ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ; ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು
ಮೈಸೂರು : ಮೈಸೂರು ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಕಾಲಿಗೆ ಗುಂಡು ಹೊಡೆದಿರುವ ಘಟನೆ ಗುರುವಾರ ರಾತ್ರಿ ಮೈಸೂರಿನಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ ಬಾಲಕಿಯೊಬ್ಬಳ ಮೃತದೇಹ ವಸ್ತುಪ್ರದರ್ಶನ ಮೈದಾನದಲ್ಲಿ ಪತ್ತೆಯಾಗಿತ್ತು. ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ಕೂಡ ವ್ಯಕ್ತವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಅಕ್ಕಪಕ್ಕದ ಸಿಸಿ ಟಿವಿ ಪರಿಶೀಲಿಸಿದ ಪೊಲೀಸರು, ಮೈಸೂರು ತಾಲ್ಲೂಕು ಸಿದ್ಧಲಿಂಗಪುರದ ಕಾರ್ತಿಕ್ ಎಂಬ ವ್ಯಕ್ತಿ ಮೇಲೆ ಅನುಮಾನ ವ್ಯಕ್ತಪಡಿಸಿ ಆತನ ಬಂಧನಕ್ಕೆ ಜಾಲ ಬೀಸಿದ್ದರು.
ಆರೋಪಿ ಕಾರ್ತಿಕ್ ಖಾಸಗಿ ಬಸ್ ಮೂಲಕ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲಕ್ಕೆ ಹೋಗಿದ್ದ ಎಂದು ತಿಳಿದು ಬಂದಿದ್ದು, ಕೊಳ್ಳೆಗಾಲದಲ್ಲಿ ಸಂಜೆ ಪತ್ತೆಯಾಗಿದ್ದ. ಆತನನ್ನು ವಶಕ್ಕೆ ಪಡೆದ ಪೊಲೀಸರು ರಾತ್ರಿ ಮೈಸೂರಿಗೆ ಕರೆತಂದಿದ್ದರು. ಮೈಸೂರಿಗೆ ಬಂದ ವೇಳೆ ಪೊಲೀಸರಿಂದ ಆರೋಪಿ ಕಾರ್ತಿಕ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ.
ಸದ್ಯ ಆರೋಪಿ ಕಾರ್ತಿಕ್ ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.