×
Ad

ಸಮಾನತೆಗಾಗಿ ಶರಣರಿಂದ ಕಲ್ಯಾಣ ಕ್ರಾಂತಿ : ಈಶ್ವರ್ ಖಂಡ್ರೆ

Update: 2025-05-26 00:09 IST

ಮೈಸೂರು: ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ ಸಂಪತ್ತು, ಹೆಣ್ಣು, ಅಧಿಕಾರ, ಮಣ್ಣಿಗಾಗಿ ಕ್ರಾಂತಿಗಳಾಗಿವೆ. ಸರ್ವ ಸಮಾನತೆಗಾಗಿ ಜಗತ್ತಿನಲ್ಲಿ ಕಲ್ಯಾಣ ಕ್ರಾಂತಿ ಮಾಡಿದ್ದು ಬಸವಾದಿ ಶರಣರು ಎಂದು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಲಾಮಂದಿರದಲ್ಲಿ ಆಯೋಜಿಸಿದ್ದ ಎರಡು ದಿನಗಳ ನಮ್ಮ ಬಸವ ಜಯಂತಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ರವಿವಾರ ಮಾತನಾಡಿದರು.

ಆ ಕಾಲದಲ್ಲಿ ಅಂಧಾಕರ, ಮೌಢ್ಯ ತುಂಬಿತ್ತು. ಜನ ಕಷ್ಟದಲ್ಲಿದ್ದರು. ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಹಬಾಳ್ವೆಗಾಗಿ ವರ್ಗ ರಹಿತ, ವರ್ಣ ರಹಿತ, ಜಾತಿ ರಹಿತ ಸಮಾಜಕ್ಕಾಗಿ ಶರಣರು ಹೋರಾಟ ಮಾಡಿದರು. ಇಂಗ್ಲೆಂಡ್‌ನಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಬರುವ ಮುನ್ನವೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟವರು ಬಸವಣ್ಣ. ಆ ಕಾಲದಲ್ಲಿಯೇ ಮಹಿಳೆಯರಿಗೂ ಸ್ವಾತಂತ್ರ್ಯ ದೊರೆಯಿತು ಎಂದು ಹೇಳಿದರು.

ಶರಣರು ಸಕಲರಿಗೂ ಲೇಸನ್ನು ಬಯಸಿದರು. ದಯವೇ ಧರ್ಮದ ಮೂಲವಯ್ಯ ಎಂದು ಸಾರಿದರು. ಇವತ್ತು ಧರ್ಮದ ಹೆಸರಿನಲ್ಲಿ ಭಯದ ವಾತಾವರಣ ಇದೆ. ಭಾವನಾತ್ಮಕ ವಿಷಯಗಳನ್ನು ಕೆರಳಿಸಲಾಗುತ್ತಿದೆ. ಜಗತ್ತಿನ ಎಲ್ಲ ಕಡೆ ಆತಂಕ ಇದೆ ಎಂದರು.

ವಿಜ್ಞಾನ, ತಂತ್ರಜ್ಞಾನ ಬೆಳೆದಿದೆ. ವೈಜ್ಞಾನಿಕವಾಗಿ ನಾವೆಲ್ಲರೂ ಮುಂದುವರಿದಿದ್ದೇವೆ. ಆದರೆ, ಜಗತ್ತಿನಲ್ಲಿ ಶಾಂತಿ ಸಮಾಧಾನವೇ ಇಲ್ಲವಾಗಿದೆ. ಮಾನಸಿಕ ದೌರ್ಬಲ್ಯ ಆವರಿಸಿಕೊಂಡಿದೆ. ಹಿಂಸೆ, ಅಸಹಿಷ್ಣುತೆ ತಾಂಡವಾಡುತ್ತಿದೆ. ಇದಕ್ಕೆ ಪರಿಹಾರ ಬಸವ ತತ್ವದಲ್ಲಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವೀರಶೈವ ಲಿಂಗಾಯತ ಸಮಾಜ ಒಟ್ಟಾಗಿದ್ದರೆ ಸಮಾಜಕ್ಕೆ ನೆರಳಾಗುವ ಶಕ್ತಿ ಇದೆ. ಆದರೆ, ಸಮಾಜದ ಒಳ್ಳೆಯತನ, ತಮ್ಮ ಮೌನ ಶಾಪವಾಗಿ ಪರಿಣಮಿಸಿದೆ. ಉತ್ತಮ ಶಿಕ್ಷಣ ದೊರೆತರೂ ಸಂಸ್ಕಾರ ಕೊಡುವಲ್ಲಿ ಎಡವಿದ್ದೇವೆ. ಆಧುನಿಕ ತಂತ್ರಜ್ಞಾನದ ಭರಾಟೆಯಿಂದ ನಮ್ಮ ಪರಂಪರೆ ಸಂಸ್ಕೃತಿ ಮರೆಯುತ್ತಿದ್ದೇವೆ. ಮನುಷ್ಯತ್ವ ಕಳೆದುಕೊಳ್ಳುತ್ತಿದೇವೆ ಎಂದರು.

ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಸಾಲೂರು ಮಠದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News