ಮೈಸೂರಿನಲ್ಲಿ ಏಳು ಕಡೆ ಲೋಕಾಯುಕ್ತ ದಾಳಿ; 60 ಲಕ್ಷ ರೂ.ನಗದು, ಚಿನ್ನಾಭರಣ ವಶ : ಮುಂದುವರಿದ ತನಿಖೆ
ಮೈಸೂರು : ನಗರದಲ್ಲಿ ಗುರುವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ಏಳು ಕಡೆ ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳಿಗೆ ಸೇರಿದ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇಬ್ಬರು ಅಧಿಕಾರಿಗಳ ಕಚೇರಿ, ಮನೆ ಸಹಿತ ಏಳು ಕಡೆ ದಾಳಿ ನಡೆಸಿದ್ದಾರೆ. ವಿಜಯನಗರ ಮೊದಲ ಹಾಗೂ ಎರಡನೇ ಹಂತದಲ್ಲಿ ಆರು ಕಡೆ ಹಾಗೂ ತಿ.ನರಸೀಪುರದಲ್ಲಿ ಒಂದು ಕಡೆ ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆದಿದೆ.
ಸದ್ಯ ಚಂದ್ರಶೇಖರ್ ಅವರ ಮನೆಯಲ್ಲಿ 60 ಲಕ್ಷ ಹಣ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ಹಣ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆ ಡೆಫ್ಯುಟಿ ಇಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಜಕಾರ್ತಿಗೆ ಸೇರಿದ ಎರಡು ನಿವಾಸ ಹಾಗೂ ಕಚೇರಿಯಲ್ಲಿ ಲೊಕಾಯುಕ್ತ ಪೊಲೀಸರ ಶೋಧ ನಡೆಸುತ್ತಿದ್ದಾರೆ.