×
Ad

ಚಾಮುಂಡಿ ಬೆಟ್ಟ ಚಲೋ: ಶಾಸಕ ಟಿ.ಎಸ್.ಶ್ರೀವತ್ಸ ಸಹಿತ ಬಿಜೆಪಿ ಮುಖಂಡರ ಬಂಧನ

Update: 2025-09-09 09:24 IST

ಮೈಸೂರು, ಸೆ.9 : ರಾಜ್ಯ ಸರಕಾರ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದುತ್ವ ಸಂಘಟನೆಗಳು ಹಾಗೂ ಬಿಜೆಪಿ ಕರೆ ನೀಡಿದ್ದ ʼಚಾಮುಂಡಿ ಬೆಟ್ಟ ಚಲೋʼ ಯಾತ್ರೆ ಬೆಂಬಲಿಸಿ ಆಗಮಿಸಿದ ಶಾಸಕ ಟಿ.ಎಸ್.ಶ್ರೀವತ್ಸ ಸಹಿತ ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದರು. ಈ ಸಂದರ್ಭ ನಗರದ ಕುರುಬಾರಹಳ್ಳಿ ವೃತ್ತದಲ್ಲಿ ಕೆಲ ಕಾಲ ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಯಿತು.

ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದರೂ ಮಂಗಳವಾರ ಮುಂಜಾನೆ ನೂರಾರು ಸಂಖ್ಯೆಯಲ್ಲಿ ಹಿಂದುತ್ವ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಬಿಜೆಪಿಗರು ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ಯಾತ್ರೆ ಆರಂಭಿಸಲು ಮುಂದಾದರು.

ಈ ವೇಳೆ ಚಾಮುಂಡಿ ಬೆಟ್ಟ ಚಲೋ ನಡೆಸಲು ಯತ್ನಿಸಿದವರನ್ನು ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ತಡೆಯೊಡ್ಡಿದರು. ಈ ವೇಳೆ ಪೊಲೀಸರು ಮತ್ತು ಯಾತ್ರೆಗೆ ಹೊರಟವರ ನಡುವೆ ಮಾತಿನ ಚಕಮಕಿ ನಡೆದು ಗೊಂದಲ ನಿರ್ಮಾಣವಾಯಿತು.

ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಉಪ ಮೇಯರ್ ವಿ.ಶೈಲೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರುಗಳನ್ನು ಪೊಲೀಸರು ವಶಕ್ಕೆ ಪಡೆದರು.

ದಲಿತ ಮಹಾಸಭಾದ ಪ್ರತಿಭಟನೆಗೂ ತಡೆ :

ಮೈಸೂರು : ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಸ್ವಾಗತಿಸಿ ದಲಿತ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಚಾಮುಂಡಿ ಬೆಟ್ಟ ನಡಿಗೆ ಜಾಥಾಗೆ ಪೊಲೀಸರು ತಡೆಯೊಡ್ಡಿ, ಪ್ರತಿಭಟನಾಕಾರರನ್ನು ವಾಪಾಸ್ ಕಳಿಸಿದರು. ಈ ವೇಳೆ ಪೊಲೀಸರು ದಲಿತ ಮಹಾಸಭಾದ ಎಸ್.ರಾಜೇಶ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಬಂದ ಹತ್ತಾರು ಮಂದಿಯನ್ನು ತಡೆದು ನಿಲ್ಲಿಸಿ, ಅವರ ಮನವೊಲಿಸಿ ಸ್ಥಳದಿಂದ ವಾಪಸ್ ಕಳುಹಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News