×
Ad

ರೈತರಿಗೆ ಕೊಟ್ಟ ಮಾತು ತಪ್ಪಿದ ಸಿದ್ದರಾಮಯ್ಯ: ಪ್ರಕಾಶ್ ರಾಜ್ ವಾಗ್ದಾಳಿ

Update: 2025-07-11 15:35 IST

ಮೈಸೂರು, ಜು.11: ದೇವನಹಳ್ಳಿ ಭೂ ಸ್ವಾಧೀನ ಸಂಬಂಧ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಮಾತುಕೊಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೇಂದ್ರ ರಕ್ಷಣಾ ಸಚಿವರಿಗೆ ಡಿಫೆನ್ಸ್ ಕಾರಿಡಾರ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ ದೇವನಹಳ್ಳಿ ಭೂ ಹೋರಾಟಗಾರರು, ರೈತ ನಾಯಕರು, ಸಾಹಿತಿಗಳು, ಕಲಾವಿದರಿಗೆ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಬಹುಭಾಷ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ..

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವನಹಳ್ಳಿಯಲ್ಲಿ 1700 ಎಕರೆ ಭೂಮಿಯನ್ನು ವಶಕ್ಕೆ ಪಡೆಯುವುದಕ್ಕೆ ಸ್ಪಷ್ಟತೆ ಇಲ್ಲ. ಏನು ಮಾಡಬೇಕು ಗೊತ್ತಿಲ್ಲ. ರಿಯಲ್ ಎಸ್ಟೇಟ್ನವರಿಗೆ ಅನುಕೂಲ ಮಾಡುವ ಹುನ್ನಾರ ಎಂದು ಆರೋಪಿಸಿದರು.

ಜು.4ರ ಸಭೆಯಲ್ಲಿ ಸಿದ್ದರಾಮಯ್ಯ ಅವರು ರೈತರ ನಿಯೋಗಕ್ಕೆ ಮಾತುಕೊಟ್ಟರು. ಭೂ ಸ್ವಾಧೀನದ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಭರವಸೆ ನೀಡಿದರು. ಕಾನೂನು ತೊಡಕುಗಳನ್ನು ಪರಿಶೀಲಿಸುವುದಾಗಿ ಮನವಿ ಮಾಡಿದರು. ಈಗ ಡಿಫೆನ್ಸ್ ಕಾರಿಡಾರ್ ಗೆ ಕೇಂದ್ರ ರಕ್ಷಣಾ ಸಚಿವರಿಂದ ಅನುಮತಿ ಕೋರಿ ಅಪನಂಬಿಕೆಯಿಂದ ನೋಡುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇವನಹಳ್ಳಿ ಭಾಗದ 13 ಹಳ್ಳಿಗಳ ಹೆಣ್ಣು ಮಕ್ಕಳು ನಾವು ಮಣ್ಣು ಮಾರುವುದಿಲ್ಲ ಎಂದು ಘೋಷಿಸಿದ್ದಾರೆ. ಸಿದ್ದರಾಮಯ್ಯರ ಆರೋಗ್ಯ ಚೆನ್ನಾಗಿರಲೆಂದು ದೇವನಹಳ್ಳಿ ಭೂಮಿಯಲ್ಲಿ ಬೆಳೆದ ಹಣ್ಣು, ತರಕಾರಿ ತಂದುಕೊಟ್ಟು ನಮ್ಮನ್ನು ಕೊಲ್ಲಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ, ನೀವು ಮಾಡಿದ್ದೇನು? ಇದೇನು ಸರಕಾರದ ಅಹಂಕಾರದ ನಡೆ? ಅದೇನು ಹಠ ನಿಮ್ಮದು? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.

ಎಲ್ಲರೂ ಕಳ್ಳರೇ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜಕೀಯ ಪಕ್ಷಗಳು ನಾಟಕ ಆಡುತ್ತಿವೆ. ದೇವನಹಳ್ಳಿ ಭೂ ಹೋರಾಟದ ವಿಚಾರದಲ್ಲಿ ಎಲ್ಲ ಪಕ್ಷಗಳ ನಾಯಕರು ಯಾಕೆ ಮೌನಕ್ಕೆ ಶರಣಾಗಿದ್ದಾರೆ? ಎಲ್ಲರೂ ಕಳ್ಳರೇ. ರೈತರ ಮಗನಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಸಮಸ್ಯೆ ಕೇಳಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭೇಟಿಗೆ ಸಮಯ ನೀಡುವುದಿಲ್ಲ ಎಂದರು.

ಹೋರಾಟ ಒಡೆಯುವ ಪ್ರಯತ್ನವೂ ಸಫಲವಾಗುವುದಿಲ್ಲ. ಹಸಿರು ವಲಯ ಮಾಡುವ ಬೆದರಿಕೆಗೂ ಹೆದರುವುದಿಲ್ಲ. ದೇವನಹಳ್ಳಿ ಭೂ ಹೋರಾಟ ನಿಲ್ಲುವುದಿಲ್ಲ ಎಂದು ಪುನರುಚ್ಚರಿಸಿದ ಪ್ರಕಾಶ್ ರಾಜ್, ಹಿಂದಿನವರು ಮಾಡಿದ ಸಣ್ಣ ಗಾಯವನ್ನು ದೊಡ್ಡದು ಮಾಡಬೇಡಿ ಎಂದು ಸಿದ್ದರಾಮಯ್ಯರಿಗೆ ಮನವಿ ಮಾಡಿದರು.

