ಪತ್ರಕರ್ತನ ಬಗ್ಗೆ ಕೆಟ್ಟದಾಗಿ ಮಾತಾಡಿದ ಪ್ರತಾಪ್ ಸಿಂಹ; ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಖಂಡನೆ
Update: 2025-09-09 21:58 IST
ಪ್ರತಾಪ್ ಸಿಂಹ
ಮೈಸೂರು : ʼವಾರ್ತಾಭಾರತಿʼ ಮೈಸೂರು ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಎನ್.ಎಸ್. ಅವರಿಗೆ ವೈಯಕ್ತಿಕವಾಗಿ ಅವಮಾನ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಖಂಡಿಸಿದೆ.
ಈ ಸಂಬಂಧ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ʼವಾರ್ತಾಭಾರತಿʼ ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಅವರನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವಮಾನಿಸುವ ಮೂಲಕ ಇಡೀ ಮೈಸೂರು ಜಿಲ್ಲಾ ಪತ್ರಕರ್ತರನ್ನೇ ಅವಮಾನಿಸಿದ್ದಾರೆ. ಇವರ ಹೇಳಿಕೆಯನ್ನು ಸಂಘ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಮಾತನಾಡಿ, ಪತ್ರಕರ್ತ ಪ್ರಶ್ನೆಗೆ ಉತ್ತರಿಸಲಾಗದೆ ಮಾಜಿ ಸಂಸದ ಪ್ರತಾಪ್ ಸಿಂಹ ವೈಯಕ್ತಿಕವಾಗಿ ನಿಂದನೆ ಮಾಡಿರುವುದನ್ನು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ. ಓರ್ವ ಮಾಜಿ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಮತ್ತೊಬ್ಬ ಪತ್ರಕರ್ತರ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.