ಸಿದ್ಧರಾಮಯ್ಯ ಅವರೆ ವಚನಭ್ರಷ್ಟರಾಗಬೇಡಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಿ: ಎಚ್.ವಿಶ್ವನಾಥ್
ಮೈಸೂರು, ನ.22: ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ತಲೆ ಮೇಲೆ ಕೈ ಇಟ್ಟು 30 ತಿಂಗಳ ನಂತರ ಅಧಿಕಾರ ಬಿಟ್ಟುಕೊಡುತ್ತೇನೆ ಎಂದು ಹೇಳಿರುವ ಸಿದ್ಧರಾಮಯ್ಯ ಅವರೆ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ವಚನ ಭ್ರಷ್ಟರಾಗಬೇಡಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದ ಜಲದರ್ಶಿನಿ ಅಥಿತಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯ ಕರ್ನಾಟಕ ಭವನದಲ್ಲಿ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲೇ ಸಿದ್ಧರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ತಲೆ ಮೇಲೆ ಕೈ ಇಟ್ಟು 30 ತಿಂಗಳ ನಂತರ ಅಧಿಕಾರ ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಇದು ಎಲ್ಲರಿಗೂ ಗೊತ್ತು. ಯಾರು ಮಾತನಾಡುತ್ತಿಲ್ಲ ಅಷ್ಟೇ? ನಿಮ್ಮ ಮತ್ತು ಸಿದ್ಧರಾಮಯ್ಯ ನಡುವಿನ ಒಪ್ಪಂದವನ್ನು ಈಗಲಾದರೂ ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ಹೇಳಬೇಕು ಎಂದು ಆಗ್ರಹಿಸಿದರು.
ಎಚ್.ಡಿ.ಕುಮಾರಸ್ವಾಮಿ ಯಡಿಯೂರಪ್ಪ ಅವರಿಗೆ ವಚನ ಭ್ರಷ್ಟ ಮಾಡಿದರು. ಅಂತಹದನ್ನು ನೀವು ಮಾಡಿ ಸಮುದಾಯದ ಮೇಲೆ ತಪ್ಪು ಸಂದೇಶ ನೀಡಬೇಡಿ. ರಾಜ್ಯದ ಜನ ಸಿದ್ಧರಾಮಯ್ಯ ನೋಡಿ 136 ಸ್ಥಾನ ಕೊಟ್ಟಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿರುವುದು. ಒಪ್ಪಂದದಂತೆ ಸಿದ್ಧರಾಮಯ್ಯ ಅಧಿಕಾರ ಬಿಟ್ಟುಕೊಡಬೇಕು, ಕಾಂಗ್ರೆಸ್ ಹೈ ಕಮಾಂಡ್ ಬಲಿಷ್ಠವಾಗಿದೆ. ಅವರಾದರೂ ಮುಂದೆ ಬಂದು ಡಿ.ಕೆ.ಶಿವಕುಮಾರ್ ಗೆ ಅಧಿಕಾರ ಕೊಡಬೇಕು ಎಂದರು.
ಸಿದ್ಧರಾಮಯ್ಯ ನಾನೇ ಐದು ವರ್ಷ ಸಿಎಂ, 2028 ಕ್ಕೂ ನನ್ನದೇ ನೇತೃತ್ವ ನಾನೇ ನಾನೇ ಎಂದು ಹೇಳುವುದು ದುರಹಂಕಾರದ ಪರಮಾವಧಿ. ಒಪ್ಪಂದದಂತೆ ನಡೆದುಕೊಳ್ಳಿ, ವಚನಭ್ರಷ್ಟರಾಗಬೇಡಿ. ಹಾಲು ಕೆಟ್ಟರು ಹಾಲುಮತ ಸಮಾಜ ಕೆಡುವುದಿಲ್ಲ ಎಂಬ ಮಾತಿದೆ. ಸಮುದಾಯಕ್ಕೆ ಕೆಟ್ಟ ಹೆಸರು ತರಬೇಡಿ ಎಂದು ಹೇಳಿದರು.
