ದಸರಾ ಮಹೋತ್ಸವಕ್ಕೆ ವ್ಯಾಪಕ ಪೊಲೀಸ್ ಭದ್ರತೆ | 7,583 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ : ಸೀಮಾ ಲಾಟ್ಕರ್
ಮೈಸೂರು, ಸೆ.19: ನಾಡಹಬ್ಬ ದಸರಾ ಮಹೋತ್ಸವಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಬಂದೋಬಸ್ತ್‌ಗಾಗಿ 7,583ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೆ.22ರಿಂದ ಅ.2ರವರೆಗೆ ಒಟ್ಟು 11 ದಿನಗಳ ಕಾಲ ದಸರಾ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿದೆ. ಇದಕ್ಕಾಗಿ 2 ಸುತ್ತಿನ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಸರಾ ಭದ್ರತೆಗಾಗಿ 6384 ಸಿವಿಲ್ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, 35 ಕೆಎಸ್‌ಆರ್‌ಪಿ ತುಕಡಿ, 15 ಸಿಎಆರ್ ಮತ್ತು ಡಿಎಆರ್ ತುಕಡಿ, 29 ಎಎಸ್‌ಸಿ ತಂಡಗಳು, 1 ಗರುಡ ಫರ್ಸ್, 1 ಆರ್‌ಎಎಫ್ ತುಕಡಿ, 1200 ಹೋಮ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಎರಡು ಹಂತದ ಭದ್ರತೆ: ಸೆ. 22ರಿಂದ 29ರವರೆಗೆ 1ನೇ ಹಂತ ಹಾಗೂ ಸೆ.30ರಿಂದ ಅ.2ರವರೆಗೆ 2ನೇ ಹಂತದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ಬೆಟ್ಟದ ದಸರಾ ಉದ್ಘಾಟನೆ ಕಾರ್ಯಕ್ರಮ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳ ಬಂದೋಬಸ್ತ್ ಹಾಗೂ ಸುಗಮ ಸಂಚಾರ ವ್ಯವಸ್ಥೆ ಸೇರಿದಂತೆ ಮೈಸೂರು ನಗರ ಸೇರಿದಂತೆ ಹೊರ ಜಿಲ್ಲೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಜನದಟ್ಟಣೆ ಸೇರುವ ಜಾಗದಲ್ಲಿ 26 ಆಂಬುಲೆನ್ಸ್ ಮತ್ತು 32 ಅಗ್ನಿ ಶಾಮಕ ದಳದ ವಾಹನ ನಿಯೋಜಿಸಲಾಗಿದೆ. ದಸರಾ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 43 ಸಾರ್ವಜನಿಕ ಮಾಹಿತಿ ಕೇಂದ್ರ ಸ್ಥಾಪಿಸಿದ್ದು, ಸಂಚಾರ ಪೊಲೀಸರು ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಿದ್ದಾರೆ.ವಿಜಯ ದಶಮಿಯಂದು ಅರಮನೆಯ ದ್ವಾರಗಳು, ಜಂಬೂ ಸವಾರಿ ಮಾರ್ಗದಲ್ಲಿ ಒಟ್ಟು 33 ಮಾಹಿತಿ ಕೇಂದ್ರಗಳಲ್ಲಿ ಸಿವಿಲ್ ಪೊಲೀಸರು ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಪೊಲೀಸ್ ಸಹಾಯ ಕೇಂದ್ರಗಳು: ಸೆ.22ರಿಂದ ಅ.1ರವರೆಗೆ ಜಗಜೀವನರಾಮ್ ವೃತ್ತ, ರೈಲ್ವೆ ನಿಲ್ದಾಣ, ಅರಮನೆಯ ವರಾಹ ಗೇಟ್, ಕೆ.ಆರ್.ವೃತ್ತ, ಸೆಂಟ್ ಫಿಲೋಮಿನ ಚರ್ಚ್, ಗ್ರಾಮಾಂತರ ಬಸ್ ನಿಲ್ದಾಣ, ಗಾಂಧಿ ಚೌಕ, ಮೈಸೂರು ಮೃಗಾಲಯ, ದಸರಾ ವಸ್ತು ಪ್ರದರ್ಶನ, ಮಣಿಪಾಲ್ ಆಸ್ಪತ್ರೆ ಜಂಕ್ಷನ್, ನಂಜನಗೂಡು ರಿಂಗ್ ರಸ್ತೆ, ದೇವೇಗೌಡ ವೃತ್ತ, ಹೂಟಗಳ್ಳಿ ಜಂಕ್ಷನ್‌ಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.
ಉಪ ಪೊಲೀಸ್ ಆಯುಕ್ತರಾದ ಸುಂದರ್ ರಾಜ್ ಮತ್ತು ಬಿಂದು ಮಣಿ ಗೋಷ್ಠಿಯಲ್ಲಿದ್ದರು.
ಸಿಸಿಟಿವಿ ಕಣ್ಗಾವಲು :
ದಸರಾ ಸಂದರ್ಭದಲ್ಲಿ ಅಪರಾಧ ಕೃತ್ಯ ನಡೆಸುವವರ ವಿರುದ್ಧ ಸಿಸಿಟಿವಿ ಕಣ್ಗಾವಲು ಇಡಲಾಗಿದೆ.ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಅಳವಡಿಸಿಕೊಂಡಿರುವ ಸುಮಾರು 30,614 ಸಿಸಿ ಕ್ಯಾಮರಾಗಳ ಮೂಲಕ ಪೊಲೀಸರು ನಿಗಾ ಇಡಲಿದ್ದಾರೆ. ಹೆಚ್ಚುವರಿಯಾಗಿ ಜಂಬೂ ಸವಾರಿ ಮಾರ್ಗ ಮತ್ತು ಇತರೇ ಪ್ರಮುಖ ಸ್ಥಳಗಳಲ್ಲಿ ಒಟ್ಟು 200 ಸಿಸಿ ಕ್ಯಾಮರಾ ಅಳವಡಿಸಲಾಗುವುದು.
ದಸರಾ ಹಿನ್ನೆಲೆಯಲ್ಲಿ ನಗರದ ಕೆಲ ಮಾರ್ಗಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅರಮನೆ ಸುತ್ತಮುತ್ತ ರಸ್ತೆಗಳು ಹಾಗೂ ಇತರ ಪ್ರಮುಖ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ.
ಗ್ರಾಮಾಂತರ ಬಸ್‌ಗಳು, ನಗರ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ದಸರಾ ಕಾರ್ಯಕ್ರಮಗಳ ಸ್ಥಳದ ಬಳಿಯೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಂಬೂ ಸವಾರಿಯಂದು ಸಾತಗಳ್ಳಿ ಬಸ್ ನಿಲ್ದಾಣ, ಮಹಾರಾಜ ಕಾಲೇಜು, ಮೈದಾನ, ಗುಂಡೂರಾವ್ ನಗರ, ಲಲಿತಮಹಲ್ ಆಟದ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ನಗರ ಬಸ್‌ಗಳಿಗೆ ಮಹಾರಾಜ ಕಾಲೇಜು ಮೈದಾನ, ಅಗ್ರಹಾರ ವೃತ್ತ, ದಾಸಪ್ಪ ವೃತ್ತ, ಫೈವ್‌ಲೈಟ್ ವೃತ್ತ, ಸಿದ್ದಾರ್ಥನಗರ ಹಾಗೂ ಬುಲೆವರ್ಡ್ ವೃತ್ತದಲ್ಲಿ ತಾತ್ಕಾಲಿಕ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.