಿ ಆಸ್ಪತ್ರೆ, ಶಾಲೆಗಳು ಮತ್ತು ಧಾರ್ಮಿಕ ಸಂಸ್ಥೆ ಗಳು ಸಹ ಬಾಂಬ್ ದಾಳಿಗೆ ಒಳಗಾಗಿವೆ.
3. ಈಗಾಗಲೇ 2,360 ಮಕ್ಕಳು ಸೇರಿದಂತೆ 5,791 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಜೊತೆಗೆ ಇಸ್ರೇಲ್ನ ಉದ್ದೇಶಿತ ದಾಳಿಗಳು ಹಲವಾರು ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ ಮತ್ತು ಶಿಕ್ಷಕರನ್ನೂ ಬಲಿ ಪಡೆದಿವೆ.
4. ಇಸ್ರೇಲಿ ಸರ್ಕಾರ 12,000 ಟನ್ ಸ್ಫೋಟಕಗಳನ್ನು ಗಾಝಾ ಮೇಲೆ ಸುರಿದಿದೆ. ಇದು 2ನೇ ವಿಶ್ವ ಸಮರದ ಸಮಯದಲ್ಲಿ ಹಿರೋಷಿಮಾದಲ್ಲಿ ಬೀಳಿಸಿದ ಬಾಂಬ್ಗಳಿಗೆ ಸಮ.
5. ಅಷ್ಟು ಮಾತ್ರವಲ್ಲದೆ, ಮಾನವೀಯ ನೆರವು ಸಾಗಿಸುವ ಬಹಳಷ್ಟು ವಾಹನಗಳನ್ನು ಗಾಝಾಕ್ಕೆ ಪ್ರವೇಶಿಸದಂತೆ ಇಸ್ರೇಲ್ ನಿಷೇಧಿಸಿದೆ.
6. ಗಾಝಾದಲ್ಲಿರುವ 22 ಲಕ್ಷ ಫೆಲೆಸ್ತೀನಿಯರಲ್ಲಿ 14 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಅಕ್ಟೋಬರ್ 23ರಂದು ಒಂದೇ ದಿನ ವೈಮಾನಿಕ ದಾಳಿಯಲ್ಲಿ 704 ಫೆಲೆಸ್ತೀನಿಯರು ಸಾವನ್ನಪ್ಪಿದರು.
ಫೆಲೆಸ್ತೀನ್ ಪರ ಭಾರತದ ನಿಲುವು ಮೊದಲಿನಿಂದಲೂ ಏನಿದೆ ಎಂಬುದನ್ನೂ ಈ ಸಂಘರ್ಷದ ಹೊತ್ತಿನಲ್ಲಿ 'ಬೆಂಗಳೂರು ಫಾರ್ ಜಸ್ಟೀಸ್ ಆ್ಯಂಡ್ ಪೀಸ್' ಸಂಘಟನೆ ನೆನಪಿಸಿದೆ.
1. ಐತಿಹಾಸಿಕವಾಗಿ ಭಾರತ ಯಾವಾಗಲೂ ಫೆಲೆಸ್ತೀನ್ ಪರ ನಿಂತಿದೆ ಮತ್ತು ಫೆಲೆಸ್ತೀನಿಯರಿಗೆ ನ್ಯಾಯಕ್ಕಾಗಿ ಒತ್ತಾಯಿಸಿದೆ.
2. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಮನಮೋಹನ್ ಸಿಂಗ್, ಮೋದಿ ಎಲ್ಲರೂ ಫೆಲೆಸ್ತೀನಿಯರ ಹಕ್ಕುಗಳ ಪರವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡ ಫೆಲೆಸ್ತೀನಿಯರ ಹಕ್ಕುಗಳ ಪರ ಮಾತನಾಡಿದೆ.
