ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣ: ಗಾಯಾಳು ಮಹಿಳೆ ಮೃತ್ಯು
ನಾಲ್ವರಿಗೆ ಮುಂದುವರೆದ ಚಿಕಿತ್ಸೆ
ಮೈಸೂರು : ಮೈಸೂರು ಅರಮನೆ ಮುಂಭಾಗ ನಡೆದ ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ನಂಜನಗೂಡಿನ ನಿವಾಸಿ ಮಂಜುಳ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಲಕ್ಷ್ಮಿ, ಕೊಲ್ಕತ್ತಾದ ಶಮಿನಾ ಶಬಿಲ್, ರಾಣೆಬೆನ್ನೂರಿನ ಕೊಟ್ರೇಶ್ ಮತ್ತು ರಂಜಿತಾ ಅವರಿಗೆ ಗಾಯವಾಗಿತ್ತು.
ಗಾಯಾಳು ಆರೋಗ್ಯ ವಿಚಾರಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಶುಕ್ರವಾರ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಗರದ ಕೆ.ಆರ್.ಆಸ್ಪತ್ರೆಗೆ ಜಿಲ್ಲಾಡಳಿತದೊಂದಿಗೆ ಭೇಟಿ ನೀಡಿದ ಸಚಿವರು ಗಾಯಾಳುಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಬಳಿಕ ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಸ್ಫೋಟ ಅನಿರೀಕ್ಷಿತ :
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಸ್ಫೋಟ ಅನಿರೀಕ್ಷಿತ. ಸಿಲಿಂಡರ್‌ನ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಹೇಳಿದರು.
ಗುರುವಾರ ರಾತ್ರಿ ಸುಮಾರು 8.30ರ ಸುಮಾರಿಗೆ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಬಂದಿದ್ದ ಐವರಿಗೆ ಗಾಯವಾಗಿದೆ. ಮೃತಪಟ್ಟ ವ್ಯಕ್ತಿ ಉತ್ತರ ಪ್ರದೇಶದವರಾಗಿದ್ದು ಸೀಸನಲ್ ವ್ಯಾಪಾರಿ. ಈ ಬಾರಿ ಬಲೂನ್ ಮಾರಾಟ ಮಾಡುತ್ತಿದ್ದರು. ಹೊರಗಡೆಯಿಂದ ಗ್ಯಾಸ್ ಸಿಲಿಂಡರ್ ತಂದು ಅವರು ಬಲೂನ್ ವ್ಯಾಪಾರ ಮಾಡುತ್ತಿದ್ದರು. ಆ ಸಿಲಿಂಡರ್ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ತಿಳಿಸಿದರು.