ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಮಕ್ಕಳ ದಸರಾ ಸೂಕ್ತ ವೇದಿಕೆ : ಮಧು ಬಂಗಾರಪ್ಪ
ಸೆ.23: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಬೆಳಕಿಗೆ ತಂದು ಪ್ರೋತ್ಸಾಹಿಸಲು ಮಕ್ಕಳ ದಸರಾ ಸೂಕ್ತ ವೇದಿಕೆಯಾಗಿದೆ. ಮಕ್ಕಳ ದಸರಾದ ಪರಿಕಲ್ಪನೆ ಮತ್ತು ಅದರ ಪರಿಚಯವು ಶ್ಲಾಘನೀಯವಾಗಿದ್ದು, ಈ ಕಾರ್ಯಕ್ರಮವು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಸಹಾಯ ಮಾಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಕರ್ನಾಟಕ ಸರಕಾರ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ-2025 ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಕ್ಕಳ ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲಾ ಮಕ್ಕಳಿಗೆ ಎಲ್ಲವನ್ನೂ ಸರಕಾರ ಉಚಿತವಾಗಿ ನೀಡುತ್ತಿದೆ. ಪೋಷಕರು ಸರಕಾರಿ ಶಾಲೆಗಳನ್ನು ನಂಬಬೇಕು. ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಮಾತನಾಡಿದರು. ದಸರಾ ಸಂಭ್ರಮದಲ್ಲಿ ಮಕ್ಕಳು ವಿವಿಧ ಕಲಾಪ್ರಾಕಾರಗಳ ನೃತ್ಯ ರೂಪಕ ಪ್ರದರ್ಶಿಸಿ ನೋಡುಗರಿಗೆ ರಸದೌತಣ ಉಣಬಡಿಸಿದರು.
ನಾನಾ ಬಗೆಯ ವೇಷಭೂಷಣ ಧರಿಸಿ ಗಮನಸೆಳೆದರು. 9ನೇ ತರಗತಿಯ ರಕ್ಷಿತಾ ಆರ್ ಯುವ ವಿಜ್ಞಾನಿ, 2 ನೇ ತರಗತಿಯ ಚಿರಸ್ವಿ ಬಾಲಸುಬ್ರಹ್ಮಣ್ಯನ್ ವಿಶೇಷ ಪ್ರತಿಭೆ, 9ನೇ ತರಗತಿಯ ಅರ್ಪಿತ ಕಲಾಗುಡಿ ಕ್ರೀಡಾ ಕ್ಷೇತ್ರ, 10ನೇ ತರಗತಿಯ ಪ್ರಥಮ್ ಗೌಡ ಕಲಾ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಮಧು ಬಂಗಾರಪ್ಪ ಅವರಿಂದ ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಹಾಗೂ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯತ್ ನ ಉಪ ವಿಶೇಷಾಧಿಕಾರಿ ಸವಿತಾ. ಬಿ.ಎಂ, ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಸಹ ನಿರ್ದೇಶಕ ಪ್ರಕಾಶ್ ಕೆ.ಎಸ್, ಜಿಸಿಟಿಇ ಪ್ರಾಂಶುಪಾಲೆ ಮತ್ತು ಸಹ ನಿರ್ದೇಶಕಿ ರಾಜಲಕ್ಷ್ಮೀ ಕೆ., ಉಪ ನಿರ್ದೇಶಕ ಸಿ. ಆರ್. ನಾಗರಾಜಯ್ಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಲ್ಲ ವೃಂದ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಮತ್ತಿತರು ಉಪಸ್ಥಿತರಿದ್ದರು.