3. ಅಕ್ಟೋಬರ್ 12, 2023ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಾರ್ವಭೌಮ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯನ್ನು ಭಾರತ ಹಿಂದೆಯೂ ಬೆಂಬಲಸಿದಂತೆ ಈಗಲೂ ಬೆಂಬಲಿಸುತ್ತದೆ ಎಂದು ಹೇಳಿಕೆ ನೀಡಿದೆ.
4. ಅಂತಾರಾಷ್ಟ್ರೀ ಯ ಮಾನವೀಯ ಕಾನೂನಿನ ಮೂಲಭೂತ ನಿಯಮಗಳನ್ನು ರೂಪಿಸಿದ ನಾಲ್ಕನೇ ಜಿನೀವಾ ಒಪ್ಪಂದದ ಅಸಂಖ್ಯಾತ ಉಲ್ಲಂಘನೆಗಳಾಗಿವೆ. ಹಿಂಸಾಚಾರದ ತೀವ್ರತೆಯನ್ನು ಪರಿಗಣಿಸಿ, ವಿಶ್ವಸಂಸ್ಥೆ ಕೂಡ ಹಿಂತಿರುಗದ ಹಂತವನ್ನು ಮುಟ್ಟುವ ಮೊದಲು ಅಂತರರಾಷ್ಟ್ರೀ ಯ ಸಮುದಾಯ ತುರ್ತಾಗಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿದೆ.
ಹೀಗೆ ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಿಂದ ನರಮೇಧ ನಡೆಯುತ್ತಿರುವಾಗ ಅದನ್ನು ವಿರೋಧಿಸಿ ಅಲ್ಲಿನ ಜನರಿಗೆ ನ್ಯಾಯ ಕೇಳುವುದು ನಮ್ಮೆಲ್ಲರ ಕರ್ತವ್ಯ ಎಂದಿರುವ 'ಬೆಂಗಳೂರು ಫಾರ್ ಜಸ್ಟೀಸ್ ಆ್ಯಂಡ್ ಪೀಸ್', ಕರ್ನಾಟಕದಲ್ಲಿ ಆಗುತ್ತಿರುವುದೇನು ಎಂಬುದನ್ನು ಕಳವಳದಿಂದಲೇ ವಿವರಿಸಿದೆ.
1.ಇಲ್ಲಿ ಆಗುತ್ತಿರುವುದೇ ಬೇರೆ. ಪೊಲೀಸ್ ಇಲಾಖೆ ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸುವುದಲ್ಲದೆ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವವರ ಮೇಲೆ ಕ್ರಿಮಿನಲ್ ಪ್ರ ಕರಣಗಳನ್ನು ದಾಖಲಿಸುತ್ತಿದೆ.
2. ಪ್ರತಿಭಟನೆ ಆಯೋಜಿಸಲು ಪೊಲೀಸರು ಅನುಮತಿ ನಿರಾಕರಿಸಿದರು. ಇದರ ಬಗ್ಗೆ ಅಕ್ಟೋಬರ್ 20ರಂದು ಗೃಹ ಕಚೇರಿಯಲ್ಲಿ ತಮ್ಮನ್ನು ಭೇಟಿಯಾಗಿ ತಿಳಿಸಿದೆವು. ಇದಾದ ಮೇಲೂ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸುತ್ತಿದ್ದಾರೆ.
3. ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸಲು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಹೇಳಿದ್ದಾರೆ.
4. ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕೇವಲ ನಮ್ಮ ದೇಶದ ವಿಷಯಗಳ ಬಗ್ಗೆ ಮಾತ್ರ ಚಲಾಯಿಸಬೇಕು ಎನ್ನುವುದು ಸರಿಯಲ್ಲ. ಅಲ್ಲದೆ, ಶಾಂತಿಯುತ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎನ್ನಲು ಯಾವುದೇ ಆಧಾರವಿಲ್ಲ.
5. ಇಂಥ ಸಂದರ್ಭದಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಲು ಪೋಲಿಸರು ಒದಗಿಸಿರುವ ಕಾರಣಗಳು ಆಧಾರರಹಿತವಾಗಿವೆ. ಅವು ಸೂಕ್ತವಲ್ಲ ಮತ್ತು ಕ್ಷುಲ್ಲಕವಾಗಿವೆ.
