ಹುಣಸೂರು | ಕಾರಾಗೃಹದಲ್ಲಿ ದಲಿತ ವ್ಯಕ್ತಿಯ ಸಾವು; ನಿಷ್ಪಕ್ಷ ತನಿಖೆಗೆ ದಸಂಸ ಆಗ್ರಹ
ಹುಣಸೂರು, ಸೆ.18: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಾವನಪ್ಪಿದ ದಲಿತ ವ್ಯಕ್ತಿ ಮಹದೇವನ ಸಾವಿನ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ನಿಷ್ಪಕ್ಷವಾಗಿ ತನಿಖೆ ಮಾಡಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮನವಿ ಮಾಡಿದ್ದಾರೆ.
ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿದ್ದ ಮಹದೇವನ ಮೃತದೇಹವನ್ನು ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, 10 ತಿಂಗಳ ಹಿಂದೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದ ತಾಲೂಕಿನ ಕಸಬಾ ಹೋಬಳಿ, ಬಲ್ಲೇನಹಳ್ಳಿ ಗ್ರಾಮದ ಪರಿಶಿಷ್ಟ ಮಾದಿಗ ಜಾತಿಗೆ ಸೇರಿದ ಲೇಟ್ ಶಿವಣ್ಣ ಎಂಬವರ ಪುತ್ರ ಮಹದೇವ (37) ಎಂಬವರು ಸೆ.16ರಂದು ಸಂಜೆ 5:30ರ ಸಮಯದಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಾವನ್ನಪ್ಪಿದ್ದು, ಈತನ ಸಾವು ಅನುಮಾನಾಸ್ಪದವಾಗಿದೆ ಎಂದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮೈಸೂರು ಜಿಲ್ಲಾ ದಸಂಸ ಸರಕಾರವನ್ನು ಆಗ್ರಹಿಸುತ್ತದೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಮೈಸೂರಿನ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹದೇವನಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಸಂಕಷ್ಟದಲ್ಲಿರುವ ಇವರ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಕಲ್ಪಿಸಿಕೊಟ್ಟು ಈ ನೊಂದ ದಲಿತ ಕುಟುಂಬಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಸಂಸದ ಜಿಲ್ಲಾ ಸಂಘಟನಾ ಸಂಚಾಲಕ ಬಸವನಗುಡಿ ನಂಜಪ್ಪ, ಬಲ್ಲೇನಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ನಿಂಗಮ್ಮ, ಗ್ರಾಮದ ಪರಮೇಶ್, ವಿಜಿ, ಮೈಲಾರಿ, ಅಭಿಷೇಕ್, ಪಾಪಣ್ಣ, ಮೃತನ ಪತ್ನಿ ಗಿರಿಜಾ, ಮಗ ಅಭಿಷೇಕ್ ಮುಂತಾದವರು ಹಾಜರಿದ್ದರು.