ಕೇಂದ್ರ, ರಾಜ್ಯ ಪೊಲೀಸ್ ಪಡೆಗಳ 1,090 ಮಂದಿಗೆ ರಾಷ್ಟ್ರಪತಿ ಪದಕ
ಸಾಂದರ್ಭಿಕ ಚಿತ್ರ | PC : REUTERS
ಹೊಸದಿಲ್ಲಿ, ಆ. 14: ಕೇಂದ್ರ ಹಾಗೂ ರಾಜ್ಯದ ಪೊಲೀಸ್ ಪಡೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 1,090 ಪೊಲೀಸರಿಗೆ ಕೇಂದ್ರ ಸರಕಾರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಗುರುವಾರ ಸೇವಾ ಪದಕವನ್ನು ಘೋಷಿಸಿದೆ.
223 ಮಂದಿಗೆ ಶೌರ್ಯ ಪದಕ, 99 ಮಂದಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಹಾಗೂ 758 ಮಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪದಕಗಳ ಪಟ್ಟಿಯಲ್ಲಿ ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಸುಧಾರಣಾ ಸೇವೆ ಇಲಾಖೆಯ ಸಿಬ್ಬಂದಿ ಕೂಡ ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಶೌರ್ಯ ಪದಕಗಳಲ್ಲಿ, ಗರಿಷ್ಠ 152 ಪದಕಗಳನ್ನು ಜಮ್ಮು ಹಾಗೂ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರಿಗೆ, 54 ಪದಕಗಳನ್ನು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಿಯೋಜಿಸಲಾದ ಪಡೆಯ ಪೊಲೀಸರಿಗೆ, 3 ಪದಕಗಳನ್ನು ಈಶಾನ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಹಾಗೂ 24 ಪದಕಗಳನ್ನು ಇತರ ವಲಯಗಳ ಪೊಲೀಸರಿಗೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.