ಜನ ಚಳವಳಿಗೆ ದ್ರೋಹ ಮಾಡದಿರಿ: ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಮಾತನಾಡಿ, ಸಮಾಜವಾದಿ ಹೋರಾಟದ ಹಿನ್ನೆಲೆಯ ಸಿದ್ದರಾಮಯ್ಯ ಜನ ಚಳವಳಿಗೆ, ನಂಬಿಕೆ ದ್ರೋಹ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ದಿಲ್ಲಿಗೆ ಹೋಗಿ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿರುವುದು ಇವರೇನಾ ನಮ್ಮ ಸಿದ್ದರಾಮಯ್ಯ ಎಂಬ ಅನುಮಾನ ಬಂದಿದೆ ಎಂದರು.

ಬೆಂಗಳೂರಲ್ಲಿ ನಿಮಗೇ ಭೂಮಿ ಯಾಕೇ ಬೇಕು? ಬರಡು ಭೂಮಿ ಕೊಪ್ಪಳ, ಚಿತ್ರದುರ್ಗ, ಯಾದಗಿರಿ, ಕಲಬುರಗಿಯಲ್ಲಿ ಡಿಫೆನ್ಸ್ ಕಾರಿಡಾರ್ ಮಾಡಲಾಗದೇ? ಅದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಿ. ಮಳೆ ಬಂದರೆ ಬೆಂಗಳೂರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಬೆಂಗಳೂರಿನ ಉಳಿವಿಗಾಗಿ ನಮ್ಮ ಹೋರಾಟಕ್ಕೆ ಎಲ್ಲ ನಾಗರಿಕರು ಬೆಂಬಲ ಸೂಚಿಸಬೇಕು ಎಂದು ಹೇಳಿದರು.

ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ವಿಪಕ್ಷ ನಾಯಕರಾಗಿದ್ದ ವೇಳೆ ಸಿದ್ದರಾಮಯ್ಯ ಅವರು ದೇವನಹಳ್ಳಿ ಭೂ ಸ್ವಾಧೀನ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದರು. ಮುಖ್ಯಮಂತ್ರಿಯಾಗಿ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ನುಡಿದಂತೆ ನಡೆಯುವುದೆಂದರೆ ಇದೇನಾ? ದೇವನಹಳ್ಳಿ ಭೂ ಹೋರಾಟ ಸಿದ್ದರಾಮಯ್ಯರಿಂದ ಸೋಲು ಕಂಡುಕೊಂಡಿತು ಅನ್ನಿಸಿಕೊಳ್ಳಬಾರದು. ಚಳವಳಿ ಗೆಲ್ಲಿಸುವ ನೈತಿಕ ಜವಾಬ್ದಾರಿ ಸಿದ್ದರಾಮಯ್ಯರ ಮೇಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ , ಜನಶಕ್ತಿ ಸಿದ್ದರಾಜು, ರೈತ ಮುಖಂಡ ಎ.ಎಲ್.ಕೆಂಪೂಗೌಡ ಮುಂತಾದವರಿದ್ದರು.

ಬಾಕ್ಸ್

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ನಿರ್ಣಯ: ಬಡಗಲಪುರ ನಾಗೇಂದ್ರ

ಮೈಸೂರು: ಕೋಮುವಾದಿಗಳ ವಿರುದ್ಧ ನಮ್ಮ ಹೋರಾಟ ನಿರಂತರ. ಸದ್ಯ ಅಧಿಕಾರಕ್ಕೆ ಬಂದ ನಂತರ ಬೆಳವಣಿಗೆಗಳನ್ನು ಗಮನಿಸಿ ಕಾಂಗ್ರೆಸ್ ಸರಕಾರದ ವಿರುದ್ಧವೂ ಹೋರಾಟಕ್ಕೆ ಸಂಯುಕ್ತ ಹೋರಾಟದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ದೇವನಹಳ್ಳಿಯಲ್ಲಿ ರೈತರನ್ನು ವಶಕ್ಕೆ ಪಡೆದರೆ ಕೈಗಾರಿಕೆ ಉದ್ದೇಶಕ್ಕೆ ಬೆಂಗಳೂರು ಸುತ್ತಮುತ್ತ ವಶಕ್ಕೆ ಪಡೆದು ಖಾಲಿ ಇರುವ ಜಮೀನುಗಳನ್ನು ನಾವು ವಶಕ್ಕೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಬಲಾತ್ಕಾರದ ಭೂ ಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದ್ದರು. ಅಧಿಕಾರಕ್ಕೆ ಬಂದರೆ ಅವಕಾಶ ಕೊಡುವುದಿಲ್ಲ ಎಂದು ಮಾತುಕೊಟ್ಟು ಅಂತಿಮ ಅಧಿಸೂಚನೆ ಹೊರಡಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಅವರಿಗೆ ಜನ ಚಳವಳಿಗಳ ಆಶೀರ್ವಾದ ಇದೆ. ಚಳವಳಿಗಳ ವಿರುದ್ಧವಾಗಿ ನಡೆದರೆ ರಾಜಕೀಯ ಕೊನೆಯಾಗುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News