ಮೈಸೂರು | ಗಾಡಿ ಚೌಕದಲ್ಲಿ ಹೊಸ ದರ್ಗಾ ನಿರ್ಮಾಣ ಮಾಡುತ್ತಿಲ್ಲ, ಹಳೆಯ ದರ್ಗಾ ದುರಸ್ತಿ ಮಾತ್ರ : ಅಜೀಜುಲ್ಲಾ ಅಜ್ಜು
ಮೈಸೂರು, ಸೆ.17 : ನಗರದ ಅಗ್ರಹಾರ ಬಳಿಯ ಗಾಡಿ ಚೌಕದಲ್ಲಿ ಸುಮಾರು 150-200 ವರ್ಷಗಳಿಂದ ಇರುವ " ದಿಲ್ಬರ್ ಶಾ ಇಮಾಮ್ ವಲಿ ದರ್ಗಾ" ವನ್ನು ದುರಸ್ತಿ ಮಾಡಲು ಮುಂದಾಗಿದ್ದೇವೆಯೇ ಹೊರತು ಯಾವುದೇ ಹೊಸ ದರ್ಗಾ ನಿರ್ಮಾಣ ಮಾಡುತ್ತಿಲ್ಲ ಎಂದು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಜೀಜುಲ್ಲಾ ಅಜ್ಜು ಸ್ಪಷ್ಟಪಡಿಸಿದ್ದಾರೆ.
ಗಾಡಿ ಚೌಕದಲ್ಲಿ 1 ಎಕರೆ 1 ಗುಂಟೆ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಇದೆ. ಇಲ್ಲಿ 150-200 ವರ್ಷಗಳಿಂದ ದರ್ಗಾ ಇದೆ. ಇದನ್ನು ನಮ್ಮ ಪೂರ್ವಜರು ಮಣ್ಣಿನ ಗೋಡೆ ಕಟ್ಟಿ ಹಂಚಿನಿಂದ ನಿರ್ಮಾಣ ಮಾಡಿದ್ದರು. ಅದು ಈಗ ತೀರಾ ಶಿಥಿಲಾವಸ್ಥೆಯಲ್ಲಿದೆ. ಅದನ್ನು ದುರಸ್ತಿ ಮಾಡಲು ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದೇವೆ. ಆದರೆ, ಕೆಲವರು ಹೊಸ ದರ್ಗಾ ನಿರ್ಮಾಣ ಮಾಡುತ್ತಿದ್ದಾರೆ ಎಂದು ಗೊಂದಲ ಉಂಟು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಶಿಥಿಲಾವಸ್ಥೆಯಲ್ಲಿರುವ ದರ್ಗಾವನ್ನು ದುರಸ್ತಿ ಮಾಡಲು ಸ್ಥಳೀಯರು ಮುಂದಾಗಿದ್ದರು. ಕಟ್ಟಡ ಕಟ್ಟಲು ಪಿಲ್ಲರ್ ಗಳನ್ನು ಕಟ್ಟಿದ್ದರು. ಆಗ ಮಹಾನಗರ ಪಾಲಿಕೆ ಅನುಮತಿ ಇಲ್ಲದೆ ಕಟ್ಟಡ ಕಟ್ಟುವ ಹಾಗಿಲ್ಲ ಎಂದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದೆವು. ವಕ್ಫ್ ಮಂಡಳಿ ದರ್ಗಾ ದುರಸ್ತಿ ಮಾಡಲು ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಲಿಖಿತವಾಗಿ ಅರ್ಜಿ ನೀಡಿತ್ತು. ಈ ವೇಳೆ ಮಹಾನಗರ ಪಾಲಿಕೆಯವರು ನೋಟಿಫಿಕೇಷನ್ ಹಾಕಿ ಸಾರ್ವಜನಿಕ ತಕರಾರು ಇದ್ದರೆ 15 ದಿನಗಳೊಳಗೆ ಸಲ್ಲಿಸಬಹುದು ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು ಎಂದು ತಿಳಿಸಿದರು.
