×
Ad

ಅಸ್ಸಾಂ: ಶಾಲಾ ಮಕ್ಕಳ ಸಹಿತ 18 ಮಂದಿಯನ್ನು ಬಲಿ ಪಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್‌

Update: 2023-08-24 17:57 IST

ಹೊಸದಿಲ್ಲಿ: ಹದಿಮೂರು ಮಂದಿ ಶಾಲಾ ಮಕ್ಕಳು ಸೇರಿದಂತೆ 18 ಜನರನ್ನು ಬಲಿ ಪಡೆದ ಅಸ್ಸಾಂನ ಧೇಮಜಿ ಎಂಬಲ್ಲಿ 2004ರಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಎಲ್ಲಾ ಆರು ಮಂದಿ ಆರೋಪಿಗಳನ್ನು ಇಂದು ಗುವಹಾಟಿ ಹೈಕೋರ್ಟ್‌ ಖುಲಾಸೆಗೊಳಿಸಿದೆ. 2004ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ನಡೆದ ಈ ಸ್ಫೋಟ ಪ್ರಕರಣದಲ್ಲಿ ಆರು ಮಂದಿಯನ್ನು 2019ರಲ್ಲಿ ದೋಷಿ ಎಂದು ಘೋಷಿಸಲಾಗಿತ್ತು.

ಈ ಬಾಂಬ್‌ ದಾಳಿಗೆ ಉಲ್ಫಾ (ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ) ಹೊಣೆ ಹೊತ್ತುಕೊಂಡಿತ್ತು. ಈ ದಾಳಿಯಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದೀಗ ಅಪರಾಧಿಗಳನ್ನು ಖುಲಾಸೆಗೊಳಿಸಿರುವುದು ಸಂತ್ರಸ್ತರ ಕುಟುಂಬಗಳಲ್ಲಿ ಆಕ್ರೋಶ ಮೂಡಿಸಿದೆ.

2019ರಲ್ಲಿ ಧೇಮಜಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಈ ಸ್ಫೋಟ ಪ್ರಕರಣ ಸಂಬಂಧ ಲೀಲಾ ಗೊಗೊಯಿ, ದೀಪಾಂಜಲಿ ಬುರಗೊಹೈನ್‌, ಮುಹಿ ಹಂಡೀಖ್‌ ಮತ್ತು ಜತಿನ್‌ ದುಬೋರಿ ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ ಇನ್ನಿಬ್ಬರಾದ ಪ್ರಶಾಂತ ಭುಯಾನ್‌ ಮತ್ತು ಹೆಮೆನ್‌ ಗೊಗೊಯಿ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಆದರೆ ಅವರೆಲ್ಲರೂ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಕದ ತಟ್ಟಿದ್ದರು. ಬೆನಿಫಿಟ್‌ ಆಫ್‌ ಡೌಟ್‌ ಆಧಾರದ ಮೇಲೆ ಆರೂ ಜನರನ್ನು ಹೈಕೋರ್ಟ್‌ ಖುಲಾಸೆಗೊಳಿಸಿದೆ. ಅವರು ಶಾಮೀಲಾಗಿಲ್ಲ ಎಂದು ನ್ಯಾಯಾಲಯ ಹೇಳದೇ ಇದ್ದರೂ ಯಾವುದೇ ಸಂಶಯಕ್ಕೆ ಎಡೆಕೊಡದ ರೀತಿಯಲ್ಲಿ ಅಪರಾಧವನ್ನು ಸಾಬೀತುಪಡಿಸಬೇಕಿದೆ. ಆದರೆ ಪ್ರಾಸಿಕ್ಯೂಶನ್‌ ಅದನ್ನು ಮಾಡಿಲ್ಲ,” ಎಂದು ಆರೋಪಿಗಳ ಪರ ವಕೀಲ ಅಭಿಜಿತ್‌ ಖನಿಕರ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News