×
Ad

ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

Update: 2025-05-03 19:42 IST

ಮೈಸೂರು : ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ನಗರದ ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ ಕರೆ ನೀಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರು ವಕ್ಫ್ ತಿದ್ದುಪಡಿ ಕಾಯ್ದೆ-2025ನ್ನು ಒಕ್ಕೊರಲಿನಿಂದ ವಿರೋಧಿಸಿದರು.

ಕೇಂದ್ರ ಸರಕಾರ ಸಂವಿಧಾನ ವಿರೋಧಿಯಾಗಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದನ್ನು ಇಡೀ ದೇಶದ ಮುಸ್ಲಿಮರು ಸಂಪೂರ್ಣವಾಗಿ ವಿರೋಧಿಸಿದ್ದು, ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಮೈಸೂರು ನಗರದ ಉದಯಗಿರಿ, ಎನ್.ಆರ್.ಮೊಹಲ್ಲಾ, ಶಾಂತಿನಗರ, ತಿಲಕ್ ನಗರ, ರಾಜೀವ್ ನಗರ, ಗೌಸಿಯಾನಗರ, ಕಲ್ಯಾಣಗಿರಿ, ಅಜೀಜ್ ಸೇಠ್ ನಗರ, ಶುಭಾಷ್ ನಗರ, ಸಿದ್ದಿಖ್ ನಗರ, ನಂಜನಗೂಡು, ಹುಣಸೂರು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾವೇಶದಲ್ಲಿ ಅಕ್ಬರ್ ಅಲಿ ಸಾಹೇಬ್ ಮಾತನಾಡಿ, "ಸಂವಿಧಾನ ಉಳಿವಿಗಾಗಿ ಈ ಹೋರಾಟ ನಡೆಯುತ್ತಿದೆ. ವಕ್ಫ್‌ಗೆ ಯಾಕೆ ದಾನ ಮಾಡಿದ್ದಾರೆ ಎಂಬುದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕು. ಹಲಾಲ್ ಆಗಿದ್ದರೆ ಮಾತ್ರ ವಕ್ಫ್ ಬೋರ್ಡ್‌ ಭೂಮಿ ಸಂಪತ್ತನ್ನು ಪಡೆಯಲಿದೆ" ಎಂದರು.

ʼವಕ್ಫ್ ಆಸ್ತಿಯನ್ನು ಸ್ವಾತಂತ್ರ್ಯ ಬಂದಾಗಿನಿಂದ ದುರ್ಬಳಕೆ ಮಾಡಲಾಗುತ್ತಿದೆ. ಈ ಆಸ್ತಿಯನ್ನು ಸರಕಾರ, ಇತರೆ ಸಂಸ್ಥೆಗಳು ಮತ್ತು ಮುಸ್ಲಿಮರು ಒತ್ತುವರಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಬಂದ ಎಲ್ಲಾ ಸರಕಾರಗಳು ಕೂಡ ವಕ್ಫ್ ಆಸ್ತಿ ಉಳಿವಿಗೆ ನೋಟಿಸ್ ನೀಡಿವೆ. ನೋಟಿಸ್ ನೀಡಿದ ಮಾತ್ರಕ್ಕೆ ಮಾಲೀಕತ್ವ ವಶಕ್ಕೆ ಪಡೆಯುವುದಲ್ಲ. ಇದರ ಸಾಧಕ-ಬಾಧಕ ನೋಡಿ ವಕ್ಫ್ ಆಸ್ತಿಯೇ ಎಂದು ಪರಿಶೀಲಿಸುವುದಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ಕೋಮು ಬಣ್ಣ ಕಟ್ಟಿದವುʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼವಕ್ಫ್ ಆಸ್ತಿ ಕಬಳಿಸಿಕೊಳ್ಳಲು ಕೇಂದ್ರ ಸರಕಾರ ಹಗಲು ದರೋಡೆ ಮಾಡಲು ಹೊರಟಿದೆ. ವಕ್ಫ್ ಆಸ್ತಿ ತಿದ್ದುಪಡಿ ಮುಸ್ಲಿಮರ ಸುರಕ್ಷತೆಗೆ ಎಂಬ ಹಸಿ ಸುಳ್ಳನ್ನು ಹೇಳುತ್ತಿದೆ. ಸಂಸತ್ತಿನಲ್ಲಿ ಸುಳ್ಳುಗಳನ್ನು ಹೇಳುವುದಲ್ಲದೆ,  ನ್ಯಾಯಾಲಯಕ್ಕೂ ಸುಳ್ಳು ಅಫಿಡವಿಟ್ ಸಲ್ಲಿದೆʼ ಎಂದು ಹೇಳಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನಾ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.

ನಂತರ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಒಳಗಾಗಿ ಮೃತಪಟ್ಟವರಿಗೆ ಮೌನಾಚರಣೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಮೌಲಾನ ಜಕಾವುಲ್ಲಾ, ಮೌಲಾನ ಅಯೂಬ್ ಅನ್ಸಾರಿ, ಮೌಲಾನ ಕಲೀಂ ಉರ್ ರೆಹಮಾನ್, ಮೌಲಾನ ಇಬ್ರಾಹಿಂ ಸಾಬ್, ಖಾಝಿ ಉಸ್ಮಾನ್ ಷರೀಫ್, ಅಧ್ಯಕ್ಷ ಸೈಯದ್ ತಾಜ್ ಉದ್ದೀನ್ ಮಿಫ್ತಾಹಿ, ಅಹಲೇದ್ದೀಸ್ ಇಮಾಮ್, ಮೌಲಾನ ಹರ್ಷದ್, ಅಬ್ದುಲ್ ಅಜೀಝ್ ಚಾಂದ್ ಸಾಹೇಬ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಾಗೃತ ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ಎಚ್.ವಿ.ವಾಸು ವೇದಿಕೆಯಲ್ಲಿದ್ದರು.

 

 

ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಯೂಬ್ ಖಾನ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್,‌ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಮಾಜಿ ಮೇಯರ್ ಆರಿಫ್ ಹುಸೇನ್, ಮೈಸೂರು ಜಿಲ್ಲಾ ವಕ್ಫ್ ಬೋರ್ಡ್‌ ಮಾಜಿ ಅಧ್ಯಕ್ಷ ಶಬ್ಬೀರ್ ಅಹ್ಮದ್‌ ಖಾನ್, ಇರ್ಷಾದ್ ಬೇಗ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸೌಹದ್, ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹ್ಮದ್‌, ಗೋಪಾಲ್,  ಸೇರಿದಂತೆ ಸಾವಿರಾರು ಜನರು ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದರು.

ಮನುವಾದಿಗಳನ್ನು ಡಾ.ಅಂಬೇಡ್ಕರ್ ಅವರು ಸಹ ವಿರೋಧ ಮಾಡಿದ್ದರು. ಶ್ರೇಣಿಕೃತ ಸಮಾಜ ಒಪ್ಪಿಕೊಂಡಿರುವವರು ಭಾರತದ ಆತ್ಮಕ್ಕೆ ಪೆಟ್ಟುಕೊಡುತ್ತಿದ್ದಾರೆ. ಸಂಕುಚಿತ ಮನೋಭಾವದಲ್ಲಿ ಆಡಳಿತ ನಡೆಸುತ್ತಿರುವವರಿಗೆ ಏಕತೆ ಸಂದೇಶ ನೀಡಲು ಹೋರಾಟ ನಡೆಯುತ್ತಿದೆ. ವಕ್ಫ್ ವೈಯಕ್ತಿಕ ಕಾನೂನನ್ನು ರಕ್ಷಣೆ ಮಾಡಲು ನಡೆಸುತ್ತಿರುವ ಹೋರಾಟಕ್ಕೆ ರೈತ ಸಂಘದ ಸಂಪೂರ್ಣ ಬೆಂಬಲ ಇದೆ.

-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರೈತ ಸಂಘ.

"ರೈತರು, ದಲಿತರು, ಮುಸ್ಲಿಮರು ಸೇರಿದಂತೆ ಎಲ್ಲರ ಹೋರಾಟದಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. 2014ರಲ್ಲಿ ಸಂವಿಧಾನ ಬುಡಮೇಲು ಮಾಡುವಂತಹ ಸರಕಾರ ಅಧಿಕಾರಕ್ಕೆ ಬಂತು. 2019ರಲ್ಲಿ ಸಿಎಎ, ಎನ್.ಆರ್.ಸಿ ತಂದರು. ರೈತ ವಿರೋಧಿ ಕಾನೂನುಗಳು ಜಾರಿಗೆ ಬಂದವು. ಈ ಸರಕಾರ ಬಂದಾಗಿನಿಂದ ನಿರಂತರ ಹೋರಾಟ ನಡೆಯುತ್ತಿದೆ. ವಕ್ಫ್ ಉಳಿವಿಗೆ ಈಗ ಮತ್ತೊಂದು ದೊಡ್ಡ ಹೋರಾಟ ದೇಶದಾದ್ಯಂತ ನಡೆಯುತ್ತಿದೆ. ಫ್ಯಾಶಿಸ್ಟ್ ಮನಸ್ಸುಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ನಾವು ಸಮಾಜ ಕಟ್ಟುವ ಕೆಲಸ ಮಾಡೋಣ, ವೈಯಕ್ತಿಕ ಕಾನೂನು ರಕ್ಷಣೆಗೆ ಮುಂದಾಗೋಣ"

-ಡಾ.ಎಚ್.ವಿ.ವಾಸು, ಜಾಗೃತ ಕರ್ನಾಟಕ ರಾಜ್ಯಾಧ್ಯಕ್ಷ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News