Mysuru | ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಮೈಸೂರು : ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೋಬ್ಬರ ಮೇಲೆ ಕಾಡಾನೆಯೊಂದು ಹಠಾತ್ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು ಬಿ.ಮಟಕೆರೆ ಎಸ್.ಟಿ. ಕಾಲೋನಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ನಿವಾಸಿ ಮಾದ (60) ಎಂಬುವರೇ ಆನೆ ದಾಳಿಗೆ ಬಲಿಯಾದ ವ್ಯಕ್ತಿ. ಇಂದು ಬೆಳಗಿನ ಜಾವ ಬಹಿರ್ದಸೆಗೆಂದು ತೆರಳುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ವ್ಯಕ್ತಿಯ ಕೂಗಾಟ ಕೇಳಿದ ಗ್ರಾಮಸ್ಥರು ದೌಡಾಯಿಸಿ ಆನೆ ಕಡೆಗೆ ಕಲ್ಲು ತೂರಿ ಆನೆಯನ್ನು ಹಿಮ್ಮೆಟ್ಟಿಸಿದರೂ ಬದುಕಿಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಬುಧವಾರ ಸಂಜೆಯೇ ಎಸ್.ಟಿ.ಕಾಲೀನಿ ಬಳಿ ಕಾಡಾನೆಯೊಂದು ಓಡಾಡುತ್ತಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿತ್ತು.ಇದೇ ಆನೆಯೇ ಮಾದ ಎಂಬುವವರ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ಕಾಡಂಚಿನ ಗ್ರಾಮಸ್ಥರನ್ನು ರಕ್ಷಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.