×
Ad

ಸಂವಿಧಾನ ಬದಲಾದರೆ ದೇಶದ ದಲಿತರು, ಶೂದ್ರರು, ಮಹಿಳೆಯರು ಮತ್ತು ಶ್ರಮಿಕ ವರ್ಗಗಳಿಗೆ ಉಳಿಗಾಲವಿಲ್ಲ: ಸಿಎಂ ಸಿದ್ದರಾಮಯ್ಯ

Update: 2024-04-02 18:10 IST

Photo: fb.com/Siddaramaiah

ಮೈಸೂರು : ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ. ನಮ್ಮ ಸಂವಿಧಾನದ ಸ್ವರೂಪ ಬದಲಾಯಿಸಿ ದೇಶದ ದುಡಿಯುವ ವರ್ಗಗಳಿಗೆ ವಂಚಿಸಿದರೆ ದೇಶದ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 45 ಕ್ಕೂ ಹೆಚ್ಚು ಮಂದಿ ಹೋಬಳಿ ಮಟ್ಟದ ಮುಖಂಡರುಗಳನ್ನು ಹಾಗೂ ಮಾಜಿ ಕೇಂದ್ರ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಆತ್ಮೀಯರು ಮತ್ತು ಸಂಬಂಧಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದರು.

ನಾನು ಮುಖ್ಯಮಂತ್ರಿಯಾಗಿರುವುದಕ್ಕೆ, ಮೋದಿ ಪ್ರಧಾನಮಂತ್ರಿಯಾಗಿರುವುದಕ್ಕೆ ನಮ್ಮ ಸಂವಿಧಾನ ಕಾರಣ. ಬಿಜೆಪಿ ನಮ್ಮ ಈ ಸಂವಿಧಾನ ಬದಲಾವಣೆಯ ಅಜೆಂಡಾ ಇಟ್ಟುಕೊಂಡಿದೆ. ಈ ಸಂವಿಧಾನ ಬದಲಾದರೆ ದೇಶದ ದಲಿತರು, ಶೂದ್ರರು, ಮಹಿಳೆಯರು ಮತ್ತು ಶ್ರಮಿಕ ವರ್ಗಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ನಾವೆಲ್ಲಾ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂದರೆ ಬಿಜೆಪಿ ಸೋಲಬೇಕು ಎನ್ನುವ ಪಣ ತೊಡಿ ಎಂದರು.

ಶೂದ್ರರಿಗೆ ಬಿಜೆಪಿ- ಆರೆಸ್ಸೆಸ್‌ ಗರ್ಭಗುಡಿಯೊಳಗೆ ಪ್ರವೇಶವೇ ಇಲ್ಲ

ಶೂದ್ರರಿಗೆ ಬಿಜೆಪಿ- ಆರೆಸ್ಸೆಸ್‌ ನ ಗರ್ಭಗುಡಿಯೊಳಗೆ ಪ್ರವೇಶವೇ ಇಲ್ಲ. ಶೂದ್ರರು, ದಲಿತರನ್ನು ಕೇವಲ ಬಳಸಿಕೊಳ್ಳುತ್ತಾರೆ. ಆದರೆ ಆರೆಸ್ಸೆಸ್‌ ನ ಒಳಗೆ ಪ್ರವೇಶ ಕೊಡುವುದಿಲ್ಲ. ಆದ್ದರಿಂದ ಆರೆಸ್ಸೆಸ್‌ ಕಡೆಗೆ ತಲೆ ಕೂಡ ಹಾಕಬೇಡಿ ಎಂದು ಕರೆ ನೀಡಿದರು.

ಬಿಜೆಪಿ- ಆರೆಸ್ಸೆಸ್‌ ಮೀಸಲಾತಿಯನ್ನೂ ವಿರೋಧಿಸುತ್ತದೆ

ದಲಿತರು, ಶೂದ್ರರು, ಹಿಂದುಳಿದವರ ವಿರೋಧಿಯಾದ ಬಿಜೆಪಿ- ಆರೆಸ್ಸೆಸ್‌ ಮೀಸಲಾತಿಯನ್ನೂ ವಿರೋಧಿಸುತ್ತದೆ. ಮಂಡಲ್ ವರದಿ ವೇಳೆ ಶೂದ್ರರು ಸಾವಿಗೆ ಕಾರಣರಾದವರು, ನಮ್ಮವರು ಬೆಂಕಿ ಹಚ್ಚಿಕೊಂಡು ಸಾಯುವಂತೆ ಮಾಡಿದವರು ಇವರೇ ತಾನೇ?. ನಮ್ಮ ಶತ್ರುಗಳ ಜತೆಗೆ ಈ ದೇಶದ ಶೂದ್ರರು, ದಲಿತರು, ಹಿಂದುಳಿದವರು ಏಕೆ ಹೋಗಬೇಕು ಎಂದು ಪ್ರಶ್ನಿಸಿದರು.

ರಾಷ್ಟ್ರಮಟ್ಟದಲ್ಲೂ ನಮ್ಮ ಕಾರ್ಯಕ್ರಮ ಜಾರಿ

ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕಡಿಮೆ ಇದೆ. ನಾವು ಅಧಿಕಾರಕ್ಕೆ ಬಂದರೆ ನಾವು ರಾಜ್ಯದಲ್ಲಿ ತಂದಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಪರವಾದ ಕಾನೂನುಗಳನ್ನು ರಾಷ್ಟ್ರಮಟ್ಟದಲ್ಲೂ ಜಾರಿಗೆ ತರಲಾಗುವುದು. ಈ ಬಗ್ಗೆ ರಾಹುಲ್ ಗಾಂಧಿ ಅವರ ಜತೆಗೂ ಮಾತನಾಡಿ ಪ್ರಣಾಳಿಕೆಯಲ್ಲಿ ಸೇರಿಸಲು ಹೇಳಿದ್ದೇನೆ  ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News