×
Ad

ಇಂದು ಮೈಸೂರು ದಸರಾಕ್ಕೆ ಚಾಲನೆ

Update: 2025-09-22 00:22 IST

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025 ಅನ್ನು ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಲೇಖಕಿ ಬಾನು ಮುಷ್ತಾಕ್ ಸೋಮವಾರ ಉದ್ಘಾಟನೆ ಮಾಡಲಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಹಾಕಲಾಗಿರುವ ಭವ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸೋಮವಾರ ಬೆಳಗ್ಗೆ 10:10 ರಿಂದ 10:40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡ ದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದೀಪ ಬೆಳಗಿಸಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ನವರಾತ್ರಿ ಉತ್ಸವ ಈ ವರ್ಷ 11 ದಿನಗಳವರೆಗೆ ನಡೆಯಲಿದ್ದು ಇಂದಿನಿಂದ ದಸರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ಚಲುವರಾಯಸ್ವಾಮಿ, ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಚಾಮುಂಡಿ ಬೆಟ್ಟದ ಸುತ್ತ ಬಿಗಿ ಬಂದೋಬಸ್ತ್ :

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವುದರಿಂದ ಎದ್ದಿರುವ ವಿವಾದದ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಕಟ್ಟು ನಿಟ್ಟಿನ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜನೆ ಮಾಡಲಾಗಿದೆ.

ದಸರಾ ಉದ್ಘಾಟನೆ ವೇಳೆ ಸಾಮಾನ್ಯವಾಗಿ ಬಿಗಿ ಬಂದೋಬಸ್ತ್ ಆಯೋಜನೆ ಮಾಡಲಾಗುತ್ತದೆ. ಅದರೆ ಈ ಬಾರಿ ಕಟ್ಟು ನಿಟ್ಟಿನ ಬಿಗಿ ಭದ್ರತೆ ಒದಗಿಸಲಾಗಿದೆ. ಸಚಿವರು, ಶಾಸಕರು, ವಿಐಪಿಗಳು ಸೇರಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ನೀಡಿರುವ ಪಾಸ್ ಇದ್ದವರಿಗಷ್ಟೇ ಚಾಮುಂಡಿ ಬೆಟ್ಟಕ್ಕೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪಾಸ್ ಇದ್ದರೆ ಮಾತ್ರ ಮಾಧ್ಯಮದವರಿಗೂ ಪ್ರವೇಶ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News