×
Ad

ಮೈಸೂರು | ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ ಪ್ರಕರಣ : ಇಬ್ಬರ ಬಂಧನ

Update: 2025-06-20 23:57 IST

ಸಾಂದರ್ಭಿಕ ಚಿತ್ರ

ಮೈಸೂರು : ತಾಲೂಕಿನ ವಾಜಮಂಗಲದಲ್ಲಿ ಎ.18ರಂದು ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಹಾಗೂ ನಾಮಫಲಕವನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತ ಆರೋಪಿಗಳನ್ನು ಕೊಕ್ರೆಹುಂಡಿ ನಿವಾಸಿ ರಂಗೇಗೌಡ ಹಾಗೂ ಸೋಲನಹಳ್ಳಿ ನಿವಾಸಿ ವಸಂತ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ವಾಜಮಂಗಲ ಗ್ರಾಮದ ಕೀರ್ತಿಕುಮಾರ್ ಎಂಬವರಿಗೆ ಕೈ ಸಾಲ ನೀಡಿದ್ದರು. ಅದನ್ನು ವಾಪಸ್ ನೀಡದಿದ್ದಾಗ, ಗ್ರಾಮಕ್ಕೆ ತೆರಳಿ ಕೀರ್ತಿ ಕುಮಾರ್ ಮನೆ ಬಳಿಯ ಬ್ಯಾನರ್ ಹರಿದು, ಅವರಿಗೆ ಕೆಟ್ಟ ಹೆಸರು ಬರುವಂತೆ ಮಾಡಲು ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಜಮಂಗಲದಲ್ಲಿ ನಡೆದ ಅಂಬೇಡ್ಕರ್ ಜಯಂತಿಗೆ ಶುಭಾಶಯ ಕೋರಿ ದಲಿತ ಸಂಘಟನೆ ಮುಖಂಡರು ಬ್ಯಾನರ್ ಅಳವಡಿಸಿದ್ದರು. ಎ.18 ರಂದು ಬ್ಯಾನರ್ ಹಾಗೂ ಅಂಬೇಡ್ಕರ್ ಭಾವಚಿತ್ರವಿದ್ದ ನಾಮಫಲಕವನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದರು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳು ಧರಣಿ ನಡೆಸಿದ್ದವು.

ಈ ಬೆಳವಣಿಗೆಯ ನಡುವೆ ಪ್ರಕರಣ ದಾಖಲಿಸಿಕೊಂಡ ವರುಣಾ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದರು. ಡಿವೈಎಸ್‌ಪಿ ಶಿವನಂಜ ಶೆಟ್ಟಿ ಮಾರ್ಗದರ್ಶನದಲ್ಲಿ ಠಾಣೆಯ ಪಿಎಸ್‌ಐ ಸದಾಶಿವ ತಿಪ್ಪಾರೆಡ್ಡಿ, ಸಿಬ್ಬಂದಿ ಲಿಂಗರಾಜು, ಮಹೇಶ್, ದಸ್ತಗಿರ್, ಶ್ರೀನಿವಾಸ್, ಮಲ್ಲಿಕಾರ್ಜುನ, ವೆಂಕಟೇಶ್ ಅವರ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News