ಸಕಲ ಸರಕಾರಿ ಗೌರವಗಳೊಂದಿಗೆ ಸಾಹಿತಿ ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಮೈಸೂರು : ಸಕಲ ಸರಕಾರಿ ಗೌರವಗಳೊಂದಿಗೆ ಸಾಹಿತಿ ಎಸ್.ಎಲ್.ಭೈಎಪ್ಪ ಅವರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು.
ಚಾಮುಂಡಿಬೆಟ್ಟ ತಪ್ಪಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಿತು. ಹೊಯ್ಸಳ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಪುತ್ರರಾದ ಉದಯ ಶಂಕರ್, ರವಿಶಂಕರ್ ಅವರೊಂದಿಗೆ ಆಪ್ತ ಸಹಾಯಕಿ ಸಹನಾ ವಿಜಯಕುಮಾರ್ ಅವರೂ ಅಗ್ನಿಸ್ಪರ್ಶ ಮಾಡಿದರು.
ರಾಜ ಪುರೋಹಿತ ಚಂದ್ರು ಹಾಗೂ ಪುರೋಹಿತ ಮಂಜುನಾಥ್ ಅವರು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹೊಯ್ಸಳ ಬ್ರಾಹ್ಮಣ ಸಂಘದ ಅಧ್ಯಕ್ಷ ಸತ್ಯನಾರಾಯಣ ಅಂತಿಮ ಸಂಸ್ಕಾರದ ಮುಂದಾಳತ್ವ ವಹಿಸಿದ್ದರು.
ಕೇಂದ್ರ ಸರಕಾರದ ಪರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಹೂಗುಚ್ಛ ಅರ್ಪಿಸಿ ಗೌರವ ವಂದನೆ ಸಲ್ಲಿಸಿದರು.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಮಾಜಿ ಸಂಸದ ಪ್ರತಾಪ್ ಸಿಂಹ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಿವರಾಜು, ಡಿಸಿಪಿ ಬಿಂದು ಮಣಿ ಮುಂತಾದವರು ಗೌರವ ಸಲ್ಲಿಸಿದರು.