×
Ad

ಮೈಸೂರು ದಸರಾ | ಜಂಬೂ ಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆಯಲಿದೆ ರಾಜೀವ್ ಗಾಂಧಿ ಆರೋಗ್ಯ ವಿವಿಯ ʼನಶಾ ಮುಕ್ತ ಕ್ಯಾಂಪಸ್ʼ ಸ್ತಬ್ಧಚಿತ್ರ

Update: 2025-09-28 00:03 IST

ಮೈಸೂರು : ಈ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ತಬ್ಧಚಿತ್ರ ಮೆರವಣಿಗೆ ಗಮನ ಸೆಳೆಯಲಿದೆ.

ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿರುವ ‘ಆರೋಗ್ಯಕರ ಮನಸು-ನಶಾ ಮುಕ್ತ ಕ್ಯಾಂಪಸ್’ ಅಭಿಯಾನದ ಸ್ತಬ್ಧಚಿತ್ರ ದಸರಾ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಿದೆ. ದೇಶ-ವಿದೇಶದ ನಾನಾ ಭಾಗಗಳಿಂದ ಬರುವ ಪ್ರವಾಸಿಗರಲ್ಲಿ ದುಶ್ಚಟಗಳಿಂದ ಉಂಟಾಗುವ ಹಾನಿ ಹಾಗೂ ಅದರಿಂದ ಹೊರಗೆ ಬಂದಾಗ ಸಿಗುವ ಗೌರವ ಮತ್ತು ಸುಸ್ಥಿರ ಬದುಕಿನ ಬಗ್ಗೆ ಸ್ತಬ್ಧಚಿತ್ರ ಜಾಗೃತಿ ಮೂಡಿಸಲಿದೆ.

ಮಧು ಮೋಹನ್ ಆರ್ (ಇನ್ಕ್ಯೂಬ್) ವಿನ್ಯಾಸಗೊಳಿಸಿದ ಈ ಸ್ತಬ್ಧಚಿತ್ರದಲ್ಲಿ ದುಶ್ಚಟಗಳಿಗೆ ಒಳಗಾಗುವುದರಿಂದ ಹಿಡಿದು ಆ ವಿಷವರ್ತುಲದಿಂದ ಪಾರಾಗುವವರೆಗಿನ ಪಯಣವನ್ನು ಚಿತ್ರಿಸಲಾಗಿದೆ.

3ಡಿ ಸರಣಿ ದೃಶ್ಯಗಳ ಮೂಲಕ ಭರವಸೆ ಮತ್ತು ನಿರಾಸೆ ಎರಡು ಪರಸ್ಪರ ವಿರುದ್ಧವಾದ ಭಾವನಾತ್ಮಕ ಸಂಘರ್ಷಗಳನ್ನು ತೋರಿಸಲಾಗಿದೆ. ದುಶ್ಚಟಗಳು ಆರಂಭದಲ್ಲಿ ಕೊಡುವ ಮುದ ಹಾಗೂ ಅನಂತರದಲ್ಲಿ ಉಂಟಾಗುವ ಹಾನಿಯ ಚಿತ್ರಣಗಳ ಜೊತೆ ಜೊತೆಗೇ, ಈ ಚಟಗಳಿಂದ ಪಾರಾದ ನಂತರದ ಭರವಸೆಯ ಗೆಲುವಿನ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕರ್ನಾಟಕದ ಎಲ್ಲಾ ವೈದ್ಯಕೀಯ-ವಿಜ್ಞಾನ ಕಾಲೇಜುಗಳಲ್ಲಿ ಮಾದಕವಸ್ತು ಮತ್ತು ತಂಬಾಕು ಮುಕ್ತ ಕ್ಯಾಂಪಸ್ ಗಳನ್ನು ಪ್ರೋತ್ಸಾಹಿಸುವ ವಿಶ್ವವಿದ್ಯಾಲಯದ ಧ್ಯೇಯೋದ್ದೇಶವನ್ನು ಈ ಸ್ತಬ್ಧಚಿತ್ರ ಪ್ರತಿನಿಧಿಸುತ್ತದೆ.

ನಶಾಮುಕ್ತ ಕ್ಯಾಂಪಸ್ ಅಭಿಯಾನದ ಭಾಗವಾಗಿ ವಿಶ್ವವಿದ್ಯಾಲಯವು ಸಂಬಂಧಿತ ಕಾಲೇಜುಗಳಲ್ಲಿ ಎಚ್ಚರಿಕೆ ಸಮಿತಿಗಳನ್ನು ರಚಿಸಲು ಸೂಚಿಸಿದೆ. ಈ ಮೂಲಕ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ದುಶ್ಚಟಗಳನ್ನು ತಡೆಯಲು ಯೋಗದಂತಹ ಕಾರ್ಯಕ್ರಮಗಳನ್ನು ಪರಿಚಯಿಸಲು ಸಹ ವಿಶ್ವವಿದ್ಯಾಲಯ ಸೂಚನೆ ನೀಡಿದೆ.

ಈ ಉಪಕ್ರಮದ ಬಗ್ಗೆ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ., “ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ನಾವು ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಹಾಗೂ ಸ್ವಾಸ್ಥ್ಯವನ್ನು ಉತ್ತೇಜಿಸುವ ಮತ್ತು ದುಶ್ಚಟಗಳ ವಿರುದ್ಧ ಸಮುದಾಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ 3ಡಿ ಸ್ತಬ್ಧಚಿತ್ರವನ್ನು ದಸರಾ ವೇದಿಕೆಯಲ್ಲಿ ಪ್ರದರ್ಶಿಸುತ್ತಿದ್ದೇವೆ. ವಿದ್ಯಾರ್ಥಿ ಸಮುದಾಯದಲ್ಲಿ, ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಸ್ವಸ್ಥ ಮನಸು ಹಾಗೂ ಸ್ವಸ್ಥ ಸಮಾಜದ ಮಹತ್ವವನ್ನು ಸಾರುವುದು ದೇಶದ ಬಹುದೊಡ್ಡ ಆರೋಗ್ಯ ವಿಶ್ವವಿದ್ಯಾಲಯವಾಗಿ ನಮ್ಮ ಆದ್ಯ ಕರ್ತವ್ಯ ಎಂದು ನಾವು ಭಾವಿಸಿದ್ದೇವೆ. ನಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮೈಸೂರು ದಸರಾದಲ್ಲಿ ಈ ಅರ್ಥಪೂರ್ಣ ಸ್ತಬ್ಧಚಿತ್ರ ಮೆರವಣಿಗೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ಯುವಪೀಳಿಗೆ ನಮ್ಮ ದೇಶದ ನಿಜವಾದ ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಸುರಕ್ಷಿತ, ಆರೋಗ್ಯಕರ ಮತ್ತು ಜಾಗೃತ ಆರೋಗ್ಯ ವೃತ್ತಿಪರರ ತಲೆಮಾರನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಮೈಸೂರು ದಸರಾನಲ್ಲಿ ‘ನಶಾ ಮುಕ್ತ ಕ್ಯಾಂಪಸ್’ ಸ್ತಬ್ಧಚಿತ್ರ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಹೀಗಿದೆ ಸ್ತಬ್ಧಚಿತ್ರ:

30 ಅಡಿ ಉದ್ದ ಹಾಗೂ 11 ಅಡಿ ಅಗಲ (ಒಟ್ಟು ಎತ್ತರ: ಸುಮಾರು 11 ಅಡಿ) 3ಡಿ ಕಲಾತ್ಮಕ ಚಿತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ನಶೆಯಿಂದ ಪುನರುಜ್ಜೀವನದ ಪಯಣವನ್ನು ಶಕ್ತಿಶಾಲಿಯಾಗಿ ಹಾಗೂ ಕಥಾನಕವಾಗಿ ಪ್ರಸ್ತುತಪಡಿಸುತ್ತದೆ. ಕ್ಯಾನ್ಸರ್ ಉಂಟು ಮಾಡುವ ಅಭ್ಯಾಸಗಳು, ದುಶ್ಚಟ ಮತ್ತು ಅವುಗಳ ಮನೋವೈಜ್ಞಾನಿಕ ಹಾಗೂ ದೈಹಿಕ ಪ್ರಭಾವಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಎರಡು ಪರಸ್ಪರ ವಿರೋಧಾಭಾಸದ ಮಾನವ ಚರ್ಯೆಗಳನ್ನು 180° ಗಾತ್ರದಲ್ಲಿ ಒಂದಕ್ಕೆ ಹಿಮ್ಮುಖವಾಗಿ ಒಂದರಂತೆ ರೂಪಿಸಲಾಗಿದೆ.

ಇದು ನಶೆ, ನಿರಾಸೆ ಮತ್ತು ಅನಾರೋಗ್ಯಕರ ಜೀನವವನ್ನು ಪ್ರತಿನಿಧಿಸುವ ಕಳೆಗುಂದಿದ ಮುಖವನ್ನು, ಅದೇ ರೀತಿ ನಶಾ ಮುಕ್ತ, ಆರೋಗ್ಯಕರ ಹಾಗೂ ಗೆಲುವಿನ ಭರವಸೆಯ ಇನ್ನೊಂದು ಮುಖವನ್ನು ತೋರಿಸುವ ಮೂಲಕ ಇವೆರಡರ ನಡುವಿನ ಗಾಢವಾದ ವ್ಯತ್ಯಾಸವನ್ನು ಮನದಟ್ಟು ಮಾಡುವ ಉದ್ದೇಶವನ್ನು ಹೊಂದಿದೆ. ಈ ಎರಡೂ ಚರ್ಯೆಗಳ ಮೇಲೆ ಏರಿರುವುದು ಸ್ಟೆತೊಸ್ಕೋಪ್‌ಗಳ ಮರ, ಇದು ವೈದ್ಯಕೀಯ ಮಧ್ಯಸ್ಥಿಕೆ, ಚಿಕಿತ್ಸೆ, ಮಾರ್ಗದರ್ಶನವನ್ನು ಹಾಗೂ ಜೀವನೋತ್ಸಾಹವನ್ನು ಪ್ರತಿನಿಧಿಸುವ ದೃಶ್ಯಾತ್ಮಕ ಸಂಕೇತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News