ಈ ಭಾಗದ ಸ್ಥಳೀಯ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಸೆ.1 ರ ಸೋಮವಾರ ವಕ್ಫ್ ಮಂಡಳಿಗೆ ಯಾವುದೇ ಮಾಹಿತಿ ನೀಡದೆ ಸ್ಥಳಕ್ಕೆ ಭೇಟಿ ನೀಡಿ ಅನುಮತಿ ಇಲ್ಲದೆ, ಹೊಸ ದರ್ಗಾ ಕಟ್ಟುತ್ತಿದ್ದಾರೆ ಎಂಬ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೀಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ ಅವರು ಒಂದು ಸಮುದಾಯಕ್ಕೆ ಮಾತ್ರ ಶಾಸಕರಲ್ಲ, ಅವರು ಇಡೀ ಕೆ.ಆರ್.ಕ್ಷೇತ್ರಕ್ಕೆ ಶಾಸಕರು. ಅವರು ದಾಖಲೆಯನ್ನು ಪರಿಶೀಲಿಸಿ ಹೇಳಿಕೆ ನೀಡಬೇಕಿತ್ತು. ಒಂದು ವೇಳೆ ಅವರು ಬರುವುದನ್ನು ವಕ್ಫ್ ಮಂಡಳಿ ಗಮನಕ್ಕೆ ತಂದಿದ್ದರೆ, ನಾವೇ ಅವರಿಗೆ ಸ್ವಾಗತ ಮಾಡಿ ನಮ್ಮಲ್ಲಿರುವ ಎಲ್ಲಾ ದಾಖಲಾತಿಗಳನ್ನು ತೋರಿಸುತ್ತಿದ್ದೆವು ಎಂದು ಹೇಳಿದರು.
ಗಾಡಿ ಚೌಕ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು 1971ರಲ್ಲೇ ಆಗಿನ ಮೈಸೂರು ಪುರಸಭೆಯಲ್ಲಿ ಅನುಮತಿ ಪಡೆದು ಕಂಪೌಂಡ್ ನಿರ್ಮಾಣ ಮಾಡಿದ್ದೇವೆ. ಈಗಲೂ ನಾವು ಕಾನೂನು ಪ್ರಕಾರ ಈಗಿನ ಮಹಾನಗರ ಪಾಲಿಕೆ ಅನುಮತಿ ಪಡೆದೇ ದರ್ಗಾ ದುರಸ್ತಿ ಮಾಡುತ್ತೇವೆ ಎಂದು ತಿಳಿಸಿದರು.
ಈ ಜಾಗಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಇಲ್ಲ, ಎಲ್ಲಾ ದಾಖಲಾತಿಗಳು ವಕ್ಫ್ ಮಂಡಳಿ ಬಳಿ ಇದ್ದು, ಹಳೆಯ ಶಿಥಿಲಾವಸ್ಥೆಯಲ್ಲಿರುವ ದರ್ಗಾವನ್ನು ದುರಸ್ತಿ ಮಾಡಲು ಕಾನೂನಾತ್ಮಕವಾಗಿಯೇ ಮುಂದುವರೆಯುತ್ತೇವೆ ಎಂದು ಹೇಳಿದರು.
"ಇದು ಹಳೆಯ ದರ್ಗಾ, ಇಲ್ಲಿಗೆ ಹಿಂದೂ-ಮುಸ್ಲಿಮ್ ಸೇರಿದಂತೆ ಎಲ್ಲರೂ ಬರುತ್ತಾರೆ. ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿ ಹೋದವರಿಗೆ ಒಳ್ಳೆಯದಾಗಿದೆ ಎಂಬ ನಂಬಿಕೆ ಇದೆ. ಹಾಗಾಗಿ ಬಹಳಷ್ಟು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ"
- ಅಜೀಜುಲ್ಲಾ ಅಜ್ಜು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ.