×
Ad

ಮೈಸೂರು | ಮೆಸ್ಕೋ ಶಿಕ್ಷಣ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Update: 2026-01-26 17:27 IST

ಮೈಸೂರು: ಮೆಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಜ.26ರಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಆಯಿಷ ಪರ್ವೀನ್ ಅವರು ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೂ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಡಿಡಿಪಿಐ ರುಕ್ಸಾನ ನಾಝ್ನೀನ್ ಅವರು ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದ ಮೂಲಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳಿಂದ ಪ್ರದರ್ಶಿಸಲಾದ ಪ್ರತಿಯೊಂದು ಕಾರ್ಯಕ್ರಮವೂ ವೈವಿಧ್ಯತೆಯಲ್ಲಿ ಏಕತೆ ಹಾಗೂ ಸಾಂವಿಧಾನಿಕ ಹಕ್ಕುಗಳ ಘನತೆಯನ್ನು ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು.

ಮುನ್ನೂರು ವರ್ಷಗಳ ಬ್ರಿಟಿಷರ ಆಳ್ವಿಕೆಯ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜನರಿಂದ ಜನರಿಗಾಗಿ ರಚಿಸಲಾದ ಕಾನೂನು ನಿಯಮಗಳನ್ನು ನಾವು ಸಂವಿಧಾನ ಎನ್ನುತ್ತೇವೆ. ಕಡ್ಡಾಯ ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಉತ್ತಮ ನಾಗರಿಕರಾಗಿ ಬದುಕುವ ಜವಾಬ್ದಾರಿ ಮುಂದಿನ ತಲೆಮಾರಿನ ಮೇಲಿದೆ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಕುಟುಂಬ ಮತ್ತು ಶಾಲೆಯ ಹೊಣೆಗಾರಿಕೆಯಾಗಿದೆ. ಇದರ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.

ಪ್ರೊ.ಶಬ್ಬೀರ್ ಮುಹಮ್ಮದ್‌ ಮುಸ್ತಫಾ ಮಾತನಾಡಿ, ವಿಶ್ವದ ಅತ್ಯುತ್ತಮ ಸಂವಿಧಾನ ನಮ್ಮ ದೇಶದ ಸಂವಿಧಾನವಾಗಿದ್ದು, ಅದು ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸಮರ್ಪಕವಾಗಿ ಒಳಗೊಂಡಿದೆ. ಸಂವಿಧಾನವನ್ನು ಕಾರ್ಯಗತಗೊಳಿಸದೇ ಹೋದರೆ ಅದು ಕೇವಲ ಪುಸ್ತಕದಲ್ಲೇ ಉಳಿಯುವ ಅಪಾಯವಿದೆ ಎಂಬ ಡಾ. ಅಂಬೇಡ್ಕರ್ ಅವರ ಮಾತುಗಳನ್ನು ಅವರು ನೆನಪಿಸಿದರು. ಅಧಿಕಾರ ಒಬ್ಬ ವ್ಯಕ್ತಿಯಲ್ಲಿ ಕೇಂದ್ರಿತವಾದರೆ ಸರ್ವಾಧಿಕಾರ ಧೋರಣೆಗೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ಖಾದರ್ ಸೇಠ್ ಮಾತನಾಡಿ, ಅನೇಕ ಜಾತಿ, ಮತ, ಪಂಥ, ಭಾಷೆ ಹಾಗೂ ಪ್ರಾಂತ್ಯಗಳಿದ್ದರೂ, ಎಲ್ಲರೂ ಏಕತೆಯಿಂದ ಬದುಕುತ್ತಿರುವುದೇ ದೇಶದ ಹಿರಿಮೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು :

ಕಾರ್ಯಕ್ರಮದಲ್ಲಿ ದೇಶಭಕ್ತಿಗೀತೆಗಳಿಗೆ ನೃತ್ಯ, ಸಂವಿಧಾನದ ಹಕ್ಕುಗಳ ಮಹತ್ವ ಸಾರುವ ನಾಟಕ, ಭಾಷಣಗಳು, ದೇಶದ ವಿವಿಧ ರಾಜ್ಯಗಳ ಉಡುಗೆ-ತೊಡುಗೆ, ಸಂಸ್ಕೃತಿ, ಆಹಾರ ಪದ್ಧತಿ, ಪ್ರಸಿದ್ಧ ಸ್ಮಾರಕಗಳು ಹಾಗೂ ವೈವಿಧ್ಯತೆಯಲ್ಲಿ ಏಕತೆ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಸೇಠ್, ಗೌರವ ಕಾರ್ಯದರ್ಶಿ ಪ್ರೊ.ಶಬ್ಬೀರ್ ಮುಹಮ್ಮದ್‌ ಮುಸ್ತಫಾ, ಖಜಾಂಚಿ ಶಕೀಲ್ ಅಹ್ಮದ್ ಖಾನ್, ಪದಾಧಿಕಾರಿ ಮಝ್ಹರುಲ್ ಹಖ್, ಮುಖ್ಯ ಅತಿಥಿ ರುಕ್ಸಾನ ನಾಝ್ನೀನ್, ಮೆಸ್ಕೋ ಐಟಿಐ ಕಾಲೇಜಿನ ಪ್ರಾಂಶುಪಾಲ ಎಂ.ಕಲೀಂ ಅಹ್ಮದ್, ಪಿಯುಸಿ ಹಾಗೂ ಪದವಿ ಕಾಲೇಜಿನ ಪ್ರಾಚಾರ್ಯ ಆಸಿಫ್ ಖಾನ್ ಸೂರ್ಯಾನಿ, ಮುಖ್ಯೋಪಾಧ್ಯಾಯರಾದ ಶಾಹಿನ್ ಶಾತಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಆಯಿಷಾ ಸಿದ್ದೀಖಾ ಸ್ವಾಗತಿಸಿದರು. ನುಜ್ಜತ್ ಖಾನಂ ವಂದನಾರ್ಪಣೆ ಸಲ್ಲಿಸಿದರು. ಗೌರವ ಅತಿಥಿಗಳ ಪರಿಚಯವನ್ನು ಆಯಿಷಾ ಪರ್ವೀನ್ ಮಾಡಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ಹಲೀಮಾ ಖಾನಂ ನೆರವೇರಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News