×
Ad

ಗ್ರಾಮ ಮುಖ್ಯಸ್ಥೆಯ ಪುತ್ರಿಯನ್ನು ವಿವಾಹವಾದ ದಲಿತ ಯುವಕ; ಗ್ರಾಮ ನಿವಾಸಿಗಳಿಂದ ಕುಟುಂಬಕ್ಕೆ ಬಹಿಷ್ಕಾರ

Update: 2023-08-24 21:22 IST

ಸಾಂದರ್ಭಿಕ ಚಿತ್ರ (PTI)

ರಾಂಚಿ: ದಲಿತ ಯುವಕನೋರ್ವ ಗ್ರಾಮ ಮುಖ್ಯಸ್ಥೆಯ ಪುತ್ರಿಯನ್ನು ವಿವಾಹವಾದ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಘಟನೆ ಧನ್‌ಬಾದ್ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಬರೋರಾ ಪೊಲೀಸ್ ಠಾಣಾ ವ್ಯಾಪ್ತಿಯ ದರಿದಾ ಗ್ರಾಮದಲ್ಲಿ ನಡೆದಿದೆ.

‘‘ಗ್ರಾಮಸ್ಥರು ಸಾರ್ವಜನಿಕ ಟ್ಯಾಂಕ್‌ನಿಂದ ನೀರು ತರುವುದಕ್ಕೆ, ಗ್ರಾಮದ ಕೊಳದಲ್ಲಿ ಸ್ನಾನ ಮಾಡುವುದಕ್ಕೆ ತಡೆ ಒಡಿದ್ದಾರೆ. ಅಲ್ಲದೆ, ಪಡಿತರ ಹಾಗೂ ಇತರ ದಿನನಿತ್ಯದ ಅವಶ್ಯಕ ಸಾಮಗ್ರಿಗಳನ್ನು ಸ್ಥಳೀಯ ಅಂಗಡಿಯಿಂದ ತರುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ’’ ಎಂದು ದಲಿತ ಕುಟುಂಬ ಆರೋಪಿಸಿದೆ.

‘‘ನನ್ನ ಪುತ್ರ ಹಾಗೂ ಆತನ ಪತ್ನಿ ಗ್ರಾಮಕ್ಕೆ ಹಿಂದಿರುಗಲು ಅವಕಾಶ ನೀಡಿದರೆ ಭೀಕರ ಪರಿಣಾಮ ಎದುರಿಸಬೇಕಾದೀತು ಎಂದು ಗ್ರಾಮಸ್ಥರು ನಮ್ಮ ಮನೆಗೆ ಬಂದು ಬೆದರಿಕೆ ಒಡ್ಡಿದ್ದಾರೆ’’ ಎಂದು ಯುವಕನ ತಾಯಿ ಸುಮಿತ್ರಾ ದೇವಿ ಹೇಳಿದ್ದಾರೆ.

ದಲಿತ ಕುಟುಂಬಕ್ಕೆ ಸೇರಿದ ಯುವಕ ಕರಣ್ ಕಾಲಿಂದಿ ದರಿಡಾ ಪಂಚಾಯತ್‌ನ ಮುಖ್ಯಸ್ಥೆ ಪಾರ್ವತಿ ದೇವಿ ಅವರ ಪುತ್ರಿಯನ್ನು ವಿವಾಹವಾಗಿ ಧನ್‌ಬಾದ್ ಮಹಿಳಾ ಪೊಲೀಸ್ ಠಾಣೆಗೆ ತಲುಪಿ ರಕ್ಷಣೆ ಕೋರಿದ ಬಳಿಕ ಈ ಘಟನೆ ಬಹಿರಂಗಗೊಂಡಿದೆ.

‘‘ಪೊಲೀಸರು ಎರಡೂ ಕುಟುಂಬವನ್ನು ಕರೆಸಿ ಸಮಾಲೋಚನೆ ನಡೆಸಿದ್ದಾರೆ. ಆದರೆ, ಒಮ್ಮತ ಮೂಡಲಿಲ್ಲ. ಬಳಿಕ ಗ್ರಾಮದ ಜನರು ನಮಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿದರು’’ ಎಂದು ದಲಿತ ಕುಟುಂಬ ಆರೋಪಿಸಿದೆ.

ಅನಂತರ ತಮಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದಾಗಿ ಆರೋಪಿಸಿ ದಲಿತ ಕುಟುಂಬ ದೂರು ದಾಖಲಿಸಿದೆ. ಆದರೆ, ಗ್ರಾಮ ಮುಖ್ಯಸ್ಥೆ ಪಾರ್ವತಿ ದೇವಿ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.

ಸಂತ್ರಸ್ತ ಕುಟುಂಬದಿಂದ ದೂರು ಸ್ವೀಕರಿಸಲಾಗಿದೆ ಎಂದು ಬರೋರಾ ಪೊಲೀಸ್ ಠಾಣೆಯ ಉಸ್ತುವರಿ ಅಧಿಕಾರಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News