ಜೆಡಿಎಸ್ ಪಕ್ಷದಲ್ಲಿದ್ದ ಸಿದ್ಧರಾಮಯ್ಯ, ಧರಂ ಸಿಂಗ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಎಚ್.ಡಿ.ದೇವೇಗೌಡರು, ಉಪ ಮುಖ್ಯಮಂತ್ರಿ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿದರು. ಆಗ ಆಶ್ರಯ ನೀಡಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬೇಡಿ ಸಿದ್ಧರಾಮಯ್ಯನವರೆ. ಕಾಂಗ್ರೆಸ್ ಪಕ್ಷ ನಿಮ್ಮನ್ನು ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಬೇಡಿ ಎಂದು ಹೇಳಿದರು.
ಸಿದ್ಧರಾಮಯ್ಯ ಬೊಗಳೆ ದಾಸ:
ಕುರುಬ ಸಮಾಜದ ಮಠವನ್ನು 1988 ರಲ್ಲಿ ಸ್ಥಾಪನೆ ಮಾಡಬೇಕಾದರೆ ಸಿದ್ಧರಾಮಯ್ಯ ಎಲ್ಲಿದ್ದರು? ಅವರೊಬ್ಬ ಬೊಗಳೆದಾಸ ಎಂದು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ರೌಡಿ ಪುಟ್ಟಸ್ಬಾಮಿ ಜೊತೆ ವಿಶ್ವನಾಥ್ ಸೇರಿಕೊಂಡಿದ್ದರು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ ಮಾತಿಗೆ ತಿರುಗೇಟು ನೀಡಿದ ವಿಶ್ವನಾಥ್, "ಕುರುಬ ಸಮಾಜವನ್ನು ಯಾರು ಕಟ್ಟಿದರು ಎಂಬುದು ಸಮಾಜದ ಜನರಿಗೆ ಸ್ವಾಮೀಜಿಗಳಿಗೆ ಗೊತ್ತಿದೆ. 1920 ರಲ್ಲಿ ಸ್ಥಾಪನೆಯಾದ ಸಮಾಜದ ಬಗ್ಗೆ ಸಿದ್ಧರಾಮಯ್ಯ ಅವರಿಗೆ ಕೃತಜ್ಞತೆ ಇಲ್ಲ" ಎಂದು ಹೇಳಿದರು.
1988 ರಲ್ಲಿ ನಾನು ರಾಜ್ಯ ಸುತ್ತಿ ಸಮಾಜದವರೊಟ್ಟಿಗೆ ಕಾಗಿನೆಲೆಯಲ್ಲಿ ಮಠವನ್ನು ಸ್ಥಾಪಿಸಿದೆ. ಆಗ ಸಿದ್ಧರಾಮಯ್ಯ ಎಲ್ಲಿದ್ದರು? ಮಠಕ್ಕೆ ಸ್ವಾಮೀಜಿ ನೇಮಕ ಮಾಡಬೇಕು ಎಂದಾಗ ಇದೇ ಸಿದ್ಧರಾಮಯ್ಯ ವಿರೋಧಿಸಿದರು. ಯಾವ ಸ್ವಾಮೀಜಿ? ಅದನ್ನೆಲ್ಲಾ ಬಿಟ್ಟು ಸಮುದಾಯದವರಿಗೆ ರಾಮಮನೋಹರ ಲೋಹಿಯಾ ಪುಸ್ತಕ ಕೊಡಿ ಎಂದರು. ಅದಕ್ಕೆ ಬೇಕಾದರೆ ಮೈಸೂರಿನ ಪುಟ್ಟಸ್ವಾಮಿ ಎಂಬುವವರು ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು.
ಮೊದಲಿಗೆ ನಂಜನಗೂಡಿನ ತಾರಕನಾಂದಪುರಿ ಅವರನ್ನು ಸ್ವಾಮೀಜಿ ಮಾಡಿದೆವು. ಈಗ ಸಿದ್ಧರಾಮಯ್ಯ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಅವರಿಗೆ ಕೃತಜ್ಞತೆ ಇಲ್ಲ ಎಂದು ಟೀಕಿಸಿದರು.