×
Ad

ʼರೈತ ದಸರಾʼಗೆ ಚಾಲನೆ ನೀಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

Update: 2025-09-26 18:09 IST

ಮೈಸೂರು : ಈ ಬಾರಿ ರೈತ ದಸರಾದಲ್ಲಿ ರೈತರಿಗೆ ಹೆಚ್ಚು ಅವಕಾಶ ನೀಡಬೇಕು, ರೈತರ ಬದುಕಿಗೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

ಮೈಸೂರು ದಸರಾ ಅಂಗವಾಗಿ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ, ರೈತ ದಸರಾ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ದಸರಾ ರಾಜ್ಯ ಮತ್ತು ರಾಷ್ಟ್ರ ಮಟ್ಟ ಅಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ ಎಂದರು.

ಪಶುಸಂಗೋಪನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಅವರು ಮಾತನಾಡಿ, ರೈತ ದಸರಾದಲ್ಲಿ ಹೊಸ ಹೊಸ ತಂತ್ರಜ್ಞಾನದ ಪರಿಚಯ ಮಾಡುವುದು, ಅವುಗಳ ಉಪಯೋಗದ ಬಗ್ಗೆ ತಿಸುವಂತಹ ಕೆಲಸ ಮಾಡುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.

ಕೃಷಿ ದಿನ ಕಳೆದಂತೆ ದುಬಾರಿಯಾಗುತ್ತಿದ್ದು, ಈ ವ್ಯವಸಾಯದ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಮೂಲಕ ಉಪಯೋಗವನ್ನು ರೈತರು ಪಡೆದುಕೊಳ್ಳಬಹುದಾಗಿದ್ದು, ರೈತರಿಗೆ ಕೃಷಿಯಲ್ಲಿ ಆಧುನಿಕ ಬದ್ಧತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಬಹಳ ಮುಖ್ಯ ಎಂದರು.

ಅರಮನೆ ಕೋಟೆ ಆಂಜನೇಯ ಮೈದಾನದಿಂದ ದೇವರಾಜ ಅರಸು ರಸ್ತೆಯ ಮೂಲಕ ಜೆ.ಕೆ ಗ್ರೌಂಡ್ ವರೆಗೂ ಸಾಗಿದ ರೈತ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು.

ಈ ಬಾರಿ ವಿಶೇಷವಾಗಿ ನಂದಿ ಧ್ವಜ, ನಗಾರಿ ಹಾಗೂ ತಮಟೆ, ವೀರಗಾಸೆ, ವೀರಭದ್ರ ನೃತ್ಯ, ಖಡ್ಗ ಪ್ರದರ್ಶನ, ಕಂಸಾಳೆ ನೃತ್ಯ, ಚಿಲಿಪಿಲಿ ಗೊಂಬೆ, ನಾದಸ್ವರ ಪೂಜೆ ಕುಣಿತ ಜೊತೆಗೆ ವಿವಿಧ ತಳಿಯ ಎತ್ತುಗಳು, ಕರುಗಳು, ಆಂಧ್ರ ತಳಿಯಾದ ಪುಂಗನೂರು ಎತ್ತು, ಹೋರಿ, ಹಳ್ಳಿಕಾರ್ ತಳಿ , ಬಂಡೂರು ಕುರಿಗಳು, ಎತ್ತಿನಗಾಡಿ ಎತ್ತುಗಳನ್ನು ಕರೆಸಲಾಗಿತ್ತು. ಹೊಸ ಹೊಸ ಕೃಷಿ ತಂತ್ರಜ್ಞಾನಗಳಾದ ಬೆಳೆ ಸಿಂಪಡಿಸುವ ಡ್ರೋನ್ ತಂತ್ರಜ್ಞಾನ ಯಂತ್ರ, ಭತ್ತ ನಾಟಿ ಯಂತ್ರ, ಇಪ್ಕೋ ನ್ಯಾನೋ ಯೂರಿಯಾ ಲಿಕ್ವಿಡ್, ಸ್ವರಾಜ್ ಯಂತ್ರ, ಕಿಸಾನ್ ಬಂಡಿ, ಪವರ್ ಇಂಟರ್ ಕಲ್ಟಿವೇಟರ್ ಯಂತ್ರ, ,ಕಳೆ ತೆಗೆಯುವ ಯಂತ್ರ, ಹೈಟೆಕ್ ಹಾರ್ವೆಸ್ಟರ್ ಹಬ್ ಬಹು ಬೆಳೆಯ ಒಕ್ಕಣೆ ಯಂತ್ರ, ಭತ್ತದ ಬೇಲರ್, ಕಬ್ಬು ನಾಟಿ ಯಂತ್ರ, ಕಬ್ಬು ಕಟಾವು ಯಂತ್ರ ತೋಟಗಾರಿಕೆ ಇಲಾಖೆಯ ಟ್ಯಾಬ್ಲೋಗಳಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತು.

ಈ ಸಂಧರ್ಭದಲ್ಲಿ ಶಾಸಕ ಕೆ. ಹರೀಶ್ ಗೌಡ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿ ಸಿದ್ದೇಗೌಡ, ರೈತ ದಸರಾದ ಕಮಿಟಿಯ ಅಧ್ಯಕ್ಷರಾದ ಯೋಗೇಶ್ ಹಾಗೂ ರೈತ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News