6. ಪೋಲಿಸರು ಒಂದೆಡೆ ಪ್ರತಿಭಟನೆಗೆ ಅನುಮತಿ ನಿರಾಕರಿಸುವುದಲ್ಲದೆ, ಬೆಂಗಳೂರು, ತುಮಕೂರು, ಮೈಸೂರಿನಲ್ಲಿ ಫೆಲೆಸ್ತೀನ್ ಪರ ಪ್ರದರ್ಶನ ಮಾಡುತ್ತಿರುವವರನ್ನು ಬಂಧಿಸಿ, ಪ್ರಕರಣಗಳನ್ನು ದಾಖಲಿಸಿದ್ದಾರೆ.
7. ಬೆಂಗಳೂರಿನಲ್ಲೇ ಎರಡು ಎಫ್.ಐ.ಆರ್ ಎಂಜಿ ರಸ್ತೆ, ಮತ್ತು ತಿಲಕ್ನಗರದಲ್ಲಿ ದಾಖಲಾಗಿವೆ, ಈ ಎರಡು ಎಫ್.ಐ.ಆರ್ ದಾಖಲಾಗಿರುವುದು, ಪ್ರತಿಭಟನಾಕಾರರು ಫ್ರೀಡಂ ಪಾರ್ಕ್ ಬಿಟ್ಟು ಬೇರೆ ಕಡೆ ಪ್ರತಿಭಟನೆ ಮಾಡಿದ್ದಕ್ಕಾಗಿ. ಆದರೆ ಫ್ರೀಡಂ ಪಾರ್ಕ್ನಲ್ಲೂ ಪ್ರತಿಭಟನೆಗೆ ಅನುಮತಿ ನೀಡುತ್ತಿಲ್ಲ.
8. ಹೊಸಪೇಟೆಯಲ್ಲಿ ಫೆಲೆಸ್ತೀನ್ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸ್ ಬಂಧಿಸಿದ್ದರು.
9. ರಾಜ್ಯ ಸರ್ಕಾರದ ಇಂತಹ ಕ್ರಮಗಳು ನಾಗರಿಕರ ಪ್ರತಿಭಟನೆಯ ಮೂಲಭೂತ ಹಕ್ಕುಗಳ ಮೇಲಿನ ದಾಳಿ ಮಾತ್ರವಲ್ಲ, ಇಸ್ರೇಲ್ ನಡೆಸುತ್ತಿರುವ ನರಮೇಧದ ಬಗ್ಗೆ ಕ್ರೂರ ಉದಾಸೀನತೆಯ ಪ್ರದರ್ಶನವೂ ಹೌದು. ಇದು ಪೊಲೀಸ್ ಇಲಾಖೆಯ ಅಧಿಕಾರದ ಅನೈತಿಕ ದುರುಪಯೋಗ ಕೂಡ.
10. ಕಾಂಗ್ರೆಸ್ ಪಕ್ಷ, ಕೇಂದ್ರ ಸರ್ಕಾರ ಫೆಲೆಸ್ತೀನಿಯರ ಪರವಿರುವಾಗ ರಾಜ್ಯ ಸರ್ಕಾರ ಫೆಲೆಸ್ತೀನ್ ಪರ ಧ್ವನಿಗಳನ್ನು ಹತ್ತಿಕ್ಕುತ್ತಿರುವುದು ಖಂಡನೀಯ.
'ಬೆಂಗಳೂರು ಫಾರ್ ಜಸ್ಟೀಸ್ ಆ್ಯಂಡ್ ಪೀಸ್' ಎತ್ತಿರುವ ಪ್ರಶ್ನೆಗಳೆಂದರೆ,
1. ಆಗ್ರಾ, ಪುಣೆ, ಮುಂಬೈ, ಹೈದರಾಬಾದ್, ಕೋಝಿಕೋಡ್, ಕೊಯಂಬತ್ತೂರ್ ಮುಂತಾದ ಕಡೆ ಸಾವಿರಾರು ಜನ ಸೇರಿ ಪ್ರತಿಭಟನೆಗಳನ್ನು ಕೈಗೊಂಡಿದ್ದಾರೆ. ಆ ರಾಜ್ಯಗಳಲ್ಲಿ ಅನುಮತಿ ನೀಡುತ್ತಿರುವಾಗ ನಮ್ಮ ರಾಜ್ಯ ಏಕೆ ನೀಡುತ್ತಿಲ್ಲ?
2.ಫೆಲೆಸ್ತೀನ್ ಪರ ಹೋರಾಟಗಳನ್ನು ಹತ್ತಿಕ್ಕುತ್ತಿರುವುದು ಏಕೆ?
3.ಫೆಲೆಸ್ತೀನ್ ಜನರ ಭೂಮಿಯನ್ನು ಇಸ್ರೇಲ್ ಅಕ್ರಮವಾಗಿ ವಶಪಡಿಸಿಕೊಂಡಿರುವುದರ ವಿರುದ್ಧ ಹೋರಾಡುತ್ತಿರುವವರ ಮೇಲೆ ಎಫ್.ಐ.ಆರ್ ಏಕೆ?
ಮುಖ್ಯಮಂತ್ರಿಯವರಿಗೆ 'ಬೆಂಗಳೂರು ಫಾರ್ ಜಸ್ಟೀಸ್ ಆ್ಯಂಡ್ ಪೀಸ್' ಮಾಡಿರುವ ಒತ್ತಾಯಗಳು ಹೀಗಿವೆ:
1. ಪೊಲೀಸರು ನಮ್ಮ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಸಭೆ ಸೇರುವ ಹಕ್ಕನ್ನು ನಿರಾಕರಿಸದ ಹಾಗೆ ಖಚಿತಪಡಿಸಬೇಕು ಮತ್ತು ಪ್ರತಿಭಟನೆಗೆ ಅನುಮತಿ ನೀಡುವಂತೆ ಆದೇಶಿಸಬೇಕು.
2. ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ಹಿಂಪಡೆಯಬೇಕು.
3. ಫೆಲೆಸ್ತೀನ್ ಪರವಾಗಿ ಶಾಂತಿಯುತವಾಗಿ ಪ್ರತಿಭಟಿಸಿದವರ ವಿರುದ್ಧ ಎಫ್ಐಆರ್ಗಳನ್ನು ಏಕೆ ದಾಖಲಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಈ ಬಗ್ಗೆ ಗಮನ ಹರಿಸಿ ಇದನ್ನು ಸರಿಪಡಿಸಬೇಕು. ಹಿಂಸಾಚಾರಕ್ಕೆ ಬಹಿರಂಗವಾಗಿ ಕರೆಕೊಡುವವರು, ಅವಾಚ್ಯವಾಗಿ ಮಾತಾಡುವವರು ರಾಜಾರೋಷವಾಗಿ ತಿರುಗಾಡುತ್ತಿರುವಾಗ ಹಿಂಸೆ ಬೇಡ ಎಂದು ಕರೆ ಕೊಡುವವರನ್ನು, ಶಾಂತಿ ನೆಲೆಸಲಿ ಎಂದು ಆಗ್ರಹಿಸುವವರನ್ನು, ಮಾನವೀಯತೆ ಗೆಲ್ಲಲಿ ಎಂದು ವಿನಂತಿಸುವವರನ್ನು, ಶಾಂತಿಯುತ ಪ್ರತಿಭಟನೆ ಮಾಡುವವರನ್ನು ತಡೆಯುವುದು ಪ್ರಜಾಪ್ರಭುತ್ವದ, ನಾಗರಿಕ ಸಮಾಜದ ಲಕ್ಷಣವಲ್ಲ.