ಮೈಸೂರು | ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ಓರ್ವ ಮಹಿಳೆ ಬಂಧನ
ಮೈಸೂರು, ಸೆ.29: ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲು ಯತ್ನಿಸಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು, ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರೊಂದಿಗೆ ಒಡನಾಡಿ ಸೇವಾ ಸಂಸ್ಥೆ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವೇಶ್ಯಾವಾಟಿಕೆಯಲ್ಲಿ ಹೊಸದೊಂದು ಜಾಲ ಆರಂಭವಾಗಿದ್ದು, ದಂಧೆಯು ಬೃಹತ್ ಸ್ವರೂಪವನ್ನು ಪಡೆಯುತ್ತಿದೆ. ಬಾಲಕಿಯರನ್ನು ಟಾರ್ಗೆಟ್ ಮಾಡುವ ದುಷ್ಕರ್ಮಿಗಳು, ನಂತರ ಆ ಹೆಣ್ಣುಮಕ್ಕಳನ್ನು ದೊಡ್ಡ ದೊಡ್ಡ ಉದ್ಯಮಿಗಳು, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮಾರಾಟ ಮಾಡುತ್ತಾರೆ.
ಬಾಲಕಿಯ ಮಾರಾಟ ಯತ್ನವನ್ನು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಪ್ಯಾನ್ಸಿ ಮತ್ತು ಪರಶು ವಿಫಲಗೊಳಿಸಿದ್ದಾರೆ. ಬಾಲಕಿಯನ್ನು ಮೈಸೂರಿಗೆ ಕರೆ ತರುವಂತೆ ಪುಸಲಾಯಿಸಿ ಮಹಿಳೆಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಬಾಲಕಿಯನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.
ಬೆಂಗಳೂರು ಮೂಲದ ಮಹಿಳೆಯು ಬಾಲಕಿಯನ್ನು ಒಂದು ದಿನದ ಮಟ್ಟಿಗೆ ಉದ್ಯಮಿಗಳಿಗೆ ಪೂರೈಸುತ್ತಾಳೆ ಎಂಬ ಮಾಹಿತಿ ಒಡನಾಡಿಗೆ ಬಂದಿದೆ. ಸ್ಪ್ಯಾನ್ಸಿ ಹಾಗೂ ಪರಶು ತಂಡ ಆಕೆಯ ಬೆನ್ನು ಬಿದ್ದಿದೆ. ಡೀಲ್ ಕುದುರಿಸುವವರಂತೆ ನಟಿಸಿ ಆಕೆಯೊಂದಿಗೆ ಮಾತನಾಡಿದ್ದಾರೆ. ಮೊದಲಿಗೆ ಆಕೆ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ನಂತರ ಚೌಕಾಸಿಗಿಳಿದು 20 ಲಕ್ಷ ರೂ.ಗೆ ಒಪ್ಪಿದ್ದಾಳೆ. ಬಾಲಕಿಯೊಡನೆ ಮೈಸೂರಿಗೆ ಬಂದಿದ್ದ ಆಕೆಯನ್ನು ಒಡನಾಡಿ ತಂಡ ವಿಜಯನಗರದ ಬಳಿ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.