ಸಿಂಧುವಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ವಿರೂಪ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ
ಮೈಸೂರು: ಮೈಸೂರು ತಾಲ್ಲೂಕು ಸಿಂಧುವಳ್ಳಿ ಗ್ರಾಮದಲ್ಲಿ ಹಾಕಲಾಗಿದ್ದ ಅಂಬೇಡ್ಕರ್ ಯುವಕ ಸಂಘದ ನಾಮಫಲಕವನ್ನು ಕಿಡಿಗೇಡಿಗಳು ಸೋಮವಾರ ತಡರಾತ್ರಿ ವಿರೂಪಗೊಳಿಸಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ಜಯಪುರ-ಕಡಕೋಳ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದ ಅಂಬೇಡ್ಕರ್ ಭವನದ ಪಕ್ಕದಲ್ಲಿ ಗ್ರಾನೈಟ್ ಶಿಲೆಯಲ್ಲಿ ಅಂಬೇಡ್ಕರ್ ಯುವಕ ಸಂಘದ ನಾಮಫಲಕವಿದ್ದು, ಅದರಲ್ಲಿ ಅಂಬೇಡ್ಕರ್ ಭಾವಚಿತ್ರವೂ ಇದೆ. ಕಿಡಿಗೇಡಿಗಳು ನಾಮಫಲಕಕ್ಕೆ ಕಲ್ಲಿನಿಂದ ಹೊಡೆದಿರುವ ಕಾರಣ ಭಾವಚಿತ್ರದಲ್ಲಿನ ಕಿವಿ, ಕನ್ನಡಕ ವಿರೂಪಗೊಂಡಿದ್ದು, ನಾಮಫಲಕವೂ ಬಿರುಕು ಬಿಟ್ಟಿದೆ. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮವಹಿಸಬೇಕು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಕರೀಂ ರಾವತರ್ ಮತ್ತು ಮೈಸೂರು ದಕ್ಷಿಣ ಠಾಣಾ ಪಿಎಸ್‌ಐ ಶಾಂತಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಫ್‌ಎಎಲ್ ಮತ್ತು ಬೆರಳಚ್ಚು ತಂಡದವರು ತಪಾಸಣೆ ನಡೆಸಿದರು.
ಅಂಬೇಡ್ಕರ್ ನಾಮಫಲಕವನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ತನಿಖೆ ನಡೆಸಿ ಬಂಧನ ಮಾಡುತ್ತೇವೆ. ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ' ಎಂದು ಡಿವೈಎಸ್ಪಿ ಕರೀ ರಾವತ್ ಮನವಿ ಮಾಡಿದರಾದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಭೇಟಿ ನೀಡಿ ಭರವಸೆ ನೀಡಬೇಕು' ಎಂದು ಆಗ್ರಹಿಸಿ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದರು.
ವಿಷಯ ತಿಳಿದು ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೆಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಸಿಂಧುವಳ್ಳಿ ಗ್ರಾಮ ಸೂಕ್ಷ್ಮ ಪ್ರದೇಶವಾಗಿದ್ದು, ಇದುವೆರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಡಿಯಲ್ಲಿ ಇಡೀ ದೇಶ ಕಾರ್ಯನಿರ್ವಹಿಸುತ್ತಿದೆ. ನಾವೆಲ್ಲರೂ ಅವರ ಅನುಯಾಯಿಗಳು. ನಾಮಫಲಕ ವಿರೂಪಗೊಳಿಸಿರುವುದು ಖಂಡನೀಯ. ಕೂಡಲೇ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ,'ತ್ವರಿತವಾಗಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು. ಪ್ರತಿಭಟನಾಕರಾರು ಶಾಂತಿಯಿಂದ ವರ್ತಿಸಬೇಕು. ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ನಂತರ ಮುಖಂಡರು ಪ್ರತಿಭಟನೆ ಕೈಬಿಡುವುದಾಗಿ ಘೋಷಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ನಗರಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್, ಸಿಂಧುವಳ್ಳಿ ಉಮಾಪತಿ, ಮುರುಡಗಹಳ್ಳಿ ಮಹದೇವು, ಚಂದ್ರಕುಮಾರ್, ಗ್ರಾ.ಪಂ.ಸದಸ್ಯ ಮಹೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷರುಗಳಾದ ಕೃಷ್ಣಯ್ಯ, ಕುಮಾರ್, ಮಾಜಿ ಗ್ರಾ.ಪಂ.ಸದಸ್ಯ ಮಹದೇವಯ್ಯ, ಶೇಷಣ್ಣ ಎಸ್.ಪಿ. ಸಮುದಾಯದ ಮುಖಂಡರು ಮಾಜಿ ಗ್ರಾ.ಪಂ.ಅಧ ಗ್ರಾಮಸ್ಥರು ಭಾಗವಹಿಸಿದರು.
ದೇಶದಲ್ಲಿ ರಾಜ್ಯದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಯಾಕೆ ಇಷ್ಟೊಂದು ಆಕ್ರೋಶ ಎನ್ನುವುದು ಗೊತ್ತಾಗುತ್ತಿಲ್ಲ. ನೂರಕ್ಕೆ ನೂರರಷ್ಟು ಜನ ಅಂಬೇಡ್ಕರ್ ಅವರಿಗೆ ಗೌರವಕೊಡುತ್ತಿದ್ದಾರೆ ಜೊತಗೆ ಅಷ್ಟೇ ಅಪಮಾನ ಕೂಡ ಮಾಡುತ್ತಿದ್ದಾರೆ. ಈ ಘಟನೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಬೇಕು ಮತ್ತು ಗಡಿಪಾರು ಮಾಡಬೇಕು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು.
-ಪುರುಷೋತ್ತಮ್, ಮಾಜಿ ಮೇಯರ್.
ನಮ್ಮ ಊರಿನಲ್ಲಿ ಇಂತಹ ಘಟನೆ ನಡೆದಿದೆ ಎಂದರೆ ಊಹಿಸಿಕೊಳ್ಳಲು ಆಗುತ್ತಿಲ್ಲ. ಯಾಕೆಂದರೆ ನಮ್ಮಊರಿನಲ್ಲಿ ಎಲ್ಲಾ ಜಾತಿ, ಜನಾಂಗದವರು ಸಾಮರಸ್ಯದಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದೇವೆ. ಇದನ್ನು ಯಾರು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭರವಸೆ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಕ್ರಮಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುತ್ತೇವೆ.
-ಮಹೇಶ್, ಗ್ರಾ.ಪಂ.ಸದಸ್